ಟೆನ್ನೆಸ್ಸಿ (ಅಮೆರಿಕಾ), ಮಾ.೨೬- ಮಾಜಿ ವಿದ್ಯಾರ್ಥಿಯೊಬ್ಬ ನಡೆಸಿದ ಶೂಟೌಟ್ನಲ್ಲಿ ಮೂವರು ಮಕ್ಕಳು ಸೇರಿ ಆರು ಮಂದಿ ಮೃತಪಟ್ಟ ಘಟನೆ ಟೆನ್ನೆಸ್ಸಿಯ ನ್ಯಾಶ್ವಿಲೆಯ ಕ್ರಿಶ್ಚ್ಯನ್ ಶಾಲೆಯಲ್ಲಿ ನಡೆದಿದೆ. ಗುಂಡಿನ ದಾಳಿ ನಡೆಸಿದ ವ್ಯಕ್ತಿಯನ್ನು ಪೊಲೀಸರು ಶೂಟೌಟ್ ಮೂಲಕ ಹತ್ಯೆ ನಡೆಸಿದ್ದಾರೆ.
ಗುಂಡೇಟು ನಡೆಸಿದ ವ್ಯಕ್ತಿಯನ್ನು ೨೮ ವರ್ಷದ ಆಡ್ರೆ ಹೇಲ್ ಎನ್ನಲಾಗಿದ್ದು, ಈತ ಮಂಗಳಮುಖಿ ಎನ್ನಲಾಗಿದೆ. ಸುಮಾರು ೨೦೦ ವಿದ್ಯಾರ್ಥಿಗಳು ವ್ಯಾಸಂಗ ನಡೆಸುತ್ತಿರುವ ಇಲ್ಲಿನ ಕಾನ್ವೆಂಟ್ ಶಾಲೆಯಲ್ಲಿ ನಡೆದ ಶೂಟೌಟ್ನಲ್ಲಿ ಮೃತಪಟ್ಟ ವಿದ್ಯಾರ್ಥಿಗಳನ್ನು ಎವೆಲಿನ್ ಡಿಕ್ಹೌಸ್, ಹ್ಯಾಲೀ ಸ್ಕ್ರಗ್ಸ್ ಮತ್ತು ವಿಲಿಯಂ ಕಿನ್ನೆ ಎಂದು ಗುರುತಿಸಲಾಗಿದೆ. ಇವರೆಲ್ಲರೂ ೯ ವರ್ಷಕ್ಕಿಂತ ಕೆಳಗಿನವರು ಎಂದು ಹೇಳಲಾಗಿದೆ. ಇನ್ನು ಮೃತಪಟ್ಟ ಸಿಬ್ಬಂದಿಯ ಪೈಕಿ ಸಿಂಥಿಯಾ ಪೀಕ್ (೬೧), ಕ್ಯಾಥರೀನ್ ಕೂನ್ಸೆ (೬೦) ಹಾಗೂ ಮೈಕ್ ಹಿಲ್ (೬೧) ಎಂದು ಗುರುತಿಸಲಾಗಿದೆ. ಮೃತಪಟ್ಟ ಪೀಕ್ ಶಾಲೆಯಲ್ಲಿ ಬದಲಿ ಶಿಕ್ಷಕರಾಗಿ ಕೆಲಸ ನಿರ್ವಹಿಸುತ್ತಿದ್ದರೆ ಹಿಲ್ ಶಾಲೆಯ ಸೆಕ್ಯೂರಿಟಿ ಗಾರ್ಡ್ ವೃತ್ತಿ ನಿರ್ವಹಿಸುತ್ತಿದ್ದರು. ಇನ್ನು ಕೂನ್ಸ್ ಶಾಲೆಯ ವೆಬ್ಸೈಟ್ ಮುಖ್ಯಸ್ಥರೆಂದು ಗುರುತಿಸಲಾಗಿದೆ. ಕಾರ್ ಮೂಲಕ ಶಾಲೆಗೆ ಬಂದ ಹೇಲ್, ಬಳಿಕ ಶಾಲೆಯ ಮುಖ್ಯ ಬಾಗಿಲಿನಿಂದ ಗುಂಡಿನ ದಾಳಿ ನಡೆಸಿದ್ದ. ಅಲ್ಲದೆ ಕಟ್ಟಡದ ಎರಡನೇ ಮಹಡಿಗೆ ತೆರಳುವ ಮೊದಲು ಹೇಲ್ ನೆಲ ಮಹಡಿಯಿಂದ ಗುಂಡಿನ ದಾಳಿ ನಡೆಸಿದ್ದ. ಇನ್ನು ಘಟನೆ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರ ಮೇಲೆ ಎರಡನೇ ಮಹಡಿಯಿಂದ ಹೇಲ್ ಗುಂಡಿನ ದಾಳಿ ನಡೆಸಿದ್ದಾನೆ. ಆದರೆ ಇದು ಪೊಲೀಸ್ ವಾಹನದ ವಿಂಡ್ ಶೀಲ್ಡ್ ಮೇಲೆ ಅಪ್ಪಳಿಸಿದೆ. ಈ ಹಿನ್ನೆಲೆಯಲ್ಲಿ ಗಾಜು ಒಡೆದ ಹಿನ್ನೆಲೆಯಲ್ಲಿ ಓರ್ವ ಪೊಲೀಸ್ ಸಿಬ್ಬಂದಿಗೂ ಗಾಯವಾಗಿದೆ. ಬಳಿಕ ಪೊಲೀಸರು ಒಳನುಗ್ಗಿ ಹೇಲ್ ಮೇಲೆ ಗುಂಡಿನ ದಾಳಿ ನಡೆಸಿ, ಹತ್ಯೆ ನಡೆಸಿದ್ದಾರೆ.