ಮಹದೇಶ್ವರ ಬೆಟ್ಟ: ಮಣ್ಣೆತ್ತಿನ ಅಮಾವಾಸ್ಯೆ ಅಂಗವಾಗಿ ಇಲ್ಲಿನ ಮಲೆ ಮಹದೇಶ್ವರ ಸ್ವಾಮಿ ದೇವಾಲಯದಲ್ಲಿ ಭಕ್ತರು ಮಾಡಿರುವ ವಿವಿಧ ಉತ್ಸವಗಳಿಂದ ಎರಡು ದಿನಗಳಲ್ಲಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರಕ್ಕೆ ₹1.27 ಕೋಟಿ ಆದಾಯ ಬಂದಿದೆ. ಇದರಲ್ಲಿ ಹುಂಡಿ ಕಾಣಿಕೆ ಮೊತ್ತ, ಪ್ರಮುಖ ವಸತಿಗೃಹಗಳ ಆದಾಯ ಸೇರಿಲ್ಲ.
2.5 ಲಕ್ಷಕ್ಕೂ ಹೆಚ್ಚು ಭಕ್ತರು ಭೇಟಿ ನೀಡಿರುವ ಭಾನುವಾರ ಒಂದೇ ದಿನ ₹90.49 ಲಕ್ಷ ಆದಾಯ ಬಂದಿದೆ. ಮಾದಪ್ಪನ ದರ್ಶನಕ್ಕಾಗಿ ಪ್ರಾಧಿಕಾರದ ನಿಗದಿ ಪಡಿಸಿದ್ದ ವಿಶೇಷ ಪ್ರವೇಶ ಶುಲ್ಕದಿಂದ ಭಾನುವಾರ ₹42,73,500 ಮೊತ್ತ ಸಂಗ್ರಹವಾಗಿದೆ. ಲಾಡು ಪ್ರಸಾದ ಮಾರಾಟದಿಂದ ₹20,83,325, ಉತ್ಸಾವದಿಗಳಿಂದ ₹16,65,953, ವಿವಿಧ ಸೇವೆಗಳಿಂದ ₹4,69,900, ಮಾಹಿತಿ ಕೇಂದ್ರ ಮತ್ತು ಗಿರಿದರ್ಶಿನಿಯಲ್ಲಿ ₹2,27,600 ಸಂಗ್ರಹವಾಗಿದೆ ಎಂದು ಪ್ರಾಧಿಕಾರದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬೆಳಿಗ್ಗೆಯೂ ಭಕ್ತ ಸಂದಣಿ: ಬೆಟ್ಟದಲ್ಲಿ ಸೋಮವಾರ ಬೆಳಿಗ್ಗೆಯೂ ಭಕ್ತರ ಸಂಖ್ಯೆ ಹೆಚ್ಚಿತ್ತು. ಬೆಳಿಗ್ಗೆಯೇ ಮಹದೇಶ್ವರ ಸ್ವಾಮಿಯ ದರ್ಶನ ಪಡೆದ ಭಕ್ತರು ತಮ್ಮ ಊರುಗಳಿಗೆ ಮರಳಲು ಹೊರಟರು. ಬೆಳಿಗ್ಗೆ 11 ಗಂಟೆಯ ನಂತರ ಭಕ್ತರ ಸಂಖ್ಯೆ ಕಡಿಮೆಯಾಯಿತು.