ಚಾಮರಾಜನಗರ: ಬಾಕಿ ವೇತನ ಕೇಳಲು ಹೋದ ವೇಳೆ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಅವಹೇಳನ ಮಾಡಿದ್ದಾರೆ ಎಂಬ ಆರೋಪ ಹೊತ್ತಿರುವ ಚಾಮರಾಜನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಡೀನ್ ಡಾ.ಸಂಜೀವ್ ವಿರುದ್ದ ಶಾಸಕ ಸಿ. ಪುಟ್ಟರಂಗಶೆಟ್ಟಿ ಸಿಎಂಗೆ ಪತ್ರ ಬರೆದಿದ್ದಾರೆ.
ರಾಷ್ಟ್ರ ನಾಯಕರನ್ನು ಅವಹೇಳನ ಮಾಡಿ ಜನರ ಮನಸ್ಸಿಗೆ ನೋವುಂಟು ಮಾಡಿದ್ದಾರೆ, ಈಗಾಗಲೇ ಸಂಜೀವ್ ವಿರುದ್ಧ ಸಾಕಷ್ಟು ಭ್ರಷ್ಟಾಚಾರ ಆರೋಪವೂ ಕೇಳಿಬಂದಿದ್ದು ಸರ್ಕಾರಕ್ಕೆ ಮುಜುಗುರ ಉಂಟಾಗುವ ಸನ್ನಿವೇಶ ಸೃಷ್ಟಿಸಿದ್ದು ಕೂಡಲೇ ಅವರನ್ನು ಸಿಮ್ಸ್ ಡೀನ್ ಹುದ್ದೆಯಿಂದ ಬಿಡುಗಡೆ ಮಾಡಬೇಕೆಂದು ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.
ಶಾಸಕರು ಪತ್ರ ಬರೆಯುತ್ತಿದ್ದಂತೆ ಆರೋಗ್ಯ ಮತ್ತು ಕುಟುಂಬ ಇಲಾಖೆಯ ಪ್ರಧಾನ ಕಾರ್ಯದರ್ಶಿ ನವೀನ್ ರಾಜ್ ಸಿಂಗ್ ಸೂಕ್ತ ತನಿಖೆಯ ದ್ವಿಸದಸ್ಯ ತಂಡ ರಚಿಸಿ ಕೂಡಲೇ ವರದಿ ಕೊಡುವಂತೆ ಸೂಚನೆ ನೀಡಿದ್ದಾರೆ.
ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದ ನಿರ್ದೇಶಕ ಡಾ.ಕೆ.ರವಿ ಹಾಗೂ ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದ ಆಡಳಿತಾಧಿಕಾರಿ ಕೆ.ಎ.ಉಮಾ ಅವರ ಸಮಿತಿ ರಚನೆ ಮಾಡಲಾಗಿದ್ದು ಕೂಡಲೇ ಚಾಮರಾಜನಗರ ಮೆಡಿಕಲ್ ಕಾಲೇಜಿಗೆ ಚಾಮರಾಜನಗರ ಡಿಸಿ ಹಾಗೂ ಎಸ್ಪಿ ಅವರೊಟ್ಟಿಗೆ ತೆರಳಿ ಪ್ರಕರಣದ ಪರಿಶೀಲನೆ ನಡೆಸಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವಂತೆ ನವೀನ್ ರಾಜ್ ಆದೇಶಿಸಿದ್ದಾರೆ.