ಮೈಸೂರು: ಕೆಲವರು ನಗರದ ಎನ್ಟಿಎಂ ಶಾಲೆ ಪರ ಈ ಹಿಂದೆ ನಡೆಸಿದ ಹೋರಾಟ ವೇಳೆ ಪಾಲ್ಗೊಂಡಿದ್ದರೂ ಬಳಿಕ ತಾವೇ ಅಧಿಕಾರಕ್ಕೆ ಬಂದ ಬಳಿಕ ಬೆಂಬಲ ಮುಂದುವರಿಸಲಿಲ್ಲ. ಇದೇ ವೇಳೆ ಹೋರಾಟದಲ್ಲಿ ಭಾಗಿಯಾಗಿದ್ದ ಹಲವರು ನಿರ್ಲಕ್ಷ್ಯ ಧೋರಣೆ ತಾಳಿದ್ದಾರೆ. ಹೀಗಾಗಿ ಹೋರಾಟ ಸಫಲವಾಗುತ್ತಿಲ್ಲ ಎಂದು ಕರ್ನಾಟಕ ಕಾವಲು ಪಡೆ ರಾಜ್ಯಾಧ್ಯಕ್ಷ ಎಂ. ಮೋಹನ್ಕುಮಾರ್ ಬೇಸರ ವ್ಯಕ್ತಪಡಿಸಿದರು.
ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗಾರರೊಡನೆ ಮಾತನಾಡಿ, ಸಾಂಸ್ಕೃತಿಕ ನಗರಿ ಮೈಸೂರಿನ ಹೆಣ್ಣು ಮಕ್ಕಳ ಅಭ್ಯುದಯ್ಕಕಾಗಿ ಮಹಾರಾಣಿಯವರು ಶಾಲೆ ಸ್ಥಾಪಿಸಿದ್ದರು. ಆದರೆ ಆಧ್ಯಾತ್ಮಿಕ ಮಾರ್ಗವೊಂದೇ ಪರಮಗುರಿ ಎಂದು ಸಾಧಿಸುತ್ತಿರುವ ರಾಮಕೃಷ್ಣ ಆಶ್ರಮದವರು ಶಾಲೆ ಕೆಡವಿ ವಿವೇಕ ಸ್ಮಾರಕ ನಿರ್ಮಿಸುತ್ತಿದ್ದಾರೆ. ಅದನ್ನು ವಿರೋಧಿಸಿ ವಿವಿಧ ಸಂಘಟನೆಗಳು ಒಂದಾಗಿ ಹೋರಾಟ ಆರಂಭಿಸಲಾಗಿತ್ತು. ಆದರೆ, ಬಳಿಕ ಇವು ಹಿಂದೆ ಸರಿದವೆಂದರು. ಕೆಲವರು ತಮ್ಮ ರಹಸ್ಯ ಕಾರ್ಯಸೂಚಿ ಈಡೇರಿಸಿಕೊಳ್ಳುವ ಕಾರಣದಿಂದಾಗಿ ಪ್ರಬಲ ಹೋರಾಟವನ್ನು ದುರ್ಬಲಗೊಳಿಸಿದರೆಂದು ಆರೊಪಿಸಿದರು. ಕರ್ನಾಟಕ ಕಾವಲು ಪಡೆ ಸಮಿತಿಯ ಟಿ.ರವೀಂದ್ರ, ರವಿಗೌಡ, ಮಹದೇವ್, ಜೆ.ಉಮೇಶ್, ಡಿ.ಆರ್.ಕರಿಗೌಡ ಇನ್ನಿತರರು ಹಾಜರಿದ್ದರು.