ಮೈಸೂರು: ಮೈಸೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ನಿಯಮ ಉಲ್ಲಂಘನೆಗೆ ಒಂದೇ ತಿಂಗಳಲ್ಲಿ 9 ಕೋಟಿ ರೂ ದಂಡ ಸಂಗ್ರಹವಾಗಿದೆ.
ಮೈಸೂರು- ಬೆಂಗಳೂರು ಹೆದ್ದಾರಿಯಲ್ಲಿ (ಎನ್.ಹೆಚ್. 275) ಟ್ರಾಫಿಕ್ ರೂಲ್ಸ್ ಉಲ್ಲಂಘನೆ ಮಾಡಿದವರಿಗೆ ಒಂದೇ ತಿಂಗಳಲ್ಲಿ 8.99 ಕೋಟಿ ರೂ, ದಂಡವನ್ನ ಪೊಲೀಸ್ ಇಲಾಖೆ ವಿಧಿಸಿದೆ. ನಿಯಮ ಮೀರಿದ ಸವಾರರು, ಚಾಲಕರಿಗೆ ಕೋಟಿ ಕೋಟಿ ಫೈನ್ ಬಿದ್ದಿದೆ.
ಐ.ಟಿ.ಎಂ.ಎಸ್ ಕ್ಯಾಮರಾದಲ್ಲಿ ನಿಯಮ ಉಲ್ಲಂಘನೆ ದಾಖಲಾಗಿದ್ದು ಜೂನ್ 1 ರಿಂದ ಜೂನ್ 30ರ ವರೆಗೆ 1,61,491 ಪ್ರಕರಣಗಳು ದಾಖಲಾಗಿವೆ.
ಇದರಲ್ಲಿ ಸೀಟು ಬೆಲ್ಟ್ ಧರಿಸದ ಪ್ರಕರಣಗಳೇ ಹೆಚ್ಚಾಗಿ ಕಂಡುಬಂದಿದ್ದು,
ಪಥ ಶಿಸ್ತು ಉಲ್ಲಂಘನೆ ಪ್ರಕರಣ 12,609, ಟ್ರೀಪಲ್ ರೈಡಿಂಗ್ ಪ್ರಕರಣ 1087, ಹೆಲ್ಮೆಟ್ ಧರಿಸದೆ ಇರುವುದು 9079 ಪ್ರಕರಣಗಳು, ಅತೀ ವೇಗ 7671 ಪ್ರಕರಣಗಳು, ವಿರುದ್ಧ ದಿಕ್ಕಿನಲ್ಲಿ ಸಂಚಾರ 07, ನೋ ಎಂಟ್ರಿ 577 ಪ್ರಕರಣಗಳು ದಾಖಲಾಗಿದೆ.
ನಿಯಮ ಉಲ್ಲಂಘನೆ ಸ್ಥಳ, ದಿನಾಂಕ, ಸಮಯ ಎಲ್ಲವನ್ನೂ ವಾಹನ ನೋಂದಣಿಯ ಮೊಬೈಲ್ ಸಂಖ್ಯೆಗೆ ರವಾನೆಯಾಗಲಿದ್ದು, 119 ಕಿಲೋ ಮೀಟರ್ ಉದ್ದಕ್ಕೂ 60 ಕ್ಯಾಮರಾ ಕಣ್ಗಾವಲು ಇರಿಸಲಾಗಿದೆ. ಈ ಮೂಲಕ ಒಂದೇ ತಿಂಗಳಲ್ಲಿ ಪೊಲೀಸರು ದಾಖಲೆಯ ದಂಡ ವಿಧಿಸಿದ್ದಾರೆ.
ಟ್ರಾಫಿಕ್ ರೂಲ್ಸ್ ಉಲ್ಲಂಘಿಸಿದರೆ ಮೊಬೈಲ್ ಗೆ ಬರಲಿದೆ ಅಲರ್ಟ್ ಮೆಸೇಜ್.ಇನ್ನು ಸಂಚಾರ ನಿಯಮ ಉಲ್ಲಂಘನೆ ತಡೆಗೆ AI ಕ್ಯಾಮೆರಾ ಅಳವಡಿಸಲಾಗಿದ್ದು ಟ್ರಾಫಿಕ್ ರೂಲ್ಸ್ ಉಲ್ಲಂಘಿಸಿದರೆ ಮೊಬೈಲ್ಗೆ ತಕ್ಷಣವೇ ಅಲರ್ಟ್ ಮೆಸೇಜ್ ಬರಲಿದೆ. AI ಕ್ಯಾಮೆರಾ ಮೂಲಕ ಡ್ರೈವರ್ ಗೆ ಮಾಹಿತಿ ಬರಲಿದೆ. AI ಕ್ಯಾಮೆರಾ ಆಡಿಯೋ ಮೂಲಕ ಮಾಹಿತಿ ನೀಡಲಿದ್ದು ಸಂಚಾರ ಉಲ್ಲಂಘನೆ ಕುರಿತು ಮೊಬೈಲ್ ಗೂ ಸಂದೇಶ ಬರಲಿದೆ.