ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕನ್ನಡದ ಕಲರವ ಸಂಭ್ರಮಿಸಿದ್ದು, ಜಿಲ್ಲಾಡಳಿತದಿಂದ ಅದ್ದೂರಿಯಾಗಿ 68 ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು.
ಸಮಾಜ ಕಲ್ಯಾಣ ಇಲಾಖೆಯ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಹೆಚ್. ಸಿ ಮಹದೇವಪ್ಪ ಅವರು ದ್ವಜಾರೋಹಣ ನೆರವೇರಿಸಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ವತಿಯಿಂದ ನಗರದ ವೋವೆಲ್ ಮೈದಾನದಲ್ಲಿ 68 ನೆ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಸಚಿವರು ತಾಯಿ ಭುವನೇಶ್ವರಿ ದೇವಿಗೆ ಪುಷ್ಪಾರ್ಚನೆ ನೆರವೇರಿಸಿದರು. ಸಚಿವರು ತೆರೆದ ವಾಹನದಲ್ಲಿ ತುಕಡಿಗಳ ಪರಿವೀಕ್ಷಣೆ ಮಾಡಿದರು. ಪೆರೇಡ್ ನಲ್ಲಿ 18 ತಂಡಗಳು ಭಾಗವಹಿಸಿದ್ದವು. ಆಕರ್ಷಕ ಪಥ ಸಂಚಲನ ನಡೆಯಿತು.
ಸಚಿವರು ಮಾತನಾಡಿ, ಕನ್ನಡದ ಬಳಕೆ ಹಾಗೂ ಕನ್ನಡದ ಬೆಳವಣಿಗೆಗೆ ಸರ್ಕಾರ ನೀಡಿರುವ ಸೌಲಭ್ಯಗಳ ಮಾಹಿತಿ ನೀಡಿದರು. ಕರ್ನಾಟಕ ಎಂದು ನಾಮಕರಣ ಮಾಡಿ 50 ವರ್ಷಗಳು ಆಗಿರುವ ಹಿನ್ನೆಲೆ ನ. 01, 2024 ರವರಿಗೆ ಕನ್ನಡದ ಬೆಳವಣಿಗೆ, ಅಭಿವೃದ್ಧಿಗೆ ಸಂಬಂಧಿಸಿದ ಕನ್ನಡ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಹುಯಿಲಗೋಳ ನಾರಾಯಣರಾಯರು ರಚಿಸಿರುವ ಉದಯವಾಗಲಿ ಚೆಲುವ ಕನ್ನಡನಾಡು, ರಾಷ್ಟ್ರಕವಿ ಕುವೆಂಪು ಅವರ ಗೀತೆ ಎಲ್ಲಾದರೂ ಇರು ಎಂಬಿತ್ಯಾದಿ ಕನ್ನಡ ಹಾಡುಗಳಿಗೆ ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮ ಎಲ್ಲರ ರಂಜಿಸಿತು. ಇದೇ ವೇಳೆ ವಿವಿಧ ಕ್ಷೇತ್ರದವರನ್ನು ಗುರುತಿಸಿ ಜಿಲ್ಲಾ ಕನ್ನಡ ಸಾಹಿತ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.