ನಂಜನಗೂಡು: ದೇಶದ ಪ್ರತಿಯೊಂದು ಕೈಗಾರಿಕೆ ಹಾಗೂ ಕಂಪನಿಗಳು ಸಾಮಾಜಿಕ ಹೊಣೆಗಾರಿಕೆ (ಸಿಎಸ್ಆರ್) ಯೋಜನೆಯನ್ನು ಪ್ರಾಮಾಣಿಕವಾಗಿ ಅನುಷ್ಠಾನಗೊಳಿಸಿ ಸಮಾಜ ಸೇವೆಗೆ ಮುಂದಾಗಬೇಕು ಎಂದು ಶಾಸಕ ದರ್ಶನ್ ಧ್ರುವನಾರಾಯಣ್ ಸಲಹೆ ನೀಡಿದರು.
ನಗರದ ಅಶೋಕಪುರಂ ಬಡಾವಣೆಯಲ್ಲಿ ನೆಸ್ಲೆ ಕಂಪನಿಯು ಸಿಎಸ್ಆರ್ ಯೋಜನೆಯಡಿ ನಿರ್ಮಿಸಿರುವ ಶೌಚಾಲಯ ಉದ್ಘಾಟಿಸಿ ಅವರು ಮಾತನಾಡಿದರು.
ನೆಸ್ಲೆ ಕಂಪನಿಯು ಅಶೋಕಪುರಂ ಬಡಾವಣೆಯಲ್ಲಿ 3.23 ಲಕ್ಷ ರೂಪಾಯಿ ವೆಚ್ಚದಲ್ಲಿ ಆಧುನಿಕ ಶೌಚಾಲಯವನ್ನು ನಿರ್ಮಿಸಿದೆ. 90ಕ್ಕೂ ಹೆಚ್ಚು ಸಮಾಜಮುಖಿ ಕೆಲಸದಲ್ಲಿ ತೊಡಗಿರುವ ನೆಸ್ಲೆ ಕಂಪನಿಯು ಈವರೆಗೆ 14,344 ಶೌಚಾಲಯ, 25ಕ್ಕೂ ಹೆಚ್ಚು ಆಯ್ದ ಗ್ರಾಮದಲ್ಲಿ 16,500 ಕ್ಕೂ ಹೆಚ್ಚು ಶುದ್ಧ ಕುಡಿಯುವ ಘಟಕಗಳನ್ನು ನಿರ್ಮಿಸುವ ಮೂಲಕ ಸಮಾಜಮುಖಿ ಕೆಲಸದಲ್ಲಿ ತೊಡಗಿದೆ. ಅಶೋಕಪುರಂನಲ್ಲಿ ಸಂಸ್ಥೆಯು ನಿರ್ಮಿಸಿರುವ ಮೂರು ಶೌಚಾಲಯಗಳನ್ನು ಇಲ್ಲಿನ ನಿವಾಸಿಗಳು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಬ್ಲಾಕ್ ಅಧ್ಯಕ್ಷರಾದ ಸಿ.ಎಂ.ಶಂಕರ್, ಕುರಹಟ್ಟಿ ಮಹೇಶ್, ಮ್ಯಾನೇಜರ್ ಶ್ರೀನಿವಾಸ್ ಮೂರ್ತಿ, ಶಿಕ್ಷಣಾಧಿಕಾರಿ ಶಿವಲಿಂಗಯ್ಯ, ಪ್ರಾಂಶುಪಾಲ ಮುದ್ದುಮಾದೇಗೌಡ, ಹೌಸಿಂಗ್ ಬೋರ್ಡ್ ರವಿ, ನಗರಸಭಾ ಸದಸ್ಯ ಮಂಗಳಾಮ್ಮ ಪ್ರಕಾಶ್, ಮುಖಂಡರಾದ ಸ್ವಾಮಿ, ದೇವರಾಜು, ಸುಂದರ್, ಶ್ರೀನಿವಾಸ್, ಪ್ರಕಾಶ್ ಉಪಸ್ಥಿತರಿದ್ದರು.