ಚಾಮರಾಜನಗರ: ವಸತಿ ಮತ್ತು ಮೂಲಸೌಕರ್ಯ ಸಚಿವ ವಿ.ಸೋಮಣ್ಣ ಮಂಗಳವಾರ ಜಿಲ್ಲೆಗೆ ಭೇಟಿ ನೀಡಲಿದ್ದು, ತೀವ್ರ ಕುತೂಹಲ ಮೂಡಿಸಿದೆ.
ನಗರದ ಸೂರ್ಯೋದಯ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಜಿಲ್ಲಾ ರೈತ ಮೋರ್ಚಾ ಹಮ್ಮಿಕೊಂಡಿರುವ ಸಮಾವೇಶದಲ್ಲಿ ಅವರು ಭಾಗವಹಿಸಲಿದ್ದಾರೆ. ನಂತರ ಮಹದೇಶ್ವರ ಬೆಟ್ಟಕ್ಕೆ ತೆರಳಿ, ಮಹದೇಶ್ವರಸ್ವಾಮಿಗೆ ಪೂಜೆ ಸಲ್ಲಿಸಲಿದ್ದಾರೆ.
ಚುನಾವಣೆಗೆ ಅಭ್ಯರ್ಥಿಗಳ ಹೆಸರುಗಳನ್ನು ಘೋಷಿಸಲು ಬಿಜೆಪಿ ಸಿದ್ಧತೆ ನಡೆಸುತ್ತಿರುವಾಗಲೇ ಸೋಮಣ್ಣ ಚಾಮರಾಜನಗರಕ್ಕೆ ಬರುವುದು, ರಾಜಕೀಯ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ. ಮಹದೇಶ್ವರ ಬೆಟ್ಟದಲ್ಲಿ ಪೂಜೆ ಸಲ್ಲಿಸಲು ಮುಂದಾಗಿರುವುದು ಕೂಡ ಹಲವು ಊಹಾಪೋಹಗಳಿಗೆ ಎಡೆಮಾಡಿದೆ.
ಸೋಮಣ್ಣ ಅವರು ಚಾಮರಾಜನಗರ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಮಂಗಳವಾರ ಸೋಮಣ್ಣ ನಗರದಕ್ಕೆ ಬರುತ್ತಿದ್ದಾರೆ ಎಂದು ಗೊತ್ತಾಗುತ್ತಿದ್ದಂತೆಯೇ ಅವರ ಬೆಂಬಲಿಗರು ಪುಳಕಿತರಾಗಿದ್ದಾರೆ. ಬಿಜೆಪಿ ಕಾರ್ಯಕರ್ತರ, ಲಿಂಗಾಯತ ಸಮುದಾಯದವರ ವಾಟ್ಸ್ ಆಪ್ ಗ್ರೂಪುಗಳಲ್ಲಿ ಬೆಂಬಲಿಗರು ‘ಸೋಮಣ್ಣ ಅವರಿಗೆ ಸ್ವಾಗತ’ ಎಂದೆಲ್ಲ ಬರೆದುಕೊಂಡಿದ್ದಾರೆ.
ಕುತೂಹಲ ಏಕೆ: ರೈತ ಮೋರ್ಚಾ ಸಮಾವೇಶಕ್ಕೆ ಸಂಬಂಧಿಸಿದಂತೆ ಮೋರ್ಚಾದ ಅಧ್ಯಕ್ಷ ಮಲ್ಲಿಕಾರ್ಜುನ ಹಾಗೂ ಪದಾಧಿಕಾರಿಗಳು ಭಾನುವಾರ ಪತ್ರಿಕಾಗೋಷ್ಠಿ ನಡೆಸಿದ್ದರು. ಆ ಸಂದರ್ಭದಲ್ಲಿ ಸೋಮಣ್ಣ ಭಾಗವಹಿಸುವ ಬಗ್ಗೆ ಅವರು ಪ್ರಸ್ತಾಪಿಸಿರಲಿಲ್ಲ. ರೈತ ಮೋರ್ಚಾ ರಾಜ್ಯ ಅಧ್ಯಕ್ಷ ಈರಣ್ಣ ಕಡಾಡಿ, ರಾಜ್ಯ ಸಭಾ ಸದಸ್ಯ ಜಗ್ಗೇಶ್ ಹಾಗೂ ಇತರ ಮುಖಂಡರು ಭಾಗವಹಿಸಲಿದ್ದಾರೆ ಎಂದು ಹೇಳಿದ್ದರು.
‘ಚಾಮರಾಜನಗರ ವಿಧಾನಸಭಾ ಕ್ಷೇತ್ರಕ್ಕೆ ಸೋಮಣ್ಣ ಬಿಜೆಪಿ ಅಭ್ಯರ್ಥಿ ಎಂಬ ಮಾತು ಕೇಳಿ ಬರುತ್ತಿರುವುದರಿಂದ, ಟಿಕೆಟ್ ಅವರಿಗೆ ಖಚಿತವಾಗಿರಬಹುದು. ಹಾಗಾಗಿ, ಅವರು ನಗರದಕ್ಕೆ ಬರುತ್ತಿರಬಹುದು. ಜೊತೆಗೆ ಇದೇ ಕಾರಣಕ್ಕೆ ಅವರ ಮನೆದೇವರಾದ ಮಹದೇಶ್ವರಸ್ವಾಮಿಗೂ ಪೂಜೆ ಸಲ್ಲಿಸಲು ಬಯಸಿರಬಹುದು’ ಎಂಬ ಚರ್ಚೆ ಬಿಜೆಪಿ ಕಾರ್ಯಕರ್ತರ ವಲಯದಲ್ಲಿ ನಡೆಯಿತು.