ಕಲ್ಲುಸಕ್ಕರೆ ನೋಡಲಿಕ್ಕೆ ಕಲ್ಲಿನಂತಿರುತ್ತದೆಯೇ ವಿನಃ ರುಚಿಯಲ್ಲಿ ಸಕ್ಕರೆಯೇ. ಸಾಮಾನ್ಯ ಸಕ್ಕರೆಯನ್ನೇ ಹರಳುಗಟ್ಟಿಸಿ ಕಲ್ಲು ಸಕ್ಕರೆಯನ್ನು ತಯಾರಿಸುವಾಗ ಕೆಲವು ಸಿಹಿಅಂಶಗಳು ನಷ್ಟವಾಗುವ ಕಾರಣ ಸಕ್ಕರೆಗಿಂತಲೂ ಇದರಲ್ಲಿ ಸಿಹಿ ಕಡಿಮೆ ಇರುತ್ತದೆ. ಕಲ್ಲುಸಕ್ಕರೆಯನ್ನು ಸಿಹಿಕಾರಕವಾಗಿ ತಯಾರಿಸಲಾಗುತ್ತದೆಯಾದರೂ ಇದರ ಬಳಕೆ ಔಷಧೀಯ ರೂಪದಲ್ಲಿಯೇ ಹೆಚ್ಚು. ಇದರಲ್ಲಿ ಉತ್ತಮ ಪ್ರಮಾಣದ ವಿಟಮಿನ್ನುಗಳು, ಖನಿಜಗಳು ಹಾಗೂ ಅಮೈನೋ ಆಮ್ಲವಿದೆ. ವಿಶೇಷವಾಗಿ ಸಾಮಾನ್ಯವಾಗಿ ಮಾಂಸಾಹಾರದಲ್ಲಿ ಮಾತ್ರ ಕಂಡುಬರುವ ವಿಟಮಿನ್ ಬಿ12 ಕಲ್ಲುಸಕ್ಕರೆಯಲ್ಲಿದೆ. ಸಕ್ಕರೆಗಿಂತಲೂ ಕಲ್ಲು ಸಕ್ಕರೆ ಹೆಚ್ಚು ಆರೋಗ್ಯ ಕರವಾಗಿದೆ. ಹಾಗಾಗಿ ಸಿಹಿಕಾರಕವಾಗಿ ಸಕ್ಕರೆಯ ಬದಲು ಬಳಸುವುದರಿಂದ ಕೆಲವಾರು ಪ್ರಯೋಜನಗಳಿವೆ.
ಉಸಿರಿನ ತಾಜಾತನ
ಊಟದ ಬಳಿಕ ಮುಕ್ಕಳಿಸದೇ ಇದ್ದರೆ ಅಥವಾ ಹಲ್ಲುಜ್ಜಲು ಮರೆತರೆ ಹಲ್ಲುಗಳ ಸಂಧುಗಳಲ್ಲಿ ಸಿಲುಕಿದ್ದ ಆಹಾರಕಣಗಳನ್ನು ಬ್ಯಾಕ್ಟೀರಿಯಾಗಳು ಕೊಳೆಸಿ ಬಾಯಿಯ ದುರ್ಗಂಧಕ್ಕೆ ಕಾರಣವಾಗುತ್ತವೆ. ಆದ್ದರಿಂದ ಊಟದ ಬಳಿಕ ಚಿಕ್ಕ ತುಂಡು ಕಲ್ಲುಸಕ್ಕರೆಯನ್ನು ತಿಂದರೆ ಈ ಬ್ಯಾಕ್ಟೀರಿಯಾಗಳನ್ನು ಕೊಂದು ಉಸಿರಿನ ತಾಜಾತನ ಉಳಿಸಿಕೊಳ್ಳಲು ನೆರವಾಗುತ್ತದೆ.
ಕೆಮ್ಮಿನ ನಿವರಣೆ
ತೇವವಾಗಿರುವ ಗಂಟಲಿನಲ್ಲಿ ಕ್ರಿಮಿಗಳು ಆಕ್ರಮಣ ಮಾಡಿದರೆ ಅಥವಾ ವೈರಸ್ಸುಗಳ ಧಾಳಿಯಿಂದ ಜ್ವರ ಎದುರಾಗಿದ್ದರೆ ಕೆಮ್ಮು ಸಹಾ ಆವರಿಸಿಕೊಳ್ಳುತ್ತದೆ. ಕಲ್ಲುಸಕ್ಕರೆಯಲ್ಲಿರುವ ಔಷಧೀಯ ಗುಣಗಳು ಕ್ರಿಮಿಗಳನ್ನು ನಿವಾರಿಸಿ ಕೆಮ್ಮಿನ ಶಮನಕ್ಕೆ ನೆರವಾಗುತ್ತವೆ. ಕೆಮ್ಮಿದ್ದಾಗ ಕಲ್ಲುಸಕ್ಕರೆಯ ತುಂಡನ್ನು ಬಾಯಲ್ಲಿರಿಸಿ ನಿಧಾನವಾಗಿ ಚೀಪುವ ಮೂಲಕ ಸತತವಾಗಿರುವ ಕೆಮ್ಮು ಸಹಾ ಕಡಿಮೆಯಾಗುತ್ತದೆ.
ಗಂಟಲಬೇನೆ ಕಡಿಮೆಗೊಳಿಸುತ್ತದೆ
ಚಳಿಗಾಲದಲ್ಲಿ ಕೆಲವಾರು ರೋಗಗಳು ಅನಿವಾರ್ಯ ಎಂಬಂತೆ ಆವರಿಸುತ್ತವೆ. ಇದರಲ್ಲಿ ಗಂಟಲ ಬೇನೆಯೂ ಒಂದು. ಗಂಟಲಬೇನೆ ಎದುರಾದ ತಕ್ಷಣ ಕಲ್ಲುಸಕ್ಕರೆ ತಿಂದರೆ ಇದು ತಕ್ಷಣವೇ ಗುಣವಾಗುತ್ತದೆ. ಒಂದು ವೇಳೆ ಬೇನೆ ಕೊಂಚವೇ ಹೆಚ್ಚಿದರೂ ಕಲ್ಲುಸಕ್ಕರೆಯೊಂದಿಗೆ ಕಾಳುಮೆಣಸಿನ ಪುಡಿ ಮತ್ತು ಕೊಂಚ ತುಪ್ಪ ಬೆರೆಸಿ ರಾತ್ರಿ ಮಲಗುವ ಮುನ್ನ ಸೇವಿಸಬೇಕು.
ಜೀರ್ಣಕ್ರಿಯೆಗೆ ನೆರವಾಗುತ್ತದೆ
ಕಲ್ಲುಸಕ್ಕರೆ ಬಾಯಿಯ ದುರ್ವಾಸನೆ ದೂರಗೊಳಿಸುವುದು ಮಾತ್ರವಲ್ಲ, ಕೊಂಚ ದೊಡ್ಡಜೀರಿಗೆಯೊಂದಿಗೆ ಸೇವಿಸಿದರೆ ಜೀರ್ಣಶಕ್ತಿಯನ್ನೂ ಹೆಚ್ಚಿಸುತ್ತದೆ. ಇದರಲ್ಲಿರುವ ಜೀರ್ಣಕಾರಕ ಗುಣ ಆಹಾರವನ್ನು ತಕ್ಷಣವೇ ಜೀರ್ಣಗೊಳಿಸಲು ಪ್ರಾರಂಭಿಸಲು ಪ್ರಚೋದಿಸುತ್ತವೆ. ಆದ್ದರಿಂದ ಊಟದ ಬಳಿಕ ತಾಜಾ ಉಸಿರಿಗಾಗಿ ಕಲ್ಲುಸಕ್ಕರೆಯ ತುಂಡುಗಳನ್ನು ಬೆರೆಸಿದ ದೊಡ್ಡ ಜೀರಿಗೆ ಕಾಳುಗಳನ್ನು ಕೊಂಚ ಸೇವಿಸಿ.
ಶಕ್ತಿವರ್ಧಕವಾಗಿದೆ
ಊಟದ ಬಳಿಕ ಸೇವಿಸುವ ಕಲ್ಲುಸಕ್ಕರೆಯಲ್ಲಿ ದೇಹಕ್ಕೆ ಹೆಚ್ಚಿನ ಶಕ್ತಿಯನ್ನು ಒದಗಿಸುವ ಗುಣವಿದೆ. ಸಾಮಾನ್ಯವಾಗಿ ಊಟದ ಬಳಿಕ ನಮ್ಮ ಚಟುವಟಿಕೆಗಳು ನಿಧಾನಗೊಳ್ಳುತ್ತವೆ ಹಾಗೂ ನಿದ್ದೆಗೆ ಮನ ಹವಣಿಸುತ್ತದೆ. ಆದರೆ ಊಟದ ಬಳಿಕ ಕಲ್ಲುಸಕ್ಕರೆ ಹಾಗೂ ಕೊಂಚ ದೊಡ್ಡ ಜೀರಿಗೆ ಸೇವಿಸಿದರೆ ಒದಗುವ ಹೆಚ್ಚಿನ ಶಕ್ತಿ ಚಟುವಟಿಕೆ ನಿಧಾನಗೊಳ್ಳದಿರುವಂತೆ ನೋಡಿಕೊಳ್ಳುವ ಮೂಲಕ ನಿಮ್ಮ ಅಗತ್ಯಕಾರ್ಯಗಳನ್ನು ಸಮರ್ಥವಾಗಿ ಪೂರೈಸಬಹುದು.
ಮೂಗಿನಿಂದ ರಕ್ತ ಸುರಿಯುವುದನ್ನು ನಿಲ್ಲಿಸುತ್ತದೆ
ಒಂದು ವೇಳೆ ಮೂಗಿನಿಂದ ರಕ್ತ ಸುರಿಯುವ ತೊಂದರೆ ಇದ್ದರೆ ಕಲ್ಲುಸಕ್ಕರೆ ಇದನ್ನು ನಿಲ್ಲಿಸುತ್ತದೆ ಎಂದು ತಿಳಿದು ನಿಮಗೆ ಆಶ್ಚರ್ಯವಾಗಬಹುದು. ಮೂಗಿನಿಂದ ರಕ್ತ ಸುರಿಯಹತ್ತಿದರೆ ತಕ್ಷಣವೇ ಒಂದು ತುಂಡು ಕಲ್ಲುಸಕ್ಕರೆಯನ್ನು ನೀರಿನಲ್ಲಿ ಬೆರೆಸಿ ಕುಡಿಯಬೇಕು. ಇದರಿಂದ ಕೆಲವೇ ನಿಮಿಷಗಳಲ್ಲಿ ರಕ್ತಸ್ರಾವ ನಿಲ್ಲುತ್ತದೆ.
ಮೆದುಳಿಗೂ ಒಳ್ಳೆಯದು
ಕಲ್ಲುಸಕ್ಕರೆ ಮೆದುಳಿಗೆ ಒಂದು ನೈಸರ್ಗಿಕ ಔಷಧಿಯಂತೆ ಕೆಲಸ ಮಾಡುತ್ತದೆ. ಸ್ಮರಣ ಶಕ್ತಿ ಹೆಚ್ಚಿಸಲು ಹಾಗೂ ಮೆದುಳಿನ ಮೇಲಿನ ಒತ್ತಡದಿಂದ ಪರಿಹಾರ ಒದಗಿಸಲು ಕಲ್ಲುಸಕ್ಕರೆಯ ಗುಣಗಳು ನೆರವಾಗುತ್ತವೆ. ಇದಕ್ಕಾಗಿ ಬೆಚ್ಚಗಿನ ಹಾಲಿನಲ್ಲಿ ಕೊಂಚ ಕಲ್ಲುಸಕ್ಕರೆಯನ್ನು ಬೆರೆಸಿ ರಾತ್ರಿ ಮಲಗುವ ಮುನ್ನ ಕುಡಿಯಿರಿ. ಇದರಿಂದ ಸುಖನಿದ್ದೆ ಆವರಿಸುತ್ತದೆ ಹಾಗೂ ಸ್ಮರಣಶಕ್ತಿಯೂ ಹೆಚ್ಚುತ್ತದೆ.
ಬಾಣಂತಿಯರಿಗೂ ಉತ್ತಮವಾಗಿದೆ
ಕಲ್ಲುಸಕ್ಕರೆ ಬಾಣಂತಿಯರಿಗೆ ಉಪಯುಕ್ತವಾದ ಆಹಾರವಾಗಿದೆ. ಇದರ ಸೇವನೆಯಿಂದ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ ಹಾಗೂ ತಾಯಿಹಾಲಿನ ಉತ್ಪತ್ತಿ ಹೆಚ್ಚುತ್ತದೆ. ಇದು ಕಡಿಮೆ ಸಿಹಿಯಾಗಿರುವ ಕಾರಣ ಬಾಣಂತಿಯರೂ ಸೇವಿಸಲು ಸುರಕ್ಷಿತವಾಗಿದೆ.
ಕಣ್ಣುಗಳ ದೃಷ್ಟಿ ಉತ್ತಮಗೊಳಿಸುತ್ತದೆ.
ಕಣ್ಣುಗಳ ಆರೋಗ್ಯಕ್ಕೂ ಕಲ್ಲುಸಕ್ಕರೆ ಉತ್ತಮವಾಗಿದೆ. ಕಣ್ಣುಗಳ ದೃಷ್ಟಿಯನ್ನು ಉಳಿಸಿಕೊಳ್ಳಲು ಹಾಗೂ ಕಣ್ಣುಗಳಲ್ಲಿ ಹೂವು ಅಥವಾ ಕ್ಯಾಟರಾಕ್ಟ್ ಮೂಡುವುದನ್ನು ತಡೆಯಲು ಆಗಾಗ ಕಲ್ಲುಸಕ್ಕರೆ ಸೇವಿಸುತ್ತಿರಿ. ಕಣ್ಣುಗಳ ದೃಷ್ಟಿ ಉತ್ತಮವಾಗಿರಲು ದಿನವಿಡೀ ಕುಡಿಯುವ ನೀರಿನಲ್ಲಿ ಕೊಂಚವೇ ಕಲ್ಲುಸಕ್ಕರೆ ಬೆರೆಸಿ ಸೇವಿಸಿ ಹಾಗೂ ಊಟದ ಬಳಿಕವೂ ಒಂದು ಲೋಟ ನೀರಿನಲ್ಲಿ ಚಿಕ್ಕ ಕಲ್ಲುಸಕ್ಕರೆಯ ತುಂಡನ್ನು ಬೆರೆಸಿ ಸೇವಿಸಿ. ಒಂದು ವೇಳೆ ಈ ಮಾಹಿತಿ ನಿಮಗೆ ಉಪಯುಕ್ತವೆಂದು ಕಂಡುಬಂದರೆ ನಿಮ್ಮ ಸ್ನೇಹಿತರು ಮತ್ತು ಆಪ್ತರೊಂದಿಗೆ ಇದರ ಕೊಂಡಿಯನ್ನು ಹಂಚಿಕೊಳ್ಳುವ ಮೂಲಕ ಹೆಚ್ಚು ಜನರಿಗೆ ಪ್ರಯೋಜನವಾಗಲು ನೆರವಾಗಿ.