ಮೈಸೂರು:- ರಾಜ್ಯದಲ್ಲಿ ವಿದ್ಯುತ್ ದರ ಹೆಚ್ಚಳಕ್ಕೆ ಈ ಹಿಂದಿನ ಬಿಜೆಪಿ ಸರ್ಕಾರವೇ ನೇರ ಕಾರಣ. ವಿದ್ಯುತ್ ದರ ಹೆಚ್ಚಳಕ್ಕೆ ಕೆ ಇ ಆರ್ ಸಿ ಮಾಡಿದ್ದ ಶಿಫಾರಸ್ಸಿಗೆ ಈ ಹಿಂದಿನ ಬಿಜೆಪಿ ಸರ್ಕಾರ ಒಪ್ಪಿಗೆ ಸೂಚಿಸಿದೆ ಎಂದು ಶಾಸಕ ತನ್ವೀರ್ ಸೇಠ್ ಹೇಳಿದರು.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯರಿಗೆ ಚುನಾವಣೆಯಲ್ಲಿ ಸೋಲುವುದು ಖಚಿತವಾಗಿದ್ದರಿಂದ ವಿದ್ಯುತ್ ದರ ಹೆಚ್ಚಳ ಪ್ರಸ್ತಾಪಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಈ ವಿಚಾರ ಮೇ 12ರಂದು ಪ್ರಕಟವಾಗಿದೆ. ಮೇ 13ರಂದು ಚುನಾವಣಾ ಫಲಿತಾಂಶ ಹೊರಬಿದ್ದಾಗ ಶಾಕ್ ಕೊಡುವ ಕೆಲಸ ಮಾಡಿದ್ದಾರೆ. ಹೀಗಾಗಿ ನಾನು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದೇನೆ.
5 ಗ್ಯಾರಂಟಿ ಯೋಜನೆ ಜಾರಿಯ ಜೊತೆಗೆ ವಿದ್ಯುತ್ ದರ ಏರಿಸಿದರೆ ಜನರಿಗೆ ತೊಂದರೆ ಆಗಲಿದೆ. ಕಾಂಗ್ರೆಸ್ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗಲಿದೆ. ವಿದ್ಯುತ್ ದರ ಹೆಚ್ಚಳದಲ್ಲಿ ಲೋಪವಾಗಿದೆ ಎಂದು ತಿಳಿಸಿದ್ದೇನೆ. ವಿದ್ಯುತ್ ದರ ಹೆಚ್ಚಳವನ್ನು ಪುನರ್ ಪರಿಶೀಲನೆ ಮಾಡುವಂತೆ ಮನವಿ ಮಾಡಿದ್ದೇನೆ ಎಂದರು.
ಪಠ್ಯಪುಸ್ತಕ ಪರಿಷ್ಕರಣೆಗೆ ಬಿಜೆಪಿ ವಿರೋಧ ವ್ಯಕ್ತಪಡಿಸಿರುವ ವಿಚಾರವಾಗಿ ಮಾತನಾಡಿ, ಮಕ್ಕಳ ವಯೋಮಾನಕ್ಕೆ ತಕ್ಕಂತೆ ಸ್ವೀಕರಿಸಲು ಸಾಧ್ಯವಿರುವ ಶಿಕ್ಷಣ ಕೊಡಬೇಕು. ನಾವು ಕೊಡುವ ಶಿಕ್ಷಣದಿಂದ ಮಕ್ಕಳ ಜೀವನಶೈಲಿ ಬದಲಾಗಬೇಕು, ಬಿಜೆಪಿ ಸರ್ಕಾರ ಬಂದಾಗ ಪಠ್ಯದಲ್ಲಿ ಬೇರೆ ವಿಷಯ-ವಿಷ ಎರಡನ್ನೂ ಕೊಟ್ಟಿದ್ದರು. 2016ರಲ್ಲಿ ನಾನು ಸಚಿವನಾಗಿದ್ದಾಗ ಬರಗೂರು ರಾಮಚಂದ್ರಪ್ಪ ನೇತೃತ್ವದ ಸಮಿತಿ ಮಾಡಿದ್ದ ಶಿಫಾರಸ್ಸಿನ ಅನ್ವಯ 1ರಿಂದ 10ನೇ ತರಗತಿಯವರೆಗೂ ಪಠ್ಯಕ್ರಮವನ್ನು ಪರಿಷ್ಕರಣೆ ಮಾಡಿದೆವು. ಈಗಲೂ ಬರಗೂರು ರಾಮಚಂದ್ರಪ್ಪ ಸಮಿತಿ ಶಿಫಾರಸು ಮಾಡಿದ್ದ ಪಠ್ಯಕ್ರಮವನ್ನೇ ಅಳವಡಿಸಲಾಗಿದೆ ಎಂದರು.
ಸಂಸದ ಪ್ರತಾಪ್ ಸಿಂಹ ಅಡ್ಜೆಸ್ಟ್ ಮೆಂಟ್ ಪಾಲಿಟಿಕ್ಸ್ ಬಗ್ಗೆ ಮಾತನಾಡಿರುವ ವಿಚಾರವಾಗಿ ಉತ್ತರಿಸಿ, ಅಡ್ಜೆಸ್ಟ್ ಮೆಂಟ್ ರಾಜಕೀಯ ನನಗೆ ಗೊತ್ತಿಲ್ಲ. ಆ ರೀತಿ ಮಾಡಿರುವವರಿಗೆ ಆ ವಿಚಾರ ಗೊತ್ತು.
ಅಡ್ಜೆಸ್ಟ್ ಮೆಂಟ್ ಮಾಡ್ಕೊಂಡು ಒಬ್ಬರನ್ನು ತುಳಿಯಲು ಮತ್ತೊಬ್ಬರನ್ನು ಬಳಸಿಕೊಳ್ಳೋದು ಸರಿಯಲ್ಲ. ಅನುಭವ ಇರುವವರು ಈ ವಿಚಾರ ಪ್ರಸ್ತಾಪ ಮಾಡಿದ್ದಾರೆ ಎಂದರು.
ಗೃಹ ಲಕ್ಷ್ಮಿ ಯೋಜನೆ ಜಾರಿಯಿಂದ ಕುಟುಂಬಗಳಲ್ಲಿ ಒಡಕುಂಟಾಗಿದೆ. ಮುಸ್ಲಿಮರಿಗೆ ಎರಡು ಮೂರು ಹೆಂಡತಿಯರಿರುತ್ತಾರೆ, ಆಗ ಯಾರನ್ನು ಮನೆಯ ಯಜಮಾನಿ ಎಂದು ಗುರ್ತಿಸುತ್ತೀರಿ ಎಂದು ಸಂಸದ ಪ್ರತಾಪ್ ಸಿಂಹ ನೀಡಿರುವ ಹೇಳಿಕೆಗೆ ಶಾಸಕ ತನ್ವೀರ್ ಸೇಠ್ ತಿರುಗೇಟು ನೀಡಿದ್ದು, ಪ್ರತಾಪ್ ಸಿಂಹಗೆ ಆಸೆ ಇದ್ದರೆ ಇನ್ನೊಂದು ಮದುವೆಯಾಗಿ, ಅದರ ಅನುಭವವನ್ನು ನಮಗೆ ಬಂದು ಹೇಳಲಿ ಎಂದರು.
ಕೋಮು ಗಲಭೆಯಲ್ಲಿ ಮೃತಪಟ್ಟಿದ್ದ ನಾಲ್ವರು ಅಲ್ಪಸಂಖ್ಯಾತ ಕುಟುಂಬಗಳಿಗೆ ಇದೀಗ ಕಾಂಗ್ರೆಸ್ ಸರ್ಕಾರ ಪರಿಹಾರ ಘೋಷಣೆ ಮಾಡಿರುವ ವಿಚಾರವಾಗಿ ಉತ್ತರಸಿದ್ದು, ರಾಜ್ಯ ಸರ್ಕಾರದ ನಿರ್ಧಾರಕ್ಕೆ ಶಾಸಕ ತನ್ವೀರ್ ಸೇಠ್ ಸಹಮತ ವ್ಯಕ್ತಪಡಿಸಿದ್ದು, ಈ ವಿಚಾರದಲ್ಲಿ ಬಿಜೆಪಿ ಸರ್ಕಾರ ತಾರತಮ್ಯ ಮಾಡಿತ್ತು. ಬಿಜೆಪಿ ಸರ್ಕಾರ ಮಾಡಿದ್ದ ತಪ್ಪನ್ನು ಕಾಂಗ್ರೆಸ್ ಸರ್ಕಾರ ಸರಿಮಾಡಿದೆ. ಬಿಜೆಪಿ ಅವಧಿಯಲ್ಲಿ ಆಗಿದ್ದ ಅನ್ಯಾಯವನ್ನು ಕಾಂಗ್ರೆಸ್ ಸರ್ಕಾರ ಸರಿಪಡಿಸಿದೆ ಎಂದು ತಿಳಿಸಿದರು.
ಮತಾಂತರ ನಿಷೇಧ ಕಾಯ್ದೆ ವಾಪಸ್ ಪಡೆದಿರುವ ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ, ಇದಕ್ಕೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಸಚಿವ ಸಂಪುಟದಲ್ಲಿ ನಾನಿಲ್ಲ, ಹೀಗಾಗಿ ಸಂಪುಟ ಸಭೆಯಲ್ಲಿ ಏನು ಚರ್ಚೆಯಾಗಿದೆ ಎಂದು ಗೊತ್ತಿಲ್ಲ, ಮುಂದೆ ಈ ವಿಚಾರ ಸದನದಲ್ಲಿ ಚರ್ಚೆಗೆ ಬಂದಾಗ ಉತ್ತರಿಸುತ್ತೇನೆ. ನನಗೆ ಸಚಿವ ಸ್ಥಾನ ಸಿಗದಿದ್ದಕ್ಕೆ ನನಗೆ ನಿರಾಸೆಯಾಗಿಲ್ಲ.
ನಮ್ಮ ಪಕ್ಷ ಅಧಿಕಾರಕ್ಕೆ ಬಂದಿರುವ ಖುಷಿಯಿದೆ. ಮನುಷ್ಯನ ಆಸೆಗೆ ಕೊನೆಯಿಲ್ಲ, 34 ಕ್ಕೆ 34 ಸಚಿವ ಸ್ಥಾನಗಳು ಭರ್ತಿಯಾಗಿವೆ. ಇನ್ನೂ ಅಧಿಕಾರ ಹಂಚಿಕೆ ಸಂಬಂಧ ನಡೆದಿರುವ ಗೌಪ್ಯ ಸಭೆಯ ಬಗ್ಗೆಯೂ ನನಗೆ ಗೊತ್ತಿಲ್ಲ ಎಂದು ಹೇಳಿದರು.