ಮಂಡ್ಯ: ಕಳೆದ ಐದು ವರ್ಷಗಳಲ್ಲಿಇದೇ ಮೊದಲ ಬಾರಿಗೆ ಕೆಆರ್ಎಸ್ ಜಲಾಶಯದ ನೀರಿನ ಮಟ್ಟ ತೀರಾ ಕಡಿಮೆಯಾಗಿದೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಮಡಿಕೇರಿ ಸೇರಿದಂತೆ ವೈನಾಡು ಪ್ರದೇಶದಲ್ಲಿ ಮಳೆಯಾಗದಿದ್ದರೆ ಮುಂಗಾರು ಹಂಗಾಮಿನ ಬೆಳೆಗೆ ಸೇರಿದಂತೆ ಕುಡಿಯುವ ನೀರಿಗೂ ತೊಂದರೆ ಎದುರಾಗುವ ಸಾಧ್ಯತೆಯಿದೆ.
ಕನ್ನಂಬಾಡಿಕಟ್ಟೆಗೆ ನೀರು ಬರುವುದೇ ಕಾವೇರಿ, ಹೇಮಾವತಿ ಮತ್ತು ಲಕ್ಷ್ಮಣತೀರ್ಥ ನದಿಗಳಿಂದ. ಕೊಡಗು, ಹಾಸನ ಹಾಗೂ ವೈನಾಡು ಪ್ರದೇಶಗಳಲ್ಲಿ ಉತ್ತಮ ಮಳೆಯಾದರೆ ಈ ಮೂರು ನದಿಗಳ ಮೂಲಕ ಕೆಆರ್ಎಸ್ ಜಲಾಶಯಕ್ಕೆ ನೀರು ಹರಿದು ಬರುತ್ತದೆ. ತುರ್ತು ಸಂದರ್ಭದಲ್ಲಿ ಕೊಡಗಿನ ಹಾರಂಗಿ, ಹಾಸನದ ಗೊರೂರು ಜಲಾಶಯದಿಂದಲೂ ಕಾವೇರಿ, ಹೇಮಾವತಿ ನದಿಗೆ ಬಿಡುಗಡೆ ಮಾಡಿ, ಕೆಆರ್ಎಸ್ಗೆ ನೀರು ಹರಿಸಲಾಗುತ್ತದೆ.
ಆದರೆ, ಪ್ರಸ್ತುತ ಈ ಎರಡು ಜಲಾಶಯಗಳ ನೀರಿನ ಮಟ್ಟವೂ ಕಡಿಮೆಯಾಗಿದೆ. ಹಾರಂಗಿ ನೀರಿನ ಮಟ್ಟವು 2819.68(ಗರಿಷ್ಠ 2859) ಅಡಿಗೆ ಕುಸಿದಿದ್ದು, 50 ಕ್ಯುಸೆಕ್ ಒಳ ಹರಿವಿನೊಂದಿಗೆ ಜಲಾಶಯದಲ್ಲಿ ಕೇವಲ 1.890 ಟಿಎಂಸಿ ಅಡಿ ನೀರಿದೆ. ಹಾಸನದ ಗೊರೂರಿನ ಹೇಮಾವತಿ ಜಲಾಶಯದ ನೀರಿನ ಮಟ್ಟವು 2896.45(ಗರಿಷ್ಠ 2922) ಅಡಿಗಳಿಗೆ ಇಳಿದಿದೆ. 26 ಕ್ಯೂಸೆಕ್ ಒಳ ಹರಿವು, 200 ಕ್ಯೂಸೆಕ್ ಹೊರ ಹರಿವಿದೆ. ಡೆಡ್ ಸ್ಟೋರೇಜ್ ಕಳೆದು ಸದ್ಯಕ್ಕೆ 14 ಟಿಎಂಸಿ ಅಡಿ ನೀರಿದೆ.
ಮಳೆಯಾಗದಿದ್ದರೆ ಸಮಸ್ಯೆ
ಹೀಗಾಗಿ ಪ್ರಸ್ತುತ ಸಂದರ್ಭದಲ್ಲಿ ಮಳೆಯಾಗದಿದ್ದರೆ ಸಮಸ್ಯೆ ತಪ್ಪಿದ್ದಲ್ಲ. 124.80 ಅಡಿಯುಳ್ಳ ಕೆಆರ್ಎಸ್ ಜಲಾಶಯದ ನೀರಿನ ಮಟ್ಟವು ಶುಕ್ರವಾರ(ಮೇ 26) 81.30 ಅಡಿಗೆ ಕುಸಿದಿದೆ. ಜಲಾಶಯಕ್ಕೆ 448 ಕ್ಯೂಸೆಕ್ ನೀರು ಮಾತ್ರ ಹರಿದು ಬರುತ್ತಿದ್ದು, ಬೇಸಿಗೆ ಬೆಳೆಗಳಿಗಾಗಿ ಕಡೆಯ ಹಾಗೂ 5ನೇ ಕಟ್ಟಿನ ನೀರು ಕೊಡಲಾಗುತ್ತಿದೆ. ಹೀಗಾಗಿ ಜಲಾಶಯದಿಂದ ಸದ್ಯಕ್ಕೆ 3009 ಕ್ಯೂಸೆಕ್ ಹೊರ ಹರಿವು ಕಾಯ್ದುಕೊಳ್ಳಲಾಗಿದೆ.