ಬೆಂಗಳೂರು:- ಜಲಸಂಪನ್ಮೂಲ ಖಾತೆ ಹೊಂದಿರುವ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಮಂಗಳವಾರ ನೀರಾವರಿ ಇಲಾಖೆಯ ಸಭೆಯನ್ನು ಕರೆಯುವುದರೊಂದಿಗೆ ಮತ್ತೆ ಗಮನ ಸೆಳೆದರು. ಈ ಸಭೆಯಲ್ಲಿ ಮೇಕೆದಾಟು ಯೋಜನೆಗೆ ಆಧ್ಯತೆ ನೀಡುವಂತೆ ಅಧಿಕಾರಿಗಳಿಗೆ ಕಟ್ಟಪ್ಪಣೆ ಮಾಡಿದರು. ಚುನಾವಣೆಗೂ ಮುನ್ನ ಮೇಕೆದಾಟು ಪಾದಯಾತ್ರೆಯ ನೇತೃತ್ವ ವಹಿಸಿದ್ದ ಡಿಕೆಶಿ, ಈಗ ಮತ್ತೆ ಯೋಜನೆಯ ಬಗ್ಗೆ ಮಾತನಾಡಿರುವುದು ಮಹತ್ವ ಪಡೆದುಕೊಂಡಿದೆ.
ಬೆಂಗಳೂರು ಅಭಿವೃದ್ಧಿ ಖಾತೆಯನ್ನೂ ಹೊಂದಿರುವ ಅವರು ಮೇಕೆದಾಟು ಯೋಜನೆಗೆ ಹೆಚ್ಚು ಒತ್ತು ನೀಡುತ್ತಿದ್ದಾರೆ ಎನ್ನಲಾಗಿದೆ. ಮೇಕೆದಾಟು ಯೋಜನೆ ಅನುಷ್ಠಾನಗೊಂಡರೆ ಬೆಂಗಳೂರಿನ ನೀರಿನ ಬವಣೆಗೆ ಶಾಶ್ವತ ಪರಿಹಾರ ದೊರೆಯಲಿದೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ತಮ್ಮ ಮೊದಲ ಸಭೆಯಲ್ಲೇ ಮೇಕೆದಾಟು ಯೋಜನೆಯ ಕುರಿತು ಪ್ರಸ್ತಾಪಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಯೋಜನೆಗೆ ರೂ 9,000 ಕೋಟಿ (2019 ದರಗಳು) ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ.
‘ಬೆಂಗಳೂರು ಮತ್ತು ಅದರ ಸುತ್ತಮುತ್ತಲಿನ’ ಕುಡಿಯುವ ನೀರಿನ ಅಗತ್ಯವನ್ನು ಪೂರೈಸಲು ಕರ್ನಾಟಕಕ್ಕೆ ಹಂಚಿಕೆಯಾದ ಹೆಚ್ಚುವರಿ 4.75 ಟಿಎಂಸಿ ಅಡಿ ನೀರನ್ನು ಬಳಸಿಕೊಳ್ಳಲು ಈ ಯೋಜನೆ ಅನುಕೂಲ ಮಾಡಿಕೊಡಲಿದೆ. ಕರ್ನಾಟಕವು ತಮಿಳುನಾಡಿಗೆ ನೀರು ಹರಿಸುವುದನ್ನು ನಿಯಂತ್ರಿಸಲು ಮತ್ತು ಸುಪ್ರೀಂ ಕೋರ್ಟ್ನ 2018 ರ ನಿರ್ದೇಶನದಂತೆ ನೀರಿನ ಹಂಚಿಕೆ ಮಾಡಲು ಪ್ರಯತ್ನಿಸುತ್ತಿದೆ.
67.16 ಟಿಎಂಸಿ ಅಡಿ ನೀರನ್ನು ಸಂಗ್ರಹಿಸಲು ಮೇಕೆದಾಟು ಅಣೆಕಟ್ಟನ್ನು ನಿರ್ಮಿಸಲಾಗುತ್ತದೆ. 400 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಲು ಯುನಿಟ್ಗಳನ್ನು ನಿರ್ಮಿಸಬೇಕಿದೆ. ಇತರ ಮೂಲಸೌಕರ್ಯಗಳು, ನೀರನ್ನು ಎತ್ತುವ ಜಾಕ್ವೆಲ್-ಕಮ್-ಪಂಪ್ಹೌಸ್ಗಳ ನಿರ್ಮಾನ ಯೋಜನೆಯ ಪ್ರಮುಖ ಅಂಶಗಳಾಗಿವೆ.
ಯೋಜನೆಗೆ ಒಟ್ಟು 12,979 ಎಕರೆ ಅಗತ್ಯವಿದ್ದು, ಇದರಲ್ಲಿ 12,345.4 ಎಕರೆ ಮುಳುಗಡೆಯಾಗಲಿದೆ. 500 ಎಕರೆ ಕಂದಾಯ ಭೂಮಿಯನ್ನು ಉಳಿಸಿಕೊಳ್ಳಲಾಗುತ್ತದೆ. ನೀರು ಪಾಲಾಗುವ ಉಳಿದ ಜಮೀನು ಪರಿಸರ ಸೂಕ್ಷ್ಮ ಕಾವೇರಿ ವನ್ಯಜೀವಿ ಅಭಯಾರಣ್ಯ ಮತ್ತು ಸುತ್ತಮುತ್ತಲಿನ ಅರಣ್ಯಗಳಿಗೆ ಸೇರಿದೆ.
ವನ್ಯಜೀವಿಗಳ ಆವಾಸಸ್ಥಾನವು ಕುಗ್ಗುತ್ತಿರುವ ಸಮಯದಲ್ಲಿ ಸಂರಕ್ಷಿತ ಪ್ರದೇಶದ ದೊಡ್ಡ ಪ್ರದೇಶಗಳನ್ನು ಮುಳುಗಿಸುವುದು ವನ್ಯಜೀವಿ ಸಂಕುಲಕ್ಕೆ ಸಂಕಷ್ಟವನ್ನು ತಂದೊಡ್ಡಲಿದೆ ಎಂದು ಪರಿಸರ ಕಾರ್ಯಕರ್ತರು ಮತ್ತು ತಜ್ಞರು ಎಚ್ಚರಿಸಿದ್ದಾರೆ.
ಕರ್ನಾಟಕಕ್ಕೆ 284.75 ಟಿಎಂಸಿ ಅಡಿ ಹಂಚಿಕೆ ಮಾಡಬೇಕು. ಬಿಳಿಗುಂಡ್ಲು (ತಮಿಳುನಾಡು ಕಡೆಗೆ) ಹರಿವನ್ನು 192 ಟಿಎಂಸಿ ಅಡಿಯಿಂದ 177.25 ಟಿಎಂಸಿ ಅಡಿಗಳಿಗೆ ಇಳಿಸಿದ ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಕರ್ನಾಟಕದ ಪ್ರಸ್ತಾವನೆ ಬಂದಿದೆ.
ಈಗ ಅಂತರ್ಜಲ ಮತ್ತು ಇತರ ಮೂಲಗಳನ್ನು ಅವಲಂಬಿಸಿರುವ ಬೆಂಗಳೂರಿನ ಶೇ 50ರಷ್ಟು ಜನಸಂಖ್ಯೆಗೆ ಕುಡಿಯುವ ನೀರು ಪೂರೈಸಲು ಈ ಯೋಜನೆಯು ನಿರ್ಣಾಯಕವಾಗಿದೆ ಎಂದು ಕರ್ನಾಟಕ ವಾದಿಸಿತ್ತು.
ಬಿಬಿಎಂಪಿ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಶೀಘ್ರ ಮಂಜೂರಾತಿಗೆ ಮುಂದಾಗುವ ಸಾಧ್ಯತೆ ಇದೆ.