ಅಮೆರಿಕ: ಅಮೆರಿಕದ ನಿವೃತ್ತ ಬೇಹುಗಾರಿಕಾ ಅಧಿಕಾರಿಯೊಬ್ಬರು ಯುಎಫ್ಒ ಹಾಗೂ ಅನ್ಯಗ್ರಹ ಜೀವಿಗಳ ಕುರಿತಾಗಿ ಸ್ಫೋಟಕ ಮಾಹಿತಿಯೊಂದನ್ನು ಹೊರ ಹಾಕಿದ್ದಾರೆ. ಅಮೆರಿಕ ಸರ್ಕಾರವು ಗುರುತಿಸಲಾಗದ ಹಾರುವ ವಸ್ತುಗಳು (UFO) ಕುರಿತಾಗಿ ತನಿಖೆ ನಡೆಸಲು ರಹಸ್ಯ ಕಾರ್ಯಾಚರಣೆಯೊಂದನ್ನು ನಡೆಸಿತ್ತು ಎಂದು ಅವರು ಮಾಹಿತಿ ನೀಡಿದ್ದಾರೆ. ಈ ಕಾರ್ಯಾಚರಣೆ ವೇಳೆ ಅಮೆರಿಕ ಸರ್ಕಾರಕ್ಕೆ ಯುಎಫ್ಒ ಒಂದು ಲಭ್ಯವಾಗಿತ್ತು. ಇದು ಮಾನವ ನಿರ್ಮಿತ ಯಂತ್ರ ಆಗಿರಲಿಲ್ಲ ಎಂದು ಆ ನಿವೃತ್ತ ಅಧಿಕಾರಿ ಹೇಳಿದ್ದಾರೆ.
ಈ ಸಂಬಂಧ ‘ದಿ ಡೀಬ್ರೀಫ್’ ಎಂಬ ವೆಬ್ಸೈಟ್ನಲ್ಲಿ ವರದಿ ಪ್ರಕಟವಾಗಿದೆ. 2017ರಲ್ಲಿ ಅಮೆರಿಕದ ರಕ್ಷಣಾ ಇಲಾಖೆಯ ಅತ್ಯುನ್ನತ ವಿಭಾಗ ಪೆಂಟಗಾನ್ ಯುಎಫ್ಒ ಕುರಿತಾಗಿ ಅಧ್ಯಯನ ನಡೆಸಲು ‘ಗುರುತಿಸಲಾಗದ ಅಸಂಗತ ವಿದ್ಯಮಾನಗಳು’ (UAP) ಎಂಬ ಕಾರ್ಯಾಚರಣೆ ನಡೆಸಿತ್ತು. ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಇಬ್ಬರು ತಜ್ಞರು ಈ ವರದಿಯನ್ನು ಸಿದ್ದಪಡಿಸಿ ಬಿಡುಗಡೆ ಮಾಡಿದ್ದಾರೆ. ತಜ್ಞರಾದ ಲೆಸ್ಸಿ ಕೀನ್ ಹಾಗೂ ರಾಲ್ಪ್ ಬ್ಲುಮೆಂಥಾಲ್ ಅವರು ಅಮೆರಿಕದ ನಿವೃತ್ತ ಬೇಹುಗಾರಿಕಾ ಅಧಿಕಾರಿಯೊಬ್ಬರ ಹೇಳಿಕೆಯನ್ನು ತಮ್ಮ ವರದಿಯಲ್ಲಿ ದಾಖಲಿಸಿದ್ದಾರೆ. ಈ ನಿವೃತ್ತ ಅಧಿಕಾರಿಯೇ ಇದೀಗ ವಿಷಲ್ ಬ್ಲೋವರ್! (ಅಕ್ರಮ ಚಟುವಟಿಕೆ ವಿರುದ್ಧ ಜನಪರ ಕಾಳಜಿಯಿಂದ ವರದಿ ಮಾಡುವ ವ್ಯಕ್ತಿ)
ಈ ಕಾರ್ಯಾಚರಣೆಯ ಬಗ್ಗೆ ಇತ್ತೀಚೆಗಷ್ಟೇ ಅಮೆರಿಕ ಸರ್ಕಾರ ಮಾಹಿತಿ ಬಹಿರಂಗ ಮಾಡಿತ್ತು. ಕೆಲ ದಿನಗಳ ಹಿಂದಷ್ಟೇ ಅಮೆರಿಕದ ಪ್ರತಿಷ್ಠಿತ ಬಾಹ್ಯಾಕಾಶ ಸಂಸ್ಥೆ ನಾಸಾ ಕೂಡಾ ಯುಎಫ್ಒಗಳ ಹಾರಾಟದ ವಿಡಿಯೋವನ್ನು ಅಧಿಕೃತವಾಗಿ ಬಿಡುಗಡೆ ಮಾಡುವ ಮೂಲಕ, ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿತ್ತು.
ಮಧ್ಯ ಪ್ರಾಚ್ಯ ರಾಷ್ಟ್ರಗಳ ಮೇಲೆ ಹಾರಾಡುತ್ತಿದ್ದ ಯುಎಫ್ಒಗಳ ದೃಶ್ಯಗಳನ್ನು ಕ್ಯಾಮರಾಗಳಲ್ಲಿ ಸೆರೆ ಹಿಡಿಯಲಾಗಿದೆ. ಆದ್ರೆ, ಇವು ಅನ್ಯಗ್ರಹ ಜೀವಿಗಳ ವಾಹನವೇ ಅನ್ನೋದು ದೃಢಪಟ್ಟಿಲ್ಲ. ವಾಹನ ನಮಗೆ ಸಿಕ್ಕಿಲ್ಲ. ಜೊತೆಗೆ ಅನ್ಯಗ್ರಹ ಜೀವಿಗಳ ಇರುವಿಕೆ ಬಗ್ಗೆ ನಮಗೆ ಸಾಕ್ಷ್ಯ ಕೂಡಾ ಸಿಕ್ಕಿಲ್ಲ ಎಂದು ನಾಸಾ ಹೇಳಿತ್ತು. ಆದ್ರೆ, ಅಮೆರಿಕ ಸರ್ಕಾರದ ನಿವೃತ್ತ ಬೇಹುಗಾರಿಕಾ ಅಧಿಕಾರಿ ಹೊಸ ಬಾಂಬ್ ಸಿಡಿಸಿದ್ದಾರೆ. ವಿಷಲ್ ಬ್ಲೋವರ್ ಆಗಿ ಮಾಧ್ಯಮಗ ಎದುರು ಬಂದಿರುವ ಈ ಅಧಿಕಾರಿ, ಅಮೆರಿಕ ಸರ್ಕಾರಕ್ಕೆ ಯುಎಫ್ಒ ವಾಹನ ಸಿಕ್ಕಿದೆ ಎಂದು ಹೇಳುತ್ತಿದ್ದಾರೆ!
ಈ ‘ವಿಷಲ್ ಬ್ಲೋವರ್’ ನಂಬಿಕಸ್ಥನೇ? ಅಥವಾ ವದಂತಿ ವೀರನೇ?
ಅನ್ಯಗ್ರಹ ಜೀವಿಗಳು ಹಾಗೂ ಅವುಗಳ ವಾಹನ ಎನ್ನಲಾಗಿರುವ ಯುಎಫ್ಒ ವಿಚಾರ ಬಂದ ಕೂಡಲೇ ವದಂತಿಗಳು ರೆಕ್ಕೆ ಬಿಚ್ಚುತ್ತವೆ. ಇದು ಇಂದು – ನಿನ್ನೆಯ ವಿಚಾರ ಅಲ್ಲ. ದಶಕಗಳಿಂದಲೂ ವಿಶ್ವಾದ್ಯಂತ ಯುಎಫ್ಒ ಕಾಣಿಸಿಕೊಂಡ ಪ್ರಕರಣಗಳು ವರದಿಯಾಗಿವೆ. ಇದರ ಜೊತೆಯಲ್ಲೇ ಎಲ್ಲವೂ ಸುಳ್ಳು, ಬರೀ ವದಂತಿ ಎಂಬ ಸ್ಪಷ್ಟನೆಗಳೂ ಹರಿದಾಡುತ್ತಿವೆ. ಆದ್ರೆ, ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ತಜ್ಞರೇ ಯುಎಫ್ಒಗಳ ಫೋಟೋ ಬಿಡುಗಡೆ ಮಾಡಿದ ಬೆನ್ನಲ್ಲೇ ಅಮೆರಿಕ ಬೇಹುಗಾರಿಕಾ ದಳದ ನಿವೃತ್ತ ಅಧಿಕಾರಿ ಹೊಸ ಬಾಂಬ್ ಸಿಡಿಸಿದ್ದಾನೆ. ಅಮೆರಿಕ ಸರ್ಕಾರ ಯುಎಫ್ಒ ಒಂದನ್ನು ವಶಕ್ಕೆ ಪಡೆದಿತ್ತು ಎಂದು ಹೇಳಿರುವ ಈ ಅಧಿಕಾರಿ ಸಾಮಾನ್ಯನಲ್ಲ. ಈತನ ಹೆಸರು ಡೇವಿಲ್ ಚಾರ್ಲ್ಸ್ ಗ್ರುಶ್ಚೆ.. ಈತ ಅಫ್ಘಾನಿಸ್ತಾನ ಸಮರದಲ್ಲಿ ಭಾಗಿಯಾಗಿದ್ದ. ಮಾಜಿ ಯೋಧನಾಗಿರುವ ಈತ ಅಮೆರಿಕದ ಬೇಹುಗಾರಿಕಾ ದಳದ ವಿವಿಧ ಇಲಾಖೆಗಳಲ್ಲಿ ಕಾರ್ಯ ನಿರ್ವಹಿಸಿದ್ದಾನೆ. ಇದೀಗ ನಿವೃತ್ತನಾಗಿರುವ ಡೇವಿಡ್, ಅಮೆರಿಕ ಸರ್ಕಾರದ ವಿರುದ್ಧವೇ ವಿಷಲ್ ಬ್ಲೋವರ್ ಆಗಿದ್ದಾನೆ!
ಯುಎಫ್ಒ ಬಗ್ಗೆ ಡೇವಿಡ್ ವಿವರಿಸಿದ್ದೇನು?
ಅಮೆರಿಕ ಸರ್ಕಾರ ನಡೆಸಿದ ರಹಸ್ಯ ಕಾರ್ಯಾಚರಣೆ ವೇಳೆ ಅನ್ಯಗ್ರಹ ಜೀವಿಗಳ ವಾಹನ ಎನ್ನಲಾದ ಯುಎಫ್ಒ ವಶಕ್ಕೆ ಪಡೆಯಲಾಗಿತ್ತು. ಈ ವಾಹನ ಕಾರ್ಯ ನಿರ್ವಹಿಸುವ ಸ್ಥಿತಿಯಲ್ಲಿ ಇದೆಯೋ ಅಥವಾ ಇಲ್ಲವೋ ಅನ್ನೋದು ದೃಢಪಟ್ಟಿಲ್ಲ. ಆದ್ರೆ, ಈ ವಾಹನ ಮಾನವ ನಿರ್ಮಿತ ಸಾಧನವಂತೂ ಅಲ್ಲವೇ ಅಲ್ಲ. ವಶಕ್ಕೆ ಪಡೆದಿರುವ ಈ ವಾಹನದ ಕುರಿತಾಗಿ ಹಾಗೂ ಬೇಹುಗಾರಿಕಾ ದಳ ನಡೆಸಿದ ಕಾರ್ಯಾಚರಣೆ ಕುರಿತಾಗಿ ಅಮೆರಿಕ ಕಾಂಗ್ರೆಸ್ ಹಾಗೂ ಬೇಹುಗಾರಿಕಾ ಸಮುದಾಯದ ಇನ್ಸ್ಪೆಕ್ಟರ್ ಜನರಲ್ ಅವರಿಗೆ ಸಮಗ್ರ ವರದಿಯನ್ನು ನೀಡಲಾಗಿದೆ. ಇದು ರಹಸ್ಯ ಮಾಹಿತಿಯಾಗಿದ್ದು, ಬಹಿರಂಗ ಆಗಿಲ್ಲ ಎಂದು ಡೇವಿಡ್ ವಿವರಿಸಿದ್ದಾರೆ.
ಇನ್ನು ಈ ವರದಿ ನೀಡುವಾಗ ಕೆಲವು ಪ್ರಮುಖ ವಿಚಾರಗಳನ್ನು ಅಮೆರಿಕ ಕಾಂಗ್ರೆಸ್ಗೆ (ಅಮೆರಿಕ ಸಂಸತ್ತು) ನೀಡದೆ ಮರೆ ಮಾಚಲಾಗಿದೆ ಎಂದೂ ಡೇವಿಡ್ ಆರೋಪಿಸಿದ್ದಾರೆ. ಈ ರಹಸ್ಯ ಮಾಹಿತಿಗಳನ್ನು ಬಹಿರಂಗ ಮಾಡಿದ ಕಾರಣಕ್ಕೆ ತಮ್ಮ ವಿರುದ್ಧ ಅಕ್ರಮವಾಗಿ ಪ್ರತೀಕಾರ ತೀರಿಸಿಕೊಳ್ಳುವ ಪ್ರಯತ್ನಗಳೂ ನಡೆದಿವೆ ಎಂದು ಡೇವಿಡ್ ಆಪಾದನೆ ಮಾಡಿದ್ದಾರೆ.
ಕಾನೂನು ಸಮರಕ್ಕೆ ಮುಂದಾದ ‘ವಿಷಲ್ ಬ್ಲೋವರ್’!
ಅಮೆರಿಕದ ಬೇಹುಗಾರಿಕಾ ಸಮುದಾಯವು ಯುಎಪಿ ಕಾರ್ಯಾಚರಣೆ ಅಡಿಯಲ್ಲಿ ನಡೆಸಿದ ಯುಎಫ್ಒಗಳ ಕುರಿತಾದ ಸಂಶೋಧನೆ ವೇಳೆ ಹಲವು ಮಹತ್ವದ ಮಾಹಿತಿಗಳನ್ನು ಸಂಗ್ರಹಿಸಿವೆ. ಆದಾಗ್ಯೂ ಈ ಮಾಹಿತಿಗಳನ್ನು ಉದ್ದೇಶಪೂರ್ವಕವಾಗಿ ಅಮೆರಿಕ ಸಂಸತ್ಗೆ ನೀಡಿಲ್ಲ ಎಂದು ಆರೋಪ ಮಾಡಿರುವ ಡೇವಿಡ್, ಈ ಸಂಬಂಧ ಕಾನೂನು ಹೋರಾಟಕ್ಕೂ ಮುಂದಾಗಿದ್ದಾರೆ. ಡೇವಿಡ್ ಪರವಾಗಿ ವಾದ ಮಂಡಿಸಲು ವಕೀಲರಾದ ಚಾರ್ಲ್ಸ್ ಮೆಕ್ಲೋನ್ ಅವರು ಮುಂದೆ ಬಂದಿದ್ದಾರೆ. ಅಮೆರಿಕದ ಬೇಹುಗಾರಿಕಾ ಸಮುದಾಯದ ನಿವೃತ್ತ ಇನ್ಸ್ಪೆಕ್ಟರ್ ಜನರಲ್ ಆಗಿರುವ ಚಾರ್ಲ್ಸ್, ವೃತ್ತಿಯಲ್ಲಿ ವಕೀಲರೂ ಹೌದು. ಇದೀಗ ಅವರೇ ತಮ್ಮ ಕಕ್ಷಿದಾರ ಡೇವಿಡ್ ಪರವಾಗಿ ಕಾನೂನು ಹೋರಾಟ ನಡೆಸುತ್ತಿದ್ದಾರೆ.
ಈ ಪ್ರಕರಣ ಸಂಬಂಧ ದೂರು ಕೂಡಾ ದಾಖಲಾಗಿದೆ. ಡೇವಿಡ್ ಅವರ ಮೇಲೆ ಪ್ರತೀಕಾರದ ದಾಳಿ ನಡೆದಿದೆ ಅನ್ನೋ ಆರೋಪದ ಕುರಿತಾಗಿ ಸಮಗ್ರ ತನಿಖೆ ನಡೆಸೋದಕ್ಕೆ ಅಮೆರಿಕದ ಬೇಹುಗಾರಿಕಾ ಸಮುದಾಯದ ಇನ್ಸ್ಪೆಕ್ಟರ್ ಜನರಲ್ ಆದೇಶವನ್ನೂ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಹಾಗೆ ನೋಡಿದ್ರೆ 2022ರಲ್ಲೇ ಡೇವಿಡ್ ಅವರು ಬೇಹುಗಾರಿಕಾ ದಳ ನಡೆಸಿದ ರಹಸ್ಯ ಕಾರ್ಯಾಚರಣೆ ಕುರಿತಾಗಿ ಅಮೆರಿಕ ಸಂಸತ್ತಿಗೆ ಮಾಹಿತಿ ನೀಡಿದ್ದರು. ಆದ್ರೆ, ಬೇಹುಗಾರಿಕಾ ದಳ ವಶಪಡಿಸಿಕೊಂಡಿದೆ ಎನ್ನಲಾದ ಯುಎಫ್ಒಗಳ ಕುರಿತಾಗಿ ಯಾವುದೇ ಭೌತಿಕ ಸಾಕ್ಷ್ಯವನ್ನ ಡೇವಿಡ್ ಒದಗಿಸಿಲ್ಲ. ಆದರೂ ಕೂಡಾ ಹಲವು ಅಧಿಕಾರಿಗಳು ಇದೀಗ ವಿಷಲ್ ಬ್ಲೋವರ್ ಡೇವಿಡ್ ಅವರನ್ನು ಬೆಂಬಲಿಸಿ ವಾದ ಮಾಡುತ್ತಿದ್ಧಾರೆ. ಯಾರೊಬ್ಬರ ಬಳಿಯಲ್ಲೂ ಯುಎಫ್ಒದ ಒಂದು ತುಣುಕಾದರೂ ನಿಮ್ಮ ಬಳಿ ಇದೆಯಾ ಅನ್ನೋ ಪ್ರಶ್ನೆಗೆ ಉತ್ತರ ಇಲ್ಲ!