ಹನೂರು:- ಕೊಳ್ಳೇಗಾಲ ತಾಲ್ಲೂಕಿನ ಮಧುವನಹಳ್ಳಿ ಬಳಿಯ ಸಿದ್ದೇಶ್ವರ ಬೆಟ್ಟದಲ್ಲಿ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಶನಿವಾರ ರಾತ್ರಿ ಚಿರತೆಯೊಂದು ಬಿದ್ದಿದೆ.
ಇದು ಹನೂರು ತಾಲ್ಲೂಕಿನ ಕಗ್ಗಲಿಗುಂದಿಯಲ್ಲಿ ಬಾಲಕಿ ಹಾಗೂ ಕಂಚಗಳ್ಳಿ ಗ್ರಾಮದಲ್ಲಿ ರೈತರೊಬ್ಬರ ಮೇಲೆ ದಾಳಿ ಮಾಡಿದ್ದ ಚಿರತೆಯೇ ಎಂಬುದು ಇನ್ನಷ್ಟೆ ತಿಳಿಯಬೇಕಿದೆ.
ದಾಳಿ ಮಾಡಿದ್ದ ಚಿರತೆಯ ಸೆರೆ ಅರಣ್ಯ ಇಲಾಖೆ 19 ದಿನಗಳಿಂದ ಕಾರ್ಯಾಚರಣೆ ನಡೆಸುತ್ತಿದೆ. ಚಿರತೆ ಕಗ್ಗಲಿಗುಂದಿ ಮತ್ತು ಕಂಚಗಳ್ಳಿ ಪ್ರದೇಶದಿಂದ ಹೊರ ಹೋಗಿದ್ದು, ಮಲೆ ಮಹದೇಶ್ವರ ವನ್ಯಧಾಮ ವ್ಯಾಪ್ತಿಯಲ್ಲಿ ಓಡಾಡುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದರು.
ಸಿದ್ದೇಶ್ವರಬೆಟ್ಟದಲ್ಲಿ ಚಿರತೆಯೊಂದು ಒಡಾಡುತ್ತಿರುವ ವಿಡಿಯೊ ತುಣುಕು ಇತ್ತೀಚೆಗೆ ಸಾಮಾಜಿಕ ಜಾಲಾತಾಣದಲ್ಲಿ ಹರಿದಾಡಿತ್ತು. ಬಾಲಕಿ ಮತ್ತು ರೈತನ ಮೇಲೆ ದಾಳಿ ನಡೆಸಿದ್ದ ಚಿರತೆ ಇದಾಗಿರಬಹುದು ಎಂದು ಸ್ಥಳೀಯರು ಶಂಕಿಸಿದ್ದರು.
ಕಾರ್ಯಚರಣೆ ಕೈಗೊಂಡಿದ್ದ ಅರಣ್ಯ ಇಲಾಖೆ ಆಯಕಟ್ಟಿನ ಆರು ಕಡೆಗಳಲ್ಲಿ ಬೋನುಗಳನ್ನು ಅಳವಡಿಸಿತ್ತು. ಇದರ ಜತೆಗೆ ಅದರ ಚಲನವಲನಗಳ ಅಧ್ಯಯನಕ್ಕಾಗಿ 30 ಕ್ಯಾಮೆರಾಗಳನ್ನು ಅಳವಡಿಸಿತ್ತು.
ಬೋನಿಗೆ ಬಿದ್ದ ಚಿರತೆ: ಶನಿವಾರ ರಾತ್ರಿ ಚಿರತೆ ಬೋನಿಗೆ ಬಿದ್ದಿದ. ಭಾನುವಾರ ಮುಂಜಾನೆ ಗಸ್ತಿನಲ್ಲಿದ್ದ ಸಿಬ್ಬಂದಿಯ ಗಮನಕ್ಕೆ ಬಂದಿದೆ.
ಚಿರತೆ ಬೋನಿಗೆ ಬಿದ್ದಿರುವ ವಿಷಯ ತಿಳಿಯುತ್ತಿದ್ದಂತೆ ಸಾರ್ವಜನಿಕರು ಸ್ಥಳಕ್ಕೆ ದೌಡಾಯಿಸಿದ್ದಾರೆ.
ಚಿರತೆ ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಬಾಲಕಿ ಶುಕ್ರವಾರ ರಾತ್ರಿ ಮೃತಪಟ್ಟಿದ್ದಳು.