ನವದೆಹಲಿ: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷಾಧಿಕಾರ ನೀಡಲಾಗಿದ್ದ ಸಂವಿಧಾನದ ಆರ್ಟಿಕಲ್ ೩೭೦ ವಿಧಿ ರದ್ದು ಮಾಡಿದ ಕೇಂದ್ರ ಸರ್ಕಾರದ ನಿರ್ಧಾರ ಸರಿ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಆರ್ಟಿಕಲ್ ೩೭೦ ಅಡಿ ವಿಶೇಷಾಧಿಕಾರ ನೀಡಿಕೆ ಕೇವಲ ತಾತ್ಕಾಲಿಕ ನಿರ್ಧಾರವಷ್ಟೇ ಆಗಿತ್ತು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಯುದ್ಧದ ಸಂದರ್ಭದಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷಾಧಿಕಾರ ನೀಡಲಾಗಿತ್ತು ಎಂದಿರುವ ಸುಪ್ರೀಂ ಕೋರ್ಟ್, ಆರ್ಟಿಕಲ್ ೩೭೦ ರದ್ದತಿಗೆ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಗೆ ಯಾವುದೇ ಅಧಿಕಾರ ಇಲ್ಲ ಎಂದು ಹೇಳಿದೆ.
ಇನ್ನು ಕೇಂದ್ರ ಸರ್ಕಾರಕ್ಕೆ, ರಾಷ್ಟ್ರಪತಿಗಳಿಗೆ ಆರ್ಟಿಕಲ್ ೩೭೦ ರದ್ದತಿ ಅಧಿಕಾರ ಇದೆ. ರಾಷ್ಟ್ರಪತಿಗಳ ನಿರ್ಧಾರವೂ ಸುಪ್ರೀಂ ಕೋರ್ಟ್ನ ಪರಾಮರ್ಶೆಗೆ ಒಳಪಡುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಇದೇ ವೇಳೆ ಜಮ್ಮು ಮತ್ತು ಕಾಶ್ಮೀರದಲ್ಲಿ ರಾಷ್ಟ್ರಪತಿ ಆಳ್ವಿಕೆ ಇದ್ದಾಗ ರಾಜ್ಯದಲ್ಲಿ ವಿಧಾನಸಭೆ ಇರಲಿಲ್ಲ ಎಂದು ಭಾವಿಸಬಾರದು ಎಂದಿರುವ ಸುಪ್ರೀಂ ಕೋರ್ಟ್, ಕರ್ನಾಟಕದ ಎಸ್. ಆರ್. ಬೊಮ್ಮಾಯಿ ಪ್ರಕರಣ ಉಲ್ಲೇಖಿಸಿದೆ.
ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷಾಧಿಕಾರ ನೀಡಿದ್ದ ಸಂವಿಧಾನದ ಆರ್ಟಿಕಲ್ ೩೭೦ ರದ್ದು ಮಾಡಿದ್ದ ಕೇಂದ್ರ ಸರ್ಕಾರದ ನಿರ್ಧಾರ ಪ್ರಶ್ನಿಸಿ ಸುಪ್ರೀಂ ಕೋರ್ಟ್ನಲ್ಲಿ ದಾಖಲಾಗಿದ್ದ ಪ್ರಕರಣ ಸಂಬಂಧ ಸರ್ವೋಚ್ಛ ನ್ಯಾಯಾಲಯ ತೀರ್ಪು ನೀಡಿದೆ.
೨೦೧೯ರಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷಾಧಿಕಾರ ರದ್ದು ಮಾಡಿದ್ದ ಕೇಂದ್ರ ಸರ್ಕಾರ, ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಪ್ರಾಂತ್ಯಗಳನ್ನು ವಿಭಜಿಸಿ ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಮಾಡಿತ್ತು. ಈ ಭಾಹಗಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನಗಳನ್ನೂ ರದ್ದು ಮಾಡಿತ್ತು.
ಕೇಂದ್ರದ ಈ ನಿಲುವು ಪ್ರಶ್ನಿಸಿ ದಾಖಲಾಗಿದ್ದ ಪ್ರಕರಣಗಳ ಸಂಬಂಧ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಸಾಂವಿಧಾನಿಕ ಪೀಠ ರಚನೆ ಮಾಡಿತ್ತು. ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ. ವೈ. ಚಂದ್ರಚೂಡ್ ಸಾರಥ್ಯದ ಪೀಠವು ಪ್ರಕರಣದ ಕುರಿತಾಗಿ ಸಮಗ್ರ ವಿಚಾರಣೆ ನಡೆಸಿತ್ತು. ೧೬ ದಿನಗಳ ಕಾಲ ಸುದೀರ್ಘ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ಸೆಪ್ಟೆಂಬರ್ ೫ ರಂದು ತನ್ನ ತೀರ್ಪನ್ನು ಕಾಯ್ದಿರಿಸಿತ್ತು.
ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷಾಧಿಕಾರವನ್ನು ಕೇಂದ್ರ ಸರ್ಕಾರವು ಏಕಪಕ್ಷೀಯವಾಗಿ ರದ್ದು ಮಾಡಲು ಸಾಧ್ಯವಿಲ್ಲ ಎಂದು ಪ್ರತಿವಾದಿಗಳು ವಾದಿಸಿದ್ದರು. ೧೯೫೭ ರಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಸಂವಿಧಾನದ ವಿಧಿ ೩೭೦ ಅಡಿ ವಿಶೇಷ ಅಧಿಕಾರ ಜಾರಿಯಲ್ಲಿತ್ತು.