ಮೈಸೂರು: ಡ್ರಿಂಕ್ ಆ್ಯಂಡ್ ಡ್ರೆöÊವ್ ತಪಾಸಣೆ ವೇಳೆ ದಂಡದ ಹಣವೆಂದು ವಾಹನ ಚಾಲಕನಿಂದ ಗೂಗಲ್ ಪೇ ಮೂಲಕ ಹಣ ಪಡೆದು ದೂರು ದಾಖಲಿಸದೆ ಕರ್ತವ್ಯಲೋಪ ಎಸಗಿರುವ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ನರಸಿಂಹರಾಜ ಸಂಚಾರಿ ಠಾಣೆಯ ಸಂಚಾರಿ ಹೆಡ್ ಕಾನ್ಸ್ಟೇಬಲ್ ಸೋಮಶೇಖರ್ ಎಂಬವರನ್ನು ಮೈಸೂರು ನಗರದ ಸಂಚಾರಿ ಹಾಗೂ ಅಪರಾಧ ವಿಭಾಗದ ಡಿಸಿಪಿ ಎಸ್.ಜಾಹ್ನವಿ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಮೈಸೂರು-ಬೆಂಗಳೂರು ಹೆದ್ದಾರಿ ಮಣಿಪಾಲ್ ಆಸ್ಪತ್ರೆ ಜಂಕ್ಷನ್ನಲ್ಲಿ 2023ರ ನವೆಂಬರ್ 28ರಂದು ರಾತ್ರಿ 10.30ರ ಸಮಯದಲ್ಲಿ ನರಸಿಂಹರಾಜ ಸಂಚಾರ ಠಾಣೆ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಹೆಡ್ ಕಾನ್ಸ್ಟೇಬಲ್ ಸೋಮಶೇಖರ್ ಮಂಡ್ಯದ ಕಡೆಯಿಂದ ಬಂದ ಡಸ್ಟರ್ ಕಾರನ್ನು ನಿಲ್ಲಿಸಿ ತಪಾಸಣೆ ನಡೆಸಿದ್ದರು. ಆ ಕಾರಿನ ಚಾಲಕ ಮದ್ಯಪಾನ ಮಾಡಿದ್ದರಿಂದ ವಾಹನವನ್ನು ವಶಪಡಿಸಿಕೊಂಡು ಠಾಣೆ ಬಳಿ ತಂದು ನಿಲ್ಲಿಸಲಾಗಿತ್ತು. ಬಳಿಕ ಠಾಣೆಗೆ ಬಂದ ಕಾರು ಚಾಲಕನಿಗೆ 10 ಸಾವಿರ ರೂ ದಂಡ ಪಾವತಿಸುವಂತೆ ಸೋಮಶೇಖರ್ ತಿಳಿಸಿದ್ದಾರೆ.ಚಾಲಕ ದಂಡ ಪಾವತಿಸಲು ಮುಂದಾದಾಗ ರಮೇಶ್ ಗೌಡ ಎಂಬವರಿಗೆ ಗೂಗಲ್ ಪೇ ಮಾಡುವಂತೆ ಸೂಚಿಸಿದ್ದರು. ಪೊಲೀಸರು ಹೇಳಿದಂತೆ ಚಾಲಕ ದಂಡದ ಮೊತ್ತವನ್ನು ಗೂಗಲ್? ಪೇ ಮಾಡಿದ್ದಾರೆ. ಸ್ವಲ್ಪ ಸಮಯದ ನಂತರ ರಮೇಶ್ ಗೌಡರಿಂದ 5 ಸಾವಿರ ರೂ.ಗಳನ್ನು ಚಾಲಕನಿಗೆ ವಾಪಸ್ ಗೂಗಲ್ ಪೇ ಮಾಡಿಸಿ, 5 ಸಾವಿರ ರೂ. ಸಾಕು ಬಿಡಿ ಎಂದು ಹೇಳಿ ಸೋಮಶೇಖರ್ ಆತನ ವಾಹನವನ್ನು ಬಿಟ್ಟು ಕಳುಹಿಸಿದ್ದಾರೆ.ತಪಾಸಣೆಯ ಸಂದರ್ಭದಲ್ಲಿ ಹಾಜರುಪಡಿಸದಿದ್ದರೂ 10 ಸಾವಿರ ರೂ. ಹಣಕ್ಕೆ ಬೇಡಿಕೆಯಿಟ್ಟಿದ್ದಾರೆ. ಈ ಬಗ್ಗೆ ಸ್ಥಳದಲ್ಲೇ ಇದ್ದ ಇನ್ಸ್ಪೆಕ್ಟರ್ ರೇಖಾಬಾಯಿ ಅವರಿಗೂ ವರದಿ ಮಾಡಿಲ್ಲ. ಚಾಲಕನಿಂದ ದಂಡ ಸ್ವೀಕರಿಸಿದ್ದಕ್ಕೆ ರಶೀದಿಯನ್ನೂ ನೀಡಿಲ್ಲ. ಮೈಸೂರಿನ ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಅವರ ಅರ್ಜಿ ಆಧಾರದಲ್ಲಿ ಪೂರ್ವಭಾವಿ ವಿಚಾರಣೆ ನಡೆಸಿದಾಗ ಸೋಮಶೇಖರ್ ಕರ್ತವ್ಯ ಲೋಪವೆಸಗಿರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಅಮಾನತು ಮಾಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.