ತಿ.ನರಸೀಪುರ: ಕಳೆದ ಮೇ 10ರಂದು ನಡೆದ ವಿಧಾನ ಸಭೆ ಚುನಾವಣೆಯಲ್ಲಿ ವರುಣಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಚುನಾವಣೆ ಗೆಲ್ಲಲು ಕ್ಷೇತ್ರದಲ್ಲಿ ಹಣ ಹಂಚುವುದರ ಮುಖೇನ ಚುನಾವಣಾ ಅಕ್ರಮವೆಸಗಿದ್ದಾರೆ ಎಂದು ಬಿಜೆಪಿ ಹಿರಿಯ ಮುಖಂಡ ತೋಟದಪ್ಪ ಬಸವರಾಜು ಆರೋಪಿಸಿದ್ದಾರೆ.
ಪಟ್ಟಣದ ಮಿನಿ ವಿಧಾನಸೌಧದ ತಹಶೀಲ್ದಾರ್ ಕಚೇರಿಯಲ್ಲಿ ತಹಶೀಲ್ದಾರ್ ಸಿ.ಜಿ.ಗೀತಾರಿಗೆ ಚುನಾವಣಾ ಅಕ್ರಮದ ದೂರನ್ನು ನೀಡಿದ ನಂತರ ಮಾತನಾಡಿದ ಅವರು,ಕಳೆದ ಚುನಾವಣೆಯಲ್ಲಿ ವರುಣಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಸಿದ್ದರಾಮಯ್ಯ ಅವರು ತಾವು ಚುನಾವಣೆಯಲ್ಲಿ ಗೆಲ್ಲಲು ಪ್ರತಿ ಮತದಾರನಿಗೆ 2000/-ರೂಗಳನ್ನು ನೀಡಿ ಹಣ ಆಮಿಷದ ಮೂಲಕ ಗೆಲುವು ಸಾಧಿಸಿದ್ದಾರೆ ಎಂದು ಆರೋಪಿಸಿದರು.
ರಾಜ್ಯದ ಒಬ್ಬ ನುರಿತ ರಾಜಕಾರಿಣಿಯಾಗಿರುವ ಅವರು ಸುಮಾರು 40ವರ್ಷಗಳ ರಾಜಕೀಯ ಅನುಭವ ಹೊಂದಿದ್ದು,ಸಂವಿಧಾನದ ಪಕ್ಕ ಅನುಯಾಯಿ ಎಂದು ಹೇಳಿಕೊಳ್ಳುವ ಅವರು ಚುನಾವಣೆಯಲ್ಲಿ ಹಣಕೊಟ್ಟು ಮತ ಖರೀದಿ ಮಾಡುವ ಮುಖೇನ ಪ್ರಜಾಪ್ರಭುತ್ವ ಮತ್ತು ಸಂವಿಧಾನಕ್ಕೆ ಅಪಚಾರವೆಸಗಿದ್ದಾರೆ.ಹಾಗಾಗಿ ಅವರ ಶಾಸಕ ಸ್ಥಾನವನ್ನು ಅಸಿಂಧುಗೊಳಿಸಬೇಕು ಎಂದು ಚುನಾವಣಾ ಆಯೋಗಕ್ಕೆ ಆಗ್ರಹಪಡಿಸಿದರು.
ವಿರೋಧ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯನವರು ಸದನ ಒಳಗೆ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಔಚಿತ್ಯದ ಬಗ್ಗೆ ಮಾತನಾಡಿ ಕಿರಿಯ ಸದಸ್ಯರಿಗೆ ಮಾದರಿಯಾಗಿದ್ದರು.ಅಲ್ಲದೆ ರಾಜ್ಯದ ಹಿರಿಯ ಮುತ್ಸದಿ ರಾಜಕಾರಿಣಿ.ಅವರು ರಾಜ್ಯವ್ಯಾಪಿ ಹೆಚ್ಚು ಪ್ರಭಾವ ಹೊಂದಿದ್ದು,ಹಲವು ಶಾಸಕರನ್ನು ಗೆಲ್ಲಿಸುವ ಸಾಮಥ್ರ್ಯ ಅವರಲ್ಲಿದೆ.ಆದರೆ,ಕೇವಲ ತಮ್ಮ ಒಂದು ಶಾಸಕ ಸ್ಥಾನವನ್ನು ಗೆಲ್ಲಲು ಅವರ ರಾಜಕೀಯ ಆದರ್ಶ,ತತ್ತ್ವ ಸಿದ್ದಾಂತ ,ಪ್ರಜಾಪ್ರಭುತ್ವದ ಮೌಲ್ಯಗಳನ್ನು ಗಾಳಿಗೆ ತೂರಿ ಚುನಾವಣೆಯಲ್ಲಿ ಹಣ ಹಂಚುವ ಅಕ್ರಮಕ್ಕೆ ಮುಂದಾಗಿದ್ದು,ಈ ಕೃತ್ಯ ಅವರ ರಾಜಕೀಯ ಜೀವನದ ವರ್ಚಸ್ಸಿಗೆ ಧಕ್ಕೆ ತರಲಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ವರುಣಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಸಿದ್ದರಾಮಯ್ಯ ಮತ್ತು ಮಾಜಿ ಸಚಿವ ವಿ.ಸೋಮಣ್ಣ ಇಬ್ಬರೂ ಚುನಾವಣೆಯಲ್ಲಿ ಗೆಲ್ಲಲು ಪ್ರತಿ ಮತದಾರರಿಗೆ 2000/-ರೂಗಳನ್ನು ಹಂಚಿದ್ದು,ಇದು ಇಬ್ಬರ ರಾಜಕೀಯ ಹಿರಿತನಕ್ಕೆ ಕಪ್ಪುಚುಕ್ಕೆ. ರಾಜ್ಯದ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಮತ್ತು ಹಲವು ಬಾರಿ ಸಚಿವರಾಗಿದ್ದ ವಿ.ಸೋಮಣ್ಣ ಗೆಲ್ಲಲೇಬೇಕು ಎಂಬ ಜಿದ್ದಿಗೆ ಬಿದ್ದು ಸಂವಿಧಾನದ ಪವಿತ್ರ ಹಕ್ಕಾದ ಮತದಾನವನ್ನು ‘ನೋಟಿಗಾಗಿ ಓಟು’ ಎಂದು ಪರಿವರ್ತಿಸಿದ ಇಬ್ಬರು ರಾಜಕಾರಿಣಿಗಳ ಬಗ್ಗೆ ರಾಜ್ಯದ ಜನರಲ್ಲಿ ಅತೀವ ಬೇಸರ ಮೂಡಿಸಿದೆ.
ಹಾಗಾಗಿ ಚುನಾವಣೆ ನೀತಿ ಸಂಹಿತೆಯನ್ನು ಮೀರಿ ಚುನಾವಣಾ ಅಕ್ರಮ ಎಸಗಿರುವ ಸಿದ್ದರಾಮಯ್ಯರ ಶಾಸಕ ಸ್ಥಾನವನ್ನು ರದ್ದುಗೊಳಿಸಬೇಕು.ಅಲ್ಲದೆ ಮತಕ್ಕಾಗಿ ಹಣ ಹಂಚಿರುವ ಸಿದ್ದರಾಮಯ್ಯ ಮತ್ತು ವಿ.ಸೋಮಣ್ಣರನ್ನು ಮುಂದಿನ ಹತ್ತು ವರ್ಷಗಳ ಅವಧಿಗೆ ಚುನಾವಣೆಗೆ ಸ್ಪರ್ಧಿಸದಂತೆ ಚುನಾವಣೆ ಆಯೋಗ ನಿರ್ಬಂಧಿಸಬೇಕು ಎಂದರು.
ಚುನಾವಣೆಯಲ್ಲಿ ಹಣ ಹಂಚಿ ಗೆದ್ದು ಮುಖ್ಯಮಂತ್ರಿ ಸ್ಥಾನ ಅಲಂಕರಿಸಿರುವ ಸಿದ್ದರಾಮಯ್ಯ ಆ ಸ್ಥಾನದಲ್ಲಿ ಕೂರಲು ಅರ್ಹರಲ್ಲ.ನಿಜಲಿಂಗಪ್ಪ,ಡಿ.ದೇವರಾಜ ಆರಸ್ ರಂತಹ ಪ್ರಾಮಾಣಿಕ ಮುಖ್ಯಮಂತ್ರಿಗಳು ಅಲಂಕರಿಸಿದ್ದ ಮುಖ್ಯಮಂತ್ರಿ ಸ್ಥಾನ ಇಂದು ದುಡ್ಡು ಹಂಚಿ ಗೆದ್ದವರು ಮತ್ತು ಕ್ರಿಮಿನಲ್ ಗಳ ಸ್ವಸ್ಥಾನವಾಗಿದೆ.ಇದರಿಂದ ಆ ಹುದ್ದೆಯ ಘನತೆ ಮಣ್ಣು ಪಾಲಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.