ಬೆಂಗಳೂರು: ರಾಜ್ಯ ಪೊಲೀಸ್ ಪೊಲೀಸ್ ಮಹಾ ನಿರ್ದೇಶಕ (ಡಿಜಿ-ಐಜಿಪಿ) ರಾಗಿ ಡಾ.ಅಲೋಕ್ ಮೋಹನ್ ಅವರು ಇಂದು ಅಧಿಕಾರ ವಹಿಸಿಕೊಂಡರು.
ಅಗ್ನಿಶಾಮಕ ದಳ ಮತ್ತು ಗೃಹ ರಕ್ಷಕದಳದ ಮುಖ್ಯಸ್ಥರಾಗಿರುವ ಅಲೋಕ್ ಮೋಹನ್? ಅವರು ಹೆಚ್ಚುವರಿಯಾಗಿ ಡಿಜಿ-ಐಜಿಪಿಯಾಗಿ ಅಧಿಕಾರವನ್ನು ಸಿಬಿಐ ನಿರ್ದೇಶಕರಾಗಿ ಕೇಂದ್ರ ಸೇವೆಗೆ ತೆರಳುತ್ತಿರುವ ಪ್ರವೀಣ್ ಸೂದ್ ಅವರಿಂದ ವಹಿಸಿಕೊಂಡರು.
ಸೇವಾ ಹಿರಿತನದ ಆಧಾರದ ಮೇಲೆ ೮೭ನೇ ಬ್ಯಾಚ್ನ ಅಧಿಕಾರಿ ಹಾಗೂ ಪ್ರಸ್ತುತ ರಾಜ್ಯ ಅಗ್ನಿಶಾಮಕ ದಳ ಮತ್ತು ಗೃಹ ರಕ್ಷಕದಳದ ಮುಖ್ಯಸ್ಥರಾಗಿರುವ ಅಲೋಕ್ ಮೋಹನ್ ಅವರನ್ನು ಮುಂದಿನ ರಾಜ್ಯ ಪೊಲೀಸ್ ಡಿಜಿ ಮತ್ತು ಐಜಿಪಿಯಾಗಿ ರಾಜ್ಯ ಸರ್ಕಾರ ಹೆಚ್ಚುವರಿ ಹೊಣೆ ನೀಡಿದೆ.
ಮೂರ್ನಾಲ್ಕು ದಿನಗಳ ಬಳಿಕ ಡಿಜಿ-ಐಜಿಪಿಯಾಗುವ ರಾಜ್ಯದ ಐವರು ಅಧಿಕಾರಿಗಳ ಹೆಸರನ್ನು ಯುಪಿಎಸ್ ಸಿಗೆ ಕಳುಹಿಸಿ ಅಲೋಕ್ ಮೋಹನ್ ಅವರ ಹೆಸರನ್ನು ಬಹುತೇಕ ಅಂತಿಮಗೊಳಿಸಿದೆ.
ಅಲ್ಲಿಂದ ಅಲೋಕ್ ಮೋಹನ್ ಅವರು ರಾಜ್ಯದ ಡಿಜಿ-ಐಜಿಪಿ ಹುದ್ದೆಯನ್ನು ಅಧಿಕೃತವಾಗಿ ವಹಿಸಿಕೊಳ್ಳಲಿದ್ದು ಅವರ ಸೇವಾವಧಿಯು ಇನ್ನೂ ಎರಡು ವರ್ಷಗಳ ಕಾಲ ಇರಲಿದೆ.
ಬಿಹಾರ ರಾಜ್ಯದ ಪಾಟ್ನಾ ಮೂಲದವರಾದ ಡಾ.ಅಲೋಕ್ ಮೋಹನ್, ೧೯೬೫ ರ ಏಪ್ರಿಲ್ ೧೮ರಂದು ಜನಿಸಿದರು. ಉತ್ತರಾಖಂಡದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಎಂಎಸ್ಸಿ, ಭಾರತೀಯ ಆಂತರಿಕಾ ಭದ್ರತೆ ಬಗ್ಗೆ ಪಿಎಚ್ಡಿ ಪಡೆದುಕೊಂಡಿದ್ದಾರೆ. ಕರ್ನಾಟಕದ ಕರಾವಳಿ, ಉತ್ತರ ಕರ್ನಾಟಕ ಭಾಗದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಅಲೋಕ್ ಮೋಹನ್, ಸಿಐಡಿ ಡಿಜಿಪಿ, ಬೆಂಗಳೂರು ಸಿಸಿಬಿಯ ಜಂಟಿ ಪೊಲೀಸ್ ಆಯುಕ್ತ, ಬಳಿಕ ಮಂಗಳೂರು ಪಶ್ಚಿಮ ವಲಯ ಐಜಿಪಿಯಾಗಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ. ಎಡಿಜಿಪಿ ಆಡಳಿತ ಹಾಗೂ ಕಾರಾಗೃಹ ಮತ್ತು ಅಗ್ನಿಶಾಮಕ ದಳ ಡಿಜಿಪಿಯಾಗಿಯೂ ಕಾರ್ಯ ನಿರ್ವಹಿಸಿದ್ದರು. ಈಗ ರಾಜ್ಯ ಪೊಲೀಸ್ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ.
ಸಿಬಿಐಗೆ ಸೂದ್:
ರಾಜ್ಯದ ಡಿಜಿ-ಐಜಿಪಿಯ ಅಧಿಕಾರವನ್ನು ಹಸ್ತಾಂತರಿಸಿದ ಹಿರಿಯ ಐಪಿಎಸ್ ಅಧಿಕಾರಿ ಪ್ರವೀಣ್ ಸೂದ್ ಅವರು ಕೇಂದ್ರೀಯ ತನಿಖಾ ದಳದ (ಸಿಬಿಐ) ನಿರ್ದೇಶಕರಾಗಿ ಮೇ.೨೫ರಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಅಧಿಕಾರವನ್ನು ಹಸ್ತಾಂತರಿಸಿದ ಸೂದ್ ಅವರು ನಾಳೆ ನವದೆಹಲಿಗೆ ತೆರಳಿದ್ದು ಇಂದು ಬೆಳಿಗ್ಗೆ ಅವರಿಗೆ ಪೊಲೀಸ್ ಇಲಾಖೆಯ ವತಿಯಿಂದ ನಿರ್ಗಮನ ಪಥಸಂಚಲನ ನಡೆಸಲಾಯಿತು.
ಪಥಸಂಚಲನದಲ್ಲಿ ಪಾಲ್ಗೊಂಡು ಭಾವನಾತ್ಮಕವಾಗಿ ಮಾತನಾಡಿದ ಸೂದ್ ಅವರು ರಾಜ್ಯ ಪೊಲೀಸ್ ಇಲಾಖೆಯಲ್ಲಿ ೩೭ ವರ್ಷಗಳ ಸುಧೀರ್ಘ ಸೇವೆ ಸಲ್ಲಿಸಿರುವುದಕ್ಕೆ ತೃಪ್ತಿ ವ್ಯಕ್ತಪಡಿಸಿದರು.
ಕರ್ನಾಟಕ ನನ್ನ ಕರ್ಮಭೂಮಿಯಾಗಿದ್ದು ಜನ್ಮಭೂಮಿಗಿಂತ ಹೆಚ್ಚಿನ ತೃಪ್ತಿ ನೆಮ್ಮದಿ ನೀಡಿದ್ದು ಎರಡು ವರ್ಷಗಳ ಕೇಂದ್ರ ಸೇವೆಯ ಅವಧಿಯ ಬಳಿಕ ಬೆಂಗಳೂರಿಗೆ ಬಂದು ಇಲ್ಲೇ ನೆಲೆಸಿ ನಿವೃತ್ತ ಜೀವನ ನಡೆಸುತ್ತೇನೆ ಎಂದರು.
ಪೊಲೀಸ್ಗೆ ಹೆಚ್ಚು ಸೌಲಭ್ಯ:
ಪೊಲೀಸ್ ಅಧಿಕಾರಿಗಳಿಂದ ಮುಖ್ಯಪೇದೆ ಪೇದೆಗಳಿಗೆ ಹೆಚ್ಚಿನ ಸೌಲಭ್ಯ, ಮುಂಬಡ್ತಿ, ವಸತಿ ಕಲ್ಪಿಸಲು ಶಕ್ತಿಮೀರಿ ಇಲಾಖೆಯ ಎಲ್ಲರ ಸಹಕಾರ ನಾಡಿನ ಜನರ ಬೆಂಬಲದೊಂದಿಗೆ ಶ್ರಮಿಸಿದ್ದೇನೆ ಎಂದು ತಿಳಿಸಿದರು.
ನಿರ್ಗಮನ ಪಥಸಂಚಲನದಲ್ಲಿ ಸೂದ್ ಅವರ ಪತ್ನಿ ಮಕ್ಕಳು ಕುಟುಂಬಸ್ಥರು ಪಾಲ್ಗೊಂಡಿದ್ದರು. ಕೆಎಸ್ಆರ್ಪಿಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಸೀಮಾಂತ್ ಕುಮಾರ್ ಸಿಂಗ್ ಅವರು ಪಥಸಂಚಲನದ ನೇತೃತ್ವ ವಹಿಸಿದ್ದರು.
ಬಹುತೇಕ ಡಿಜಿ ಎಡಿಜಿಪಿ, ಐಜಿ, ಡಿಐಜಿ, ಡಿಸಿಪಿ, ಎಸ್ಪಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.