ಬೆಂಗಳೂರು : ಒಂದೆಡೆ ಪ್ರಧಾನಿ ಮೋದಿ (Narendra Modi) ಹೋದಲ್ಲಿ ಬಂದಲ್ಲಿ, ರಾಜಕೀಯ ಪಕ್ಷಗಳು ಎಗ್ಗಿಲ್ಲದೇ ಘೋಷಿಸ್ತಿರೋ ಉಚಿತ ಕೊಡುಗೆಗಳಿಂದ ದೇಶದ ಆರ್ಥಿಕತೆಗೆ ಹೊಡೆತ ಬೀಳುತ್ತೆ ಅಂತಿದ್ದಾರೆ. ಮತ್ತೊಂದೆಡೆ ಕಾಂಗ್ರೆಸ್ (Congress) ಮತದಾರರನ್ನ ಸೆಳೆಯಲು ನಿರಂತರವಾಗಿ ಒಂದಾದ ಮೇಲೊಂದರಂತೆ ಉಚಿತ ಕೊಡುಗೆಗಳ ಘೋಷಣೆ ಮಾಡುತ್ತಿದೆ. ಇದಕ್ಕೆ ಬಿಜೆಪಿ ಸಹ ತಿರುಗೇಟು ನೀಡಿದ್ದು, ಕಾಂಗ್ರೆಸ್ ಪಕ್ಷದ ಈ ಉಚಿತ ಭರವಸೆಗಳನ್ನು ಈಡೇರಿಸಲು ಆಗಲ್ಲ ಎಂದು ಕಿಡಿ ಕಾರಿದೆ.
ಬಿಜೆಪಿ ನಾಯಕರ ಪ್ರಕಾರ, ಕಾಂಗ್ರೆಸ್ ಘೋಷಣೆ ಮಾಡಿರುವ ನಾಲ್ಕು ಗ್ಯಾರಂಟಿಗಳಿಗೆ 60 ರಿಂದ 65 ಸಾವಿರ ಕೋಟಿ ಬೇಕಾಗುತ್ತೆ. ಅಷ್ಟೊಂದು ದುಡ್ಡು ಒದಗಿಸಿ, ಈ ಭರವಸೆ ಈಡೇರಿಸಲು ಸಾಧ್ಯವೇ ಇಲ್ಲ ಎಂದು ಹೇಳಿದೆ. ಈ ಬೆನ್ನಲ್ಲೇ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ವಿತರಣೆ ಮಾಡುವ ನೆಪದಲ್ಲಿ ಮತದಾರರ ದತ್ತಾಂಶ ಸಂಗ್ರಹ ಮಾಡ್ತಿದೆ ಎಂದು ಆರೋಪಿಸಿ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು ನೀಡಿದೆ.
ಕಾಂಗ್ರೆಸ್ ಕಾರ್ಯಕರ್ತರು ಮನೆ ಮನೆಗೆ ತೆರಳಿ, ಉಚಿತ ಯೋಜನೆಗಳ ಆಮಿಷ ಒಡ್ಡುವ ಕೆಲಸ ಮಾಡ್ತಿದ್ದಾರೆ. ಮತದಾರರ ವೋಟರ್ ಐಡಿ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ಬುಕ್ ಕಲೆಕ್ಟ್ ಮಾಡ್ತಿದ್ದಾರೆ. ಫೋನ್ ಪೇ, ಗೂಗಲ್ ಪೇ ನಂಬರ್ಸ್ ಕಲೆಕ್ಟ್ ಮಾಡುತ್ತಿದ್ದಾರೆ. ಇದನ್ನು ತಡೆದು, ಕಾಂಗ್ರೆಸ್ ವಿರುದ್ಧ ಕ್ರಮ ತಗೋಬೇಕು ಎಂದು ಮನವಿ ಮಾಡಿದೆ.
ಕಾಂಗ್ರೆಸ್ ಯುವಕ್ರಾಂತಿ ಸಮಾವೇಶದಲ್ಲಿ 2 ವರ್ಷಗಳವರೆಗೆ ಪ್ರತಿ ತಿಂಗಳು ನಿರುದ್ಯೋಗಿ (Unemployment) ಪದವೀಧರರಿಗೆ 3 ಸಾವಿರ ರೂ. ಹಾಗೂ ನಿರುದ್ಯೋಗಿ ಡಿಪ್ಲೊಮಾ ಪದವೀಧರರಿಗೆ 1,500 ರೂ. ನಿರುದ್ಯೋಗ ಭತ್ಯೆ ನೀಡುವ `ಯುವನಿಧಿ’ (YuvaNidhi) ಯೋಜನೆಯನ್ನ ಘೋಷಣೆ ಮಾಡಿದ್ದಾರೆ. ಕಾಂಗ್ರೆಸ್ ಈವರೆಗೆ ನೀಡಿರುವ ಭರವಸೆಗಳಿಗೆ ಎಷ್ಟು ವೆಚ್ಚ ಆಗಬಹುದು? ರಾಜ್ಯದಲ್ಲಿ ನಿರುದ್ಯೋಗ ಪ್ರಮಾಣ ಎಷ್ಟಿದೆ? ಇತರೆ ರಾಜ್ಯಗಳಲ್ಲಿ ಕಾಂಗ್ರೆಸ್ ಕೊಟ್ಟಿದ್ದ ಭರವಸೆಗಳು ಏನಾಗಿವೆ ಎಂಬುದನ್ನ ದಾಖಲೆ ಸಮೇತ ಮುಂದಿಟ್ಟಿದೆ.
ಕಾಂಗ್ರೆಸ್ (Punjab) ಗ್ಯಾರಂಟಿಗೆ ಬಿಜೆಪಿ ಕಿಡಿ: ಪಂಜಾಬ್ನಲ್ಲಿ ಕಾಂಗ್ರೆಸ್ 2017ರಲ್ಲಿ ನೀಡಿದಂತೆ ನಿರುದ್ಯೋಗಿಗಳಿಗೆ 2000 ರೂ. ಭತ್ಯೆ ನೀಡುವ ಭರವಸೆ ಈಡೇರಿಸಿಲ್ಲ. 2018ರಲ್ಲಿ ರಾಜಸ್ಥಾನದಲ್ಲಿ ನಿರುದ್ಯೋಗಿಗಳಿಗೆ 3,500 ರೂ. ಭತ್ಯೆ ಭರವಸೆಯನ್ನೂ ಭಾಗಶಃ ಈಡೇರಿಸಿಲ್ಲ (ಎರಡೂವರೆ ಲಕ್ಷಕ್ಕಿಂತ ಹೆಚ್ಚು ಆದಾಯ ಇರುವ ಕುಟುಂಬಗಳನ್ನು ಕಾಂಗ್ರೆಸ್ ಈ ಯೋಜನೆಯಿಂದ ಹೊರಗಿಟ್ಟಿದೆ.. 18 ಲಕ್ಷ ನಿರುದ್ಯೋಗಿಗಳಿದ್ದಾರೆ). 2018ರಲ್ಲಿ ಛತ್ತೀಸ್ಘಡ ಸರ್ಕಾರ ಹೇಳಿದಂತೆ ನಿರುದ್ಯೋಗಿಗಳಿಗೆ 2,500 ರೂ. ಭತ್ಯೆ ಭರವಸೆಯನ್ನು ಈಡೇರಿಸಿಲ್ಲ (ಎರಡೂವರೆ ಲಕ್ಷಕ್ಕಿಂತ ಹೆಚ್ಚು ಆದಾಯ ಇರುವ ಕುಟುಂಬಗಳನ್ನು ಕಾಂಗ್ರೆಸ್ ಈ ಯೋಜನೆಯಿಂದ ಹೊರಗಿಟ್ಟಿದೆ.. 3000 ಕೋಟಿ ಬೇಕಿದ್ದ ಜಾಗದಲ್ಲಿ 250 ಕೋಟಿ ಮೀಸಲಿಟ್ಟಿದೆ). ಹಿಮಾಚಲ ಪ್ರದೇಶದಲ್ಲಿ 1 ಲಕ್ಷ ಸರ್ಕಾರಿ ಉದ್ಯೋಗ ನೀಡುವ ಭರವಸೆಯಯನ್ನೂ ಕಾಂಗ್ರೆಸ್ ಈಡೇರಿಸಿಲ್ಲ. ಈ ಪಟ್ಟಿಯಲ್ಲಿ ಇದೊಂದು ಸುಳ್ಳಿನ ಗ್ಯಾರಂಟಿ ಕಾರ್ಡ್ ಸೇರಿದೆ ಎಂದು ಬಿಜೆಪಿ ಕಿಡಿ ಕಾರಿದೆ.
ರಾಜ್ಯದಲ್ಲಿ ನಿರುದ್ಯೋಗ ಪ್ರಮಾಣ (ಸಿಎಂಐಇ ಪ್ರಕಾರ): ಬೇರೆ ರಾಜ್ಯಗಳಿಗೆ ಹೋಲಿಸಿದಲ್ಲಿ ಕರ್ನಾಟಕದಲ್ಲಿ ನಿರುದ್ಯೋಗ ಪ್ರಮಾಣ ಕಡಿಮೆ ಇದೆ ಎಂದು ಸಿಎಂಐಇ ಹೇಳಿದೆ. ಜನವರಿ ತಿಂಗಳಲ್ಲಿ ರಾಜ್ಯದಲ್ಲಿದ್ದ ನಿರುದ್ಯೋಗ ಪ್ರಮಾಣ ಶೇ.2.5 (ರಾಜಸ್ಥಾನದಲ್ಲಿ ಶೇ.28, ದೆಹಲಿಯಲ್ಲಿ ಶೇ.20ರಷ್ಟಿದೆ), ಫೆಬ್ರವರಿ ತಿಂಗಳಲ್ಲಿ ರಾಜ್ಯದ ನಿರುದ್ಯೋಗ ಪ್ರಮಾಣ ಶೇ. 1.8ಕ್ಕೆ ಇಳಿಕೆಯಾಗಿದೆ ಎಂದು ಹೇಳಲಾಗಿದೆ.