ಮೈಸೂರು: ಅಪ್ರಾಪ್ತೆ ನಾದಿನಿಯ ಮೇಲೆ ಆತ್ಯಾಚಾರವೆಸಗಿ ಆಕೆ ಗರ್ಭಿಣಿಯಾಗಲು ಕಾರಣನಾದ ವ್ಯಕ್ತಿಯೊಬ್ಬನಿಗೆ ನಗರದ ಫೋಸ್ಕೊ
ವಿಶೇಷ ನ್ಯಾಯಾಲಯ 25 ವರ್ಷಗಳ ಕಠಿಣ ಸಜೆ ಹಾಗೂ ಒಂದು ಲಕ್ಷ ರೂ. ದಂಡ ವಿಧಿಸಿ ತೀರ್ಪು ನೀಡಿದೆ.
ಮೈಸೂರು ತಾಲೂಕಿನ ದುದ್ದಗೆರೆ ಗ್ರಾಮದ ನಿವಾಸಿ ರಾಚಯ್ಯ ಎಂಬವರ ಪುತ್ರ ರಾಚಪ್ಪ ಶಿಕ್ಷೆಗೊಳಗಾದವ. ಈತನಿಗೆ ವಿವಾಹವಾಗಿತ್ತು. ಅಡುಗೆ ಕೆಲಸ ಮಾಡುತ್ತಿದ್ದ ಈತ ಹೆಚ್ಚಾಗಿ ತನ್ನ ಮಾವನ ಮನೆಯಲ್ಲಿಯೇ ಇರುತ್ತಿದ್ದ ಅಪ್ರಾಪ್ತ ವಯಸ್ಸಿನ ನಾದಿನಿಯ ಜೊತೆ ಸಲುಗೆಯಿಂದ ಇರುತ್ತಿದ್ದ ಎನ್ನಲಾಗಿದೆ.
2022ರ ಮಾರ್ಚ್ನಲ್ಲಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ನಾದಿನಿ ಜೊತೆ ದೈಹಿಕ ಸಂಪರ್ಕ ಬೆಳೆಸಿದ್ದ. ಯಾರಿಗಾದರೂ ಹೇಳಿದರೆ ಕೊಲೆಮಾಡುವುದಾಗಿ ಬೆದರಿಕೆ ಹಾಕಿದ್ದ. ಇದಾದ ನಂತರವೂ ಹಲವಾರು ಬಾರಿ ದೈಹಿಕ ಸಂಪರ್ಕ ಬೆಳೆಸಿದ್ದರಿಂದ ಅಪ್ರಾಪ್ತೆ ನಾದಿನಿ ಗರ್ಭಿಣಿಯಾಗಿದ್ದಳು.
ಈ ಘಟನೆಯಿಂದ ಅಪ್ರಾಪ್ತೆಯ ತಾಯಿ ವರುಣ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಬಗ್ಗೆ ತನಿಖೆ ನಡೆಸಿದ ಇನ್ಸ್ ಪೆಕ್ಟರ್ ಸ್ವರ್ಣ ಅವರು ಆರೋಪಿಯ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಶೈಮ ಖಮ್ರೋಜ್ ಅವರು ಆರೋಪಿಗೆ ಶಿಕ್ಷೆ ಪ್ರಕಟಿಸಿದ್ದಾರೆ.
ದಂಡದ ಮೊತ್ತದಲ್ಲಿ ಸಂತ್ರಸ್ತೆಗೆ 75 ಸಾವಿರ ರೂ. ನೀಡಬೇಕು ಎಂದಿರುವ ನ್ಯಾಯಾಧೀಶರು ಆಕೆ ಐದು ಲಕ್ಷ ರೂ. ಪರಿಹಾರಕ್ಕೆ ಅರ್ಹಳು ಎಂದು ತೀರ್ಪಿನಲ್ಲಿ ತಿಳಿಸಿದ್ದಾರೆ. ಸರ್ಕಾರದ ಪರವಾಗಿ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಕೆ.ಬಿ.ಜಯಂತಿ ವಾದ ಮಂಡಿಸಿದ್ದರು.