ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿದ ‘ಕಾಂತಾರ’ ಸಿನಿಮಾ ಬ್ಲಾಕ್ಬಸ್ಟರ್ ಹಿಟ್ ಎನಿಸಿಕೊಂಡಿತ್ತು. 15 ಕೋಟಿ ರೂ. ಬಜೆಟ್ನಲ್ಲಿ ನಿರ್ಮಾಣವಾಗಿದ್ದ ಸಿನಿಮಾ 400 ಕೋಟಿ ರೂ. ಅಧಿಕ ಕಲೆಕ್ಷನ್ ಮಾಡಿತ್ತು. ಇದೀಗ ‘ಕಾಂತಾರ’ ಪ್ರೀಕ್ವೆಲ್ ಸಿನಿಮಾ ಕೆಲಸಗಳು ಶುರುವಾಗಿದೆ. ಆದರೆ ದಯವಿಟ್ಟು ‘ಕಾಂತಾರ’- 2 ಮಾಡಬೇಡಿ ಎಂದು ರಿಷಬ್ ಶೆಟ್ಟಿಗೆ ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಮನವಿ ಮಾಡುತ್ತಿದ್ದಾರೆ.
ಕರಾವಳಿ ಭಾಷೆ, ಆಚಾರ ಅಲ್ಲಿನ ಸಂಸ್ಕೃತಿಯನ್ನು ಎಳೆ ಎಳೆಯಾಗಿ ‘ಕಾಂತಾರ’ ಚಿತ್ರದಲ್ಲಿ ಕಟ್ಟಿಕೊಟ್ಟು ರಿಷಬ್ ಶೆಟ್ಟಿ ಗೆದ್ದಿದ್ದರು. ಮುಖ್ಯವಾಗಿ ಪಂಜುರ್ಲಿ ಹಾಗೂ ಗುಳಿಗ ದೈವವನ್ನು ತೋರಿಸಿ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿದ್ದರು. ಕರಾವಳಿಯ ದೈವಾರಾಧನೆ, ಭೂತಕೋಲದ ಆಚರಣೆ, ಅಲ್ಲಿನ ಸಂಪ್ರದಾಯ ಮತ್ತು ನಂಬಿಕೆ ತೆರೆಮೇಲೆ ಅನಾವರಣವಾಗಿತ್ತು. ಅದರಲ್ಲೂ ಪಂಜುರ್ಲಿ ದೈವದ ವೇಷಧಾರಿಯಾಗಿ ರಿಷಬ್ ಬೆರಗು ಮೂಡಿಸಿದ್ದರು. ಆದರೆ ರಿಷಬ್ ಶೆಟ್ಟಿ ರೀತಿಯಲ್ಲೇ ಕೆಲವರು ಪಂಜುರ್ಲಿ ದೈವದಂತೆ ವೇಷ ಧರಿಸಿ ದೈವಕ್ಕೆ ಅವಮಾನ ಮಾಡುತ್ತಿದ್ದಾರೆ ಎನ್ನಲಾಗ್ತಿದೆ.
ಮೊನ್ನೆ ವ್ಯಕ್ತಿಯೊಬ್ಬ ಪಂಜುರ್ಲಿ ದೈವದ ವೇಷ ಧರಿಸಿ ಆರ್ಸಿಬಿ ಗಿs ಮುಂಬೈ ಇಂಡಿಯನ್ಸ್ ಐಪಿಎಲ್ ಪಂದ್ಯ ನೋಡಲು ಆಗಮಿಸಿದ್ದರು. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಆರ್ಸಿಬಿ ತಂಡ ಗೆಲುವು ಸಾಧಿಸಿತ್ತು. ಈ ವೇಳೆ ಪಂಜುರ್ಲಿ ದೈವದ ವೇಷಧಾರಿ ಎಲ್ಲರ ಗಮನ ಸೆಳೆದಿದ್ದು ಸುಳ್ಳಲ್ಲ. ಕೆಲವರು ಆತನೊಟ್ಟಿಗೆ ಫೋಟೊ ಕ್ಲಿಕ್ಕಿಸಿಕೊಂಡಿದ್ದರು. ಆದರೆ ಇದು ಕೆಲವರ ಆಕ್ರೋಶಕ್ಕೆ ಕಾರಣವಾಗಿದೆ. ದೈವದ ವೇಷವನ್ನು ಈ ರೀತಿ ಮನರಂಜನೆಗೆ ಬಳಸಿಕೊಳ್ಳುತ್ತಿರುವುದು ಬೇಸರ ತಂದಿದೆ.
ಒಂದು ಸಮುದಾಯದ ಆಚಾರ, ನಂಬಿಕೆಯನ್ನು ಯಾಕೆ ಈ ರೀತಿ ಮನರಂಜನೆಗೆ ಬಳಸಿಕೊಳ್ಳಲಾಗುತ್ತಿದೆ ಎನ್ನುವ ಪ್ರಶ್ನೆಯನ್ನು ಕೆಲವರು ಎತ್ತಿದ್ದಾರೆ. ಬೆಂಗಳೂರಿನಲ್ಲಿ ಪಂದ್ಯದ ವೇಳೆ ಪಂಜುರ್ಲಿ ದೈವದ ವೇಷ ಧರಿಸಿದ್ದ ವ್ಯಕ್ತಿಯ ಫೋಟೊವನ್ನು ಸ್ವತಃ ಆರ್ಸಿಬಿ ತಂಡ ಹಂಚಿಕೊಂಡಿದೆ. ಪಂಜುರ್ಲಿ ವೇಷವನ್ನು ನಿಮ್ಮ ಖುಷಿಗೆ ಮನರಂಜನೆಗೆ ಅಥವಾ ಎಲ್ಲರ ಗಮನ ಸೆಳೆಯಬೇಕು ಎನ್ನುವ ಉದ್ದೇಶಕ್ಕೆ ಬಳಸಿಕೊಳ್ಳಬೇಡಿ ಎನ್ನುತ್ತಿದ್ದಾರೆ. ಕೆಲವರಂತೂ ರಿಷಬ್ ಶೆಟ್ಟಿ ‘ಕಾಂತಾರ’ ಸೀಕ್ವೆಲ್ ಅಥವಾ ಪ್ರೀಕ್ವೆಲ್ ಮಾಡ್ಲೇಬೇಡಿ ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ.
‘ಕಾಂತಾರ’ ಚಿತ್ರದಲ್ಲಿ ತೋರಿಸಿರುವ ಪಂಜುರ್ಲಿ, ಗುಳಿಗ ರೀತಿಯಲ್ಲೇ ತುಳು ನಾಡಿನಲ್ಲಿ ಸಾಕಷ್ಟು ದೈವಗಳಿವೆ. ತುಳುನಾಡಿನ ಜನರಿಗೆ ಈ ದೈವಗಳ ಮೇಲೆ ವಿಶೇಷವಾದ ನಂಬಿಕೆ ಇದೆ. ದೈವಗಳ ಆಚರಣೆಯನ್ನು ದಶಕಗಳಿಂದ ಶ್ರದ್ಧಾ ಭಕ್ತಿಯಿಂದ ಜನ ಚಾಚೂ ತಪ್ಪದೇ ಪಾಲಿಸಿಕೊಂಡು ಬರ್ತಿದ್ದಾರೆ. ಯಾವುದಾದರೂ ಸಮಸ್ಯೆ ಎದುರಾದರೆ ಜನ ದೈವಗಳ ಮೊರೆ ಹೋಗ್ತಾರೆ. ದೈವದ ಸನ್ನಿಧಿಯಲ್ಲೇ ಹಲವು ಸಮಸ್ಯೆಗಳು ಬಗೆಹರಿಯುತ್ತಿವೆ. ಪಂಜುರ್ಲಿ ದೈವವನ್ನು ಮನೆಯ ಒಳಗಡೆ ಇಟ್ಟು ಪೂಜಿಸಿದ್ರೆ, ಗುಳಿಗನನ್ನು ಮನೆಯ ಹೊರಗೆ ಕ್ಷೇತ್ರ ಪಾಲಕನಂತೆ ಆರಾಧಿಸುತ್ತಾರೆ.
ರಿಷಬ್ ಶೆಟ್ಟಿ ಕೂಡ ‘ಕಾಂತಾರ’ ಸಿನಿಮಾ ಮಾಡುವ ಮುನ್ನ ದೈವದ ಅನುಮತಿ ಕೇಳಿದ್ದರು. ಇದೀಗ ಪ್ರೀಕ್ವೆಲ್ ಮಾಡಲು ಕೂಡ ಅನುಮತಿ ಪಡೆದಿದ್ದಾರೆ. ಅಷ್ಟೇ ಅಲ್ಲ ಯಾರು ಕೂಡ ಪಂಜುರ್ಲಿ ದೈವದ ವೇಷ ಧರಿಸಿ ಹುಚ್ಚಾಟ ಮೆರೆಯಬೇಡಿ ಎಂದು ಮನವಿ ಮಾಡುತ್ತಾ ಬರ್ತಿದ್ದಾರೆ. ಈ ಹಿಂದೆ ಯುವತಿಯೊಬ್ಬಳು ಪಂಜುರ್ಲಿ ದೈವದಂತೆ ವೇಷ ಧರಿಸಿ ರೀಲ್ಸ್ ಮಾಡಿ ಕೊನೆಗೆ ತನ್ನ ಹುಚ್ಚಾಟಕ್ಕೆ ಕ್ಷಮೆ ಕೋರಿ ತಪ್ಪೊಪ್ಪಿಗೆ ಕಾಣಿಕೆ ಸಲ್ಲಿಸಿದ್ದಳು. ಇದೀಗ ಐಪಿಎಲ್ ಪಂದ್ಯದ ವೇಳೆ ಈ ರೀತಿ ನಡೆದಿದೆ. ಇದು ಸಹಜವಾಗಿಯೇ ತುಳುನಾಡಿನ ಜನತೆಗೆ ಬೇಸರ ತರಿಸಿದೆ.
ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ‘ಕಾಂತಾರ’ ಚಿತ್ರವನ್ನು ನಿರ್ಮಾಣ ಮಾಡಿತ್ತು. ರಿಷಬ್ ಶೆಟ್ಟಿ ಜೊತೆಗೆ ಸಪ್ತಮಿ ಗೌಡ, ಕಿಶೋರ್, ಅಚ್ಯುತ್ಕುಮಾರ್ ಸೇರಿದಂತೆ ಸಾಕಷ್ಟು ಜನ ಪ್ರತಿಭಾನ್ವಿತ ಕಲಾವಿದರು ನಟಿಸಿದ್ದರು. ಇದೀಗ ಪ್ರೀಕ್ವೆಲ್ಗೆ ಪ್ರೀಪ್ರೊಡಕ್ಷನ್ ಕೆಲಸ ಆರಂಭಿಸಲಾಗಿದೆ. ಚಿತ್ರದಲ್ಲಿ ಕಾಡುಬೆಟ್ಟು ಶಿವನ ತಂದೆಯ ಕಥೆಯನ್ನು ಹೇಳಲಾಗುತ್ತಿದೆ. ಶೀಘ್ರದಲ್ಲೇ ಸಿನಿಮಾ ಚಿತ್ರೀಕರಣ ಆರಂಭಿಸಲಾಗುತ್ತಿದೆ.