ಅಹಮದಾಬಾದ್: ಐಪಿಎಲ್ ವೃತ್ತಿ ಜೀವನಕ್ಕೆ ನಿವೃತ್ತಿ ಘೋಷಿಸಲು ಇದು ಅತ್ಯುತ್ತಮ ಸಮಯವಾಗಿದೆ. ಆದರೆ, ಅಭಿಮಾನಿಗಳು ನನ್ನ ಮೇಲೆ ತೋರಿದ ಪ್ರೀತಿ ಹಾಗೂ ವಾತ್ಸಲ್ಯದಿಂದ ಮತ್ತೊಂದು ಆವೃತ್ತಿಯಲ್ಲಿ ಆಡಲು ಎದುರು ನೋಡುತ್ತಿದ್ದೇನೆ. ಇದಕ್ಕಾಗಿ 9 ತಿಂಗಳುಗಳ ಕಾಲ ಕಠಿಣ ಪರಿಶ್ರಮ ಪಡುತ್ತನೆ ಎಂದು ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂಎಸ್ ಧೋನಿ ತಿಳಿಸಿದ್ದಾರೆ.
ಸೋಮವಾರ ಇಲ್ಲಿನ ನರೇಂದ್ರ ಮೋದಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದಿದ್ದ 2023ರ ಐಪಿಎಲ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ಚೆನ್ನೈ ಸೂಪರ್ ಕಿಂಗ್ಸ್ 5 ವಿಕೆಟ್ಗಳಿಂದ ಗುಜರಾತ್ ಟೈಟನ್ಸ್ ತಂಡವನ್ನು ಮಣಿಸಿತು. ಆ ಮೂಲಕ ಐದನೇ ಬಾರಿ ಐಪಿಎಲ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು ಹಾಗೂ ಮುಂಬೈ ಇಂಡಿಯನ್ಸ್ ದಾಖಲೆಯನ್ನು ಸರಿಗಟ್ಟಿತು.
ಗೆಲುವಿನ ಬಳಿಕ ಮಾತನಾಡಿದ ಎಂಎಸ್ ಧೋನಿ, “ನಿವೃತ್ತಿ ಬಗೆಗಿನ ಉತ್ತರಕ್ಕಾಗಿ ಕಾಯುತ್ತಿದ್ದೀರಾ? ಸಾಂದರ್ಭಿಕವಾಗಿ ನೋಡಿದರೆ, ನಿವೃತ್ತಿ ಘೋಷಿಸಲು ಇದು ಉತ್ತಮ ಸಮಯ. ಆದರೆ, ಈ ವರ್ಷ ನಾನು ಎಲ್ಲೇ ಹೋದರೂ ನನ್ನ ಮೇಲೆ ತೋರಿದ ಪ್ರೀತಿ ಮತ್ತು ವಾತ್ಸಲ್ಯ ಅದ್ಭುತವಾಗಿತ್ತು. “ತುಂಬಾ ಧನ್ಯವಾದಗಳು” ಎಂದು ಹೇಳುವುದು ಸುಲಭ, ಆದರೆ ನನಗೆ ಕಠಿಣ ವಿಷಯವೆಂದರೆ ಇನ್ನೂ 9 ತಿಂಗಳು ಕಠಿಣ ಪರಿಶ್ರಮ ಪಟ್ಟು ಮರಳುವುದು ಹಾಗೂ ಕನಿಷ್ಠ ಒಂದು ಆವೃತ್ತಿಯನ್ನು ಆಡುವುದು. ಇದೆಲ್ಲಾ ಸಂಗತಿಗಳು ನನ್ನ ದೇಹವನ್ನು ಅವಲಂಬಿಸಿರುತ್ತದೆ. ಮುಂದಿನ 6 ರಿಂದ 7 ತಿಂಗಳುಗಳ ಅವಧಿಯಲ್ಲಿ ಈ ವಿಷಯವನ್ನು ಅಂತಿಮಗೊಳಿಸುತ್ತೇನೆ. ಇನ್ನೊಂದು ಆವೃತ್ತಿ ಆಡಲು ಬಯಸುತ್ತಿರುವುದು ನನ್ನ ಕಡೆಯಿಂದ ನೀಡುತ್ತಿರುವ ಉಡುಗೊರೆ, ಆದರೆ ಇದು ಸುಲಭವಲ್ಲ. ನನ್ನ ಮೇಲೆ ತೋರಿದ ಪ್ರೀತಿ ಹಾಗೂ ವಾತ್ಸಲ್ಯಕ್ಕಾಗಿ ಎಲ್ಲರಿಗಾಗಿ ಈ ಕೆಲಸವನ್ನು ನಾನು ಮಾಡಬೇಕಾಗಿದೆ,” ಎಂದು ಭಾವುಕರಾದರು.