ಶ್ರೀರಂಗಪಟ್ಟಣ : ಕೆಆರ್ಎಸ್ ಜಲಾಶಯದ ನೀರಿನ ಮಟ್ಟ ಭಾನುವಾರ 84.22 ಅಡಿಗೆ ಕುಸಿದಿದೆ. ನೀರಿನ ಮಟ್ಟ ಮತ್ತಷ್ಟು ಕುಸಿದರೆ ಬೆಳೆಗೆ ನೀರು ದೊರೆಯುವುದು ಅನುಮಾನವಾಗಿದ್ದು, ರೈತರಲ್ಲಿ ಆತಂಕ ಮನೆ ಮಾಡಿದೆ.
ಗರಿಷ್ಠ 124.80 ಅಡಿ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯಕ್ಕೆ ಭಾನುವಾರ 438 ಕ್ಯುಸೆಕ್ ಒಳಹರಿವಿತ್ತು. ನದಿ ಮತ್ತು ನಾಲೆಗಳಿಗೆ ಒಟ್ಟು 3,712 ಕ್ಯುಸೆಕ್ ನೀರನ್ನು ಹರಿಸಲಾಗುತ್ತಿದೆ. ಕಳೆದ ವರ್ಷ ಇದೇ ದಿನ ಜಲಾಶಯದಲ್ಲಿ 103.8 ಅಡಿ ನೀರಿತ್ತು. 12,488 ಕ್ಯುಸೆಕ್ ಒಳ ಹರಿವು ಮತ್ತು 2,417 ಕ್ಯುಸೆಕ್ ಹೊರ ಹರಿವು ದಾಖಲಾಗಿತ್ತು.
ಇಲ್ಲಿ ನೀರಿನ ಮಟ್ಟ 74 ಅಡಿಗೆ ಕುಸಿದರೆ, ಆ ಬಳಿಕ ಕುಡಿಯುವ ಉದ್ದೇಶಕ್ಕಷ್ಟೇ ನೀರನ್ನು ಬಳಸಲಾಗುತ್ತದೆ. ಕೃಷಿ ಉದ್ದೇಶಕ್ಕೆ ನೀರು ದೊರೆಯುವುದಿಲ್ಲ. ಮಳೆಯ ಕೊರತೆಯಿಂದಾಗಿ ದಿನೇ ದಿನೇ ನೀರಿನ ಮಟ್ಟ ಕಡಿಮೆಯಾಗುತ್ತಿರುವ ಕಾರಣ ಮುಂದಿನ ಬೆಳೆಗೆ ನೀರು ದೊರೆಯುವುದೇ ಎಂಬ ಪ್ರಶ್ನೆ ರೈತರನ್ನು ಕಾಡುತ್ತಿದೆ. ಮಳೆ ಬಿದ್ದು ಜಲಾಶಯ ತುಂಬಿದರಷ್ಟೇ ಬೆಳೆಗೆ ನೀರು ಹರಿಸಲಾಗುವುದು ಎಂದು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ತಿಳಿಸಿರುವುದು ರೈತರನ್ನು ಆತಂಕಕ್ಕೆ ದೂಡಿದೆ.
`ಒಟ್ಟು 49 ಟಿಎಂಸಿ ಅಡಿ ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಸದ್ಯ 12.77 ಟಿಎಂಸಿ ಅಡಿಗಳಷ್ಟು ಮಾತ್ರ ನೀರಿದೆ. ಕುಡಿಯುವ ಉದ್ದೇಶಕ್ಕೆ ನೀರನ್ನು ಉಳಿಸಬೇಕಾಗಿದೆ. ಹಾಗಾಗಿ ಬೆಳೆಗಳಿಗೆ ಮುಂದಿನ ಒಂದು ವಾರದವರೆಗೆ ಮಾತ್ರ ನೀರು ಹರಿಸಿ ಬಳಿಕ ನಿಲ್ಲಿಸಲಾಗುವುದು’ ಎಂದು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ತಿಳಿಸಿದರು.