ಚಿಕನ್ ವಿಂಗ್ಸ್ ಎಂದರೆ ನಾನ್ವೆಜ್ ಪ್ರಿಯರ ಬಾಯಲ್ಲಿ ನೀರು ಬರದೇ ಇರಲಾರದು. ಕೆಎಫ್ಸಿ ಅಥವಾ ಇನ್ನಿತರ ರೆಸ್ಟೊರೆಂಟ್ಗಳು ಈ ಖಾದ್ಯಕ್ಕೆ ಫೇಮಸ್ ಅನ್ನೋದು ಎಲ್ಲರಿಗೂ ಗೊತ್ತು. ಈ ರೆಸಿಪಿಗಳನ್ನು ಮಾಡೋದು ಕಷ್ಟ ಎನಿಸಬಹುದು. ಆದರೆ ನಿಮ್ಮ ಬಳಿ ಏರ್ ಫ್ರೈಯರ್ ಇದ್ದರೆ ಈ ರೆಸಿಪಿಯನ್ನು ತುಂಬಾ ಸುಲಭವಾಗಿ ಮಾಡಬಹುದು. ಕ್ರಿಸ್ಪಿ, ಜ್ಯೂಸಿ ಹಾಗೂ ಟೇಸ್ಟಿಯಾದ ಈ ರೆಸಿಪಿಯನ್ನೊಮ್ಮೆ ನೀವು ಟ್ರೈ ಮಾಡಿದರೆ ಮತ್ತೆ ಮತ್ತೆ ಇದನ್ನು ಮಾಡುತ್ತಲೇ ಇರುತ್ತೀರಿ. ಹಾಗಿದ್ದರೆ ಏರ್ ಫ್ರೈಯರ್ನಲ್ಲಿ ಕ್ರಿಸ್ಪಿ ಚಿಕನ್ ವಿಂಗ್ಸ್ ಮಾಡೋದು ಹೇಗೆಂದು ನೋಡಿಕೊಂಡು ಬರೋಣ.
ಬೇಕಾಗುವ ಪದಾರ್ಥಗಳು:
ತಾಜಾ ಚಿಕನ್ ವಿಂಗ್ಸ್ – ಅರ್ಧ ಕೆಜಿ
ಕೆಂಪು ಮೆಣಸಿನಪುಡಿ – 2 ಟೀಸ್ಪೂನ್
ಉಪ್ಪು – 1 ಟೀಸ್ಪೂನ್
ಕರಿ ಮೆಣಸಿನಪುಡಿ – ಅರ್ಧ ಟೀಸ್ಪೂನ್
ಹೆಚ್ಚಿದ ಕೊತ್ತಂಬರಿ ಸೊಪ್ಪು – 2 ಟೀಸ್ಪೂನ್
ನಿಂಬೆ ಹಣ್ಣು – ಅರ್ಧ
ಮಾಡುವ ವಿಧಾನ:
* ಮೊದಲಿಗೆ ತಾಜಾ ಚಿಕನ್ ವಿಂಗ್ಸ್ಗಳನ್ನು ತೊಳೆದು ಅದರಲ್ಲಿರುವ ನೀರಿನಂಶವನ್ನು ತೆಗೆದು ಹಾಕಲು ಶುಭ್ರ ಬಟ್ಟೆಯಿಂದ ಒರೆಸಿಕೊಳ್ಳಿ.
* ಒಂದು ಬೌಲ್ನಲ್ಲಿ ಕೆಂಪು ಮೆಣಸಿನಪುಡಿ, ಉಪ್ಪು, ಕರಿ ಮೆಣಸಿನಪುಡಿ ಹಾಕಿ ಮಿಶ್ರಣ ಮಾಡಿ.
* ಈ ಮಸಾಲೆ ಮಿಶ್ರಣಕ್ಕೆ ಚಿಕನ್ ವಿಂಗ್ಸ್ಗಳನ್ನು ಸೇರಿಸಿ, ನಿಮ್ಮ ಬೆರಳುಗಳಿಂದ ಚಿಕನ್ ತುಂಡುಗಳಿಗೆ ಮಸಾಲೆ ಚೆನ್ನಾಗಿ ಲೇಪನವಾಗುವಂತೆ ಮಿಶ್ರಣ ಮಾಡಿ.
* ಏರ್ ಫ್ರೈಯರ್ನ ಬಾಸ್ಕೆಟ್ಗೆ ಅಡುಗೆ ಸ್ಪ್ರೇ ಅಥವಾ ಸ್ವಲ್ಪ ಎಣ್ಣೆಯನ್ನು ಸವರಿ, 5 ನಿಮಿಷಗಳ ವರೆಗೆ ಪೂರ್ವಭಾವಿಯಾಗಿ 200 ಡಿಗ್ರಿಗೆ ಬಿಸಿ ಮಾಡಿಕೊಳ್ಳಿ.
* ಏರ್ ಫ್ರೈಯರ್ ಕಾದ ಬಳಿಕ ಚಿಕನ್ ವಿಂಗ್ಸ್ಗಳನ್ನು ಅದರಲ್ಲಿ ಜೋಡಿಸಿ, 15 ನಿಮಿಷ ಬೇಯಿಸಿಕೊಳ್ಳಿ. (ಒಂದರ ಮೇಲೊಂದು ಚಿಕನ್ ತುಂಡುಗಳು ಇರದಂತೆ ನೋಡಿಕೊಳ್ಳಿ)
* ಐದೈದು ನಿಮಿಷಗಳಿಗೊಮ್ಮೆ ಚಿಕನ್ ವಿಂಗ್ಸ್ಗಳನ್ನು ತಿರುವಿ ಹಾಕಿ ಸುತ್ತಲೂ ಗೋಲ್ಡನ್ ಬ್ರೌನ್ ಬಣ್ಣ ಬರುವಂತೆ ಫ್ರೈ ಮಾಡಿಕೊಳ್ಳಿ.
* ಇದೀಗ ಚಿಕನ್ ವಿಂಗ್ಸ್ಗಳನ್ನು ಸರ್ವಿಂಗ್ ಬೌಲ್ ಅಥವಾ ತಟ್ಟೆಗೆ ಹಾಕಿ, ಅದಕ್ಕೆ ನಿಂಬೆ ರಸವನ್ನು ಸಿಂಪಡಿಸಿ. ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ.
* ಇದೀಗ ಕ್ರಿಸ್ಪಿ ಚಿಕನ್ ವಿಂಗ್ಸ್ ತಯಾರಾಗಿದ್ದು, ಚಿಲ್ಲಿ ಸಾಸ್ ಅಥವಾ ನಿಮ್ಮಿಷ್ಟದ ಸಾಸ್ನೊಂದಿಗೆ ಸವಿಯಿರಿ.