ಚಾಮರಾಜನಗರ: ನಗರದ ಭುವನೇಶ್ವರಿ ವೃತ್ತದಲ್ಲಿ ಮಂಗಳವಾರ ಸಂಜೆ ಎಲೆಕ್ಟ್ರಿಕ್ ಸ್ಕೂಟರ್ನ ಬ್ಯಾಟರಿಯಲ್ಲಿ ಹೊಗೆ ಕಾಣಿಸಿಕೊಂಡು ಆತಂಕ ಸೃಷ್ಟಿಸಿತು. ಸ್ಕೂಟರ್ ಮಾಲೀಕನ ಸಮಯಪ್ರಜ್ಞೆಯಿಂದ ಅನಾಹುತ ತಪ್ಪಿದೆ.
ಕಾಗಲವಾಡಿ ಬಸವಣ್ಣ ಅವರು ಸ್ಕೂಟರ್ನ (ಬೆನ್ಲಿಂಗ್ ಕಂಪನಿ) ಬ್ಯಾಟರಿಯನ್ನು ತಮ್ಮ ಕಚೇರಿಯಲ್ಲಿ ಚಾರ್ಜ್ ಮಾಡಿ, ತ್ಯಾಗರಾಜ ರಸ್ತೆಯಲ್ಲಿ ನಿಲ್ಲಿಸಿದ್ದ ಸ್ಕೂಟರ್ಗೆ ಅಳವಡಿಸಿದರು. ಈ ಸಂದರ್ಭದಲ್ಲಿ ಬ್ಯಾಟರಿಯಲ್ಲಿ ಹೊಗೆ ಕಾಣಿಸಿಕೊಂಡಿತು. ಬೆಂಕಿ ಹತ್ತಿಕೊಂಡರೆ ಅಕ್ಕ ಪಕ್ಕದಲ್ಲಿದ್ದ ದ್ವಿಚಕ್ರವಾಹನಗಳಿಗೆ ಹಾನಿಯಾದೀತು ಎಂದುಕೊಂಡು ಸ್ಕೂಟರ್ ಅನ್ನು ಪಕ್ಕದಲ್ಲೇ ಇದ್ದ ಭುವನೇಶ್ವರಿ ವೃತ್ತಕ್ಕೆ ತಳ್ಳಿಕೊಂಡು ಹೋದರು.
ನಂತರ ಹೊಗೆಯಾಡುತ್ತಿದ್ದ ಬ್ಯಾಟರಿಯನ್ನು ಹೊರ ತೆಗೆದು ವೃತ್ತದ ಮಧ್ಯದಲ್ಲಿಟ್ಟರು. ಬ್ಯಾಟರಿಯಲ್ಲಿ ಹೊಗೆ ತೀವ್ರವಾಯಿತು. ಕಪ್ಪು ಹೊಗೆ ದಟ್ಟವಾಗಿ ಸುತ್ತಲೆಲ್ಲ ಪಸರಿಸಿತು. ಸ್ಥಳದಲ್ಲಿದ್ದ ಪೆÇಲೀಸರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದರು. ಸ್ಥಳಕ್ಕೆ ಬಂದ ಸಿಬ್ಬಂದಿ ಬ್ಯಾಟರಿಗೆ ನೀರು ಎರಚಿ ಬೆಂಕಿ ಹತ್ತಿಕೊಳ್ಳದಂತೆ ನೋಡಿಕೊಂಡರು.