ಕಾಂಗೋ:- ಕಾಂಗೋ ದೇಶದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಸಂಭವಿಸಿದ ಹಠಾತ್ ಪ್ರವಾಹ ಮತ್ತು ಭೂಕುಸಿತದ ಪರಿಣಾಮ ಸಾವನ್ನಪ್ಪಿರುವವರ ಸಂಖ್ಯೆ 443ಕ್ಕೆ ಏರಿಕೆಯಾಗಿದೆ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ವಿಶ್ವಸಂಸ್ಥೆಯ ಮಾನವತಾವಾದಿ ಗುಂಪು ಹೇಳಿದೆ.
ಭೀಕರ ಪ್ರವಾಹ ಮತ್ತು ಭೂಕುಸಿತಕ್ಕೆ ಕಾರಣವಾದ ಮೇ ತಿಂಗಳ ಆರಂಭದಲ್ಲಿ ಸುರಿದ ಜಡಿ ಮಳೆಯಿಂದ ನೂರಾರು ಜನರು ಗಾಯಗೊಂಡಿದ್ದಾರೆ ಮತ್ತು ಅನೇಕರು ನಾಪತ್ತೆಯಾಗಿದ್ದಾರೆ ಎಂದು ವಿಶ್ವಸಂಸ್ಥೆಯ ಮಾನವೀಯ ವ್ಯವಹಾರಗಳ ಸಮನ್ವಯ (ಔಅಊಂ) ಕಚೇರಿ ಮಂಗಳವಾರ ಮಾಹಿತಿ ನೀಡಿದೆ.
ದುರಂತದಲ್ಲಿ ಸುಮಾರು 3,000 ಕ್ಕೂ ಹೆಚ್ಚು ಮನೆಗಳು ಮತ್ತು 9,000 ಕ್ಕೂ ಹೆಚ್ಚು ಶಾಲೆಗಳು ಹಾನಿಗೊಳಗಾಗಿವೆ. ಪ್ರವಾಹ ಪೀಡಿತ ಸಮುದಾಯಗಳಿಗೆ ಮಾನವತಾವಾದಿಗಳು ಪ್ರತಿದಿನ 50,000 ಲೀಟರ್ಗಿಂತಲೂ ಹೆಚ್ಚು ಶುದ್ಧ ನೀರನ್ನು ಒದಗಿಸಿದ್ದಾರೆ ಎಂದು ಔಅಊಂ ಅಂಕಿಅಂಶ ನೀಡಿದೆ.
ಕಾಂಗೋದ ಪೂರ್ವಭಾಗದಲ್ಲಿ ಮೇ ತಿಂಗಳ ಆರಂಭದಲ್ಲಿ ಭಾರಿ ಮಳೆ ಸುರಿದಿತ್ತು. ಇದರ ಪರಿಣಾಮ ನದಿಗಳು ಏಕಾಏಕಿ ಉಕ್ಕಿ ಹರಿದಿದ್ದು, ಬುಶುಶು ಮತ್ತು ನ್ಯಾಮುಕುಬಿ ಗ್ರಾಮಗಳು ಮುಳುಗಿ ಹೋಗಿದ್ದವು. ಈ ಪ್ರದೇಶದಲ್ಲಿ ನದಿಗಳಿಗೆ ಅಡ್ಡಲಾಗಿ ನಿರ್ಮಿಸಿರುವ ಚಿಕ್ಕ ಅಣೆಕಟ್ಟುಗಳು ವಿಪರೀತ ಮಳೆಯ ಆರ್ಭಟವನ್ನು ಎದುರಿಸಲಾಗದೆ ಒಡೆದು ಹೋಗಿದ್ದವು. ಇದರಿಂದಾಗಿ ಅನೇಕ ಹಳ್ಳಿಗಳು ಜಲಾವೃತವಾಗಿದ್ದು, ಕೃಷಿ ಬೆಳೆಗಳಿಗೆ ಅಪಾರ ಹಾನಿಯಾಗಿದೆ.