ನವಲಗುಂದ: ಮೃತಪಟ್ಟಿದ್ದ ಬಾಲಕನೊಬ್ಬನನ್ನು ಅಂತ್ಯಸಂಸ್ಕಾರಕ್ಕೆ ತೆಗೆದುಕೊಂಡು ಹೋಗಿದ್ದ ಸಂದರ್ಭದಲ್ಲಿ ಮತ್ತೆ ಜೀವ ಬಂದಿರುವ ಅಚ್ಚರಿಯ ಘಟನೆ ತಾಲ್ಲೂಕಿನ ಬಸಾಪುರ ಗ್ರಾಮದಲ್ಲಿ ಗುರುವಾರ ನಡೆದಿದೆ.
ಒಂದೂವರೆ ವರ್ಷದ ಆಕಾಶ ಬಸವರಾಜ ಪೂಜಾರ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದರು. ಈಗ ಮತ್ತೆ ಬಾಲಕ ಬದುಕಿದ್ದಾನೆ.
ಕಳೆದ ಒಂದು ತಿಂಗಳಿನಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಬಾಲಕನನ್ನು ವೈದ್ಯರ ಸಲಹೆಯಂತೆ ಗದಗ ನಗರದ ಜರ್ಮನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಮತ್ತೆ ಧಾರವಾಡದ ಎಸ್.ಡಿ.ಎಂ ಆಸ್ಪತ್ರೆಗೆ ದಾಖಲಿಸಿ, ನಂತರ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಕರೆತರಲಾಗಿತ್ತು ಎಂದು ಬಾಲಕ ತಂದೆ ಬಸವರಾಜ್ ಪೂಜಾರ ಹೇಳಿದರು.
ಚಿಕಿತ್ಸೆ ನೀಡಿದ್ದ ಕಿಮ್ಸ್ ವೈದ್ಯರು, ಮಗುವಿನ ಹೃದಯ ಬಡಿತ ಕಡಿಮೆ ಪ್ರಮಾಣದಲ್ಲಿದ್ದು, ಆಮ್ಲಜನಕ ವ್ಯವಸ್ಥೆ ತೆಗೆದರೆ ಬದುಕುಳಿಯುವುದಿಲ್ಲ ಎಂದು ಗುರುವಾರ ಸಂಜೆ ಹೇಳಿದ್ದರು. ಬಳಿಕ 7.30ರ ಸುಮಾರಿಗೆ ಮಗು ಮೃತಪಟ್ಟಿದೆ ಎಂದು ಹೇಳಿ ಪಾಲಕರ ಸಹಿ ಪಡೆದು, ಮೃತದೇಹವನ್ನು ಪೆÇೀಷಕರಿಗೆ ಹಸ್ತಾಂತರಿಸಿದ್ದರು.
ಮೃತದೇಹವನ್ನು ತೆಗೆದುಕೊಂಡು ಹೋಗಿ ಸ್ಮಶಾನದಲ್ಲಿ ಹೂಳುವ ಸಂದರ್ಭದಲ್ಲಿ ಸಂಪ್ರದಾಯದಂತೆ ಬಾಯಿಗೆ ನೀರು ಬಿಡಲಾಯಿತು. ಆಗ ಕೈಕಾಲು ಆಡಿಸಿದ್ದರಿಂದ ಮತ್ತೆ ನವಲಗುಂದ ಆಸ್ಪತ್ರೆಗೆ ಕರೆತರಲಾಯಿತು. ವೈದ್ಯರ ಸೂಚನೆ ಮೇರೆ ಧಾರವಾಡದ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.