ಬೆಂಗಳೂರು: ರಾಜ್ಯಕ್ಕೆ ಈಗಾಗಲೇ ಮುಂಗಾರು ಪ್ರವೇಶ ಮಾಡಿದ್ದು, ಅದರಲ್ಲೂ ಕರಾವಳಿ ಭಾಗಗಳಲ್ಲಿ ಮಳೆರಾಯ ಅಬ್ಬರಿಸಿ ಬೊಬ್ಬೆರೆಯುತ್ತಲೇ ಇದ್ದಾನೆ. ಮತ್ತೊಂದೆಡೆ ಈ ಭಾಗದ ಜನರಿಗೆ ಬಿಪರ್ಜಾಯ್ ಚಂಡಮಾಡುತದ ಆತಂಕವೂ ಕೂಡ ಎದುರಾಗಿದೆ. ಇನ್ನುಳಿದಂತೆ ನಿನ್ನೆ (ಜೂನ್ 14) ರಾಜ್ಯದ ಹಲವೆಡೆ ಮಳೆ ಬಿದ್ದಿದ್ದಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಹಾಗೆಯೇ ಇಂದು (ಜೂನ್ 15) ಕೂಡ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ ಎನ್ನುವ ಮುನ್ಸೂಚನೆ ನೀಡಿದೆ.
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಿನ್ನೆ ಅಂದರೆ ಬುಧವಾರ ಬೆಳಗ್ಗೆಯಿಂದ ಸಂಜೆವರೆಗೂ ಬಿಸಿಲಿನ ವಾತವರಣವೇ ಮುಂದುವರೆದಿತ್ತು. ಆದರೆ ಸಂಜೆ ಬಳಿಕ ಮೋಡ ಕವಿದ ವಾತಾವರಣ ಇತ್ತು. ಆದರೂ ನಗರದ ಹಲವೆಡೆ ಮಾತ್ರ ಜಿನುಗು ಮಳೆ ಬಿದ್ದಿದೆ ಎಂದು ಹವಾಮನ ಇಲಾಖೆ ತಿಳಿಸಿದೆ. ಇನ್ನು ಇಂದು ನಗರದ ಹಲವೆಡೆ ಬೆಳಗ್ಗೆಯಿಂದಲೇ ಮೋಡ ಕವಿದಿದ್ದು, ಇನ್ನು ಕೆಲವೆಡೆ ಬಿಸಿಲಿನ ವಾತಾವರಣ ಮುಂದುವರೆದಿದೆ. ಹಾಗೆಯೇ ಇಲ್ಲಿ ಸಂಜೆ ವೇಳೆಗೆ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಿದೆ.
ಮತ್ತೊಂದೆಡೆ ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಮುಂಗಾರು ಆರ್ಭಟ ಕಡಿಮೆ ಆಗಿದೆ. ಕೆಲವೆಡೆ ಮಳೆಯಾಗುತ್ತಿದ್ದರೆ ಇನ್ನು ಕೆಲವೆಡೆ ಮಳೆಯೇ ಇಲ್ಲದಂತಾಗಿದೆ. ಇನ್ನು ಮುಂದಿನ 3-4 ದಿನಗಳ ಕಾಲ ರಾಜ್ಯದ ಕರಾವಳಿಯ ಹಲವು ಜಿಲ್ಲೆಗಳಲ್ಲಿ ಮತ್ತು ಒಳನಾಡಿನ ಒಂದೆರಡು ಕಡೆ ಗುಡುಗು ಸಹಿತ ಭಾರೀ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಅಲ್ಲದೆ ಬೆಂಗಳೂರಿನಲ್ಲೂ ಸಂಜೆ ವೇಳೆ ಮಳೆರಾಯ ಅಬ್ಬರಿಸುವ ಸಾಧ್ಯತೆಯಿದೆ. ಆದ್ದರಿಂದ ಕಚೇರಿ ಕೆಲಸಗಳಿಗೆ ಹೋಗಿರುವವರು ಬೇಗ ಮನೆ ತಲುಪುವುದು ಒಳ್ಳೆಯದು. ಇನ್ನು ಕಳೆದ ಎರಡು ದಿನಗಳಿಂದ ನಗರದ ಹಲವೆಡೆ ತುಂತುರು ಮಳೆಯಾಗಿದೆ. ಆದರೆ ಇಂದು ಇಲ್ಲಿ ಮಳೆ ಆರ್ಭಟ ಹೆಚ್ಚಿರಲಿದೆ ಎಂದು ತಿಳಿಸಿದೆ.
ಈ ಭಾಗಗಳಲ್ಲಿ ಮಳೆ ಆರ್ಭಟ
ಬುಧವಾರ ಆರ್ಟಿ ನಗರ, ಶಿವಾಜಿನಗರ, ಹೆಬ್ಬಾಳ, ಎಂಜಿ ರಸ್ತೆ, ಆರ್.ಆರ್. ನಗರ, ಕೆ.ಆರ್.ಪುರ, ಬೈಯ್ಯಪ್ಪನಹಳ್ಳಿ, ಇಂದಿರಾನಗರ, ಟ್ರಿನಿಟಿ, ಮೆಯೋಹಾಲ್, ಶಾಂತಿನಗರ, ಮೆಜೆಸ್ಟಿಕ್ ಸೇರಿ ಹಲವೆಡೆ ತುಂತುರು ಮಳೆ ಆಗಿದೆ. ಅಲ್ಲದೆ ಕರಾವಳಿಯ ಬಹುತೇಕ ಜಿಲ್ಲೆಗಳು ಮತ್ತು ಒಳನಾಡಿನ ಒಂದೆರಡು ಕಡೆಗಳಲ್ಲಿ ಮಳೆ ಬಿದ್ದಿದೆ. ಮತ್ತೊಂದೆಡೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು, ಮಂಗಳೂರಿನಲ್ಲಿ 3 ಸೆ.ಮೀ. ಮಳೆ ಬಿದ್ದಿದೆ ಎಂದು ತಿಳಿಸಿದೆ.
ಉತ್ತರ ಕನ್ನಡ ಜಿಲ್ಲೆಯ ಕದ್ರಾ, ಉಡುಪಿ ಜಿಲ್ಲೆಯ ಕೋಟದಲ್ಲಿ 2 ಸೆಂ.ಮೀ., ಪಣಂಬೂರು, ಮೂಲ್ಕಿ, ಉಪ್ಪಿನಂಗಡಿ, ಧರ್ಮಸ್ಥಳ, ಅಂಕೋಲಾ, ಗೋಕರ್ಣ, ಕುಮಟಾ, ಕುಂದಾಪುರ, ಹುಮನಾಬಾದ್, ಭಾಗಮಂಡಲ, ದೊಡ್ಡಬಳ್ಳಾಪುರ, ಬೇಲೂರು ಹಾಗೂ ತಿಪಟೂರಿನಲ್ಲಿ 1 ಸೆಂ.ಮೀ. ಮಳೆ ಸುರಿದಿದೆ ಎಂದು ತಿಳಿಸಿದೆ.