ಮೈಸೂರು: ಗೇಟ್ ಕೀಲಿ ಕೀ ವಿಚಾರವಾಗಿ ಮುಜರಾಯಿ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳ ಮುಸುಕಿನ ಗುದ್ಧಾಟದಿಂದ ವಿಐಪಿ ಎಂಟ್ರಿ ಹಾಗೂ ಭಕ್ತರ ನಡುವಿನ ಗುದ್ಧಾಟಕ್ಕೆ ಕಾರಣವಾಯಿತು.
ದೇವಾಲಯದ ವಿಐಪಿ ಎಂಟ್ರಿಯಲ್ಲಿ ನೂರಾರು ಮಂದಿ ಒಮ್ಮೆಲೆ ಪ್ರವೇಶಿಸಿದರು. ಆದರೆ, ದೇವಾಲಯದ ಹೆಬ್ಬಾಗಿಲ ಕೀಲಿ ಕೀ ಮುಜರಾಯಿ ಸೂಚನೆ ಮೇರೆಗೆ ಸೆಕ್ಯುರಿಟಿ ಗಳ ಕೈಯಲ್ಲಿ ಇದ್ದ ಹಿನ್ನೆಲೆಯಲ್ಲಿ ಅನೇಕ ವಿಐಪಿಗಳು ಬಾಗಿಲಲ್ಲ ಕಾಯುವಂತಾಯಿತಲ್ಲದೆ, ವಿಐಪಿ ಎಂಟ್ರಿ ಹೌಸ್ ಫುಲ್ ಆಗಿ ಭಕ್ತರ ಜತೆಗೆ ಗುದ್ಧಾಟ ನಡೆಸುವಂತಾಯಿತು. ಇದನ್ನು ತಪ್ಪಿಸಿ ಗಣ್ಯರನ್ನು ಕರೆದೊಯ್ಯಲು ಪೊಲೀಸರು ಪರದಾಡಿದರು. ಇದಾದ ಬಳಿಕ ಸ್ವತಃ ಮುಜರಾಯಿ ಇಒ ಪೊಲೀಸರ ಗೇಟಿನಲ್ಲಿ ವಿಐಪಿಗಳನ್ನು ಬಿಡಿಸಲು ತಡಬಡಾಯಿಸಿದ ಪ್ರಸಂಗ ನಡೆಯಿತು. ಒಟ್ಟಾರೆ ಹಿರಿಯ ಅಧಿಕಾರಿಗಳ ಸಮನ್ವಯತೆ ಕೊರತೆ ಕಂಡು ಬಂದಿತು.
ಮಂಜಿನ ನಡುವೆ ಬೆಟ್ಟದತ್ತ ಸಾವಿರಾರು ಮಂದಿ ಹೆಜ್ಜೆ ಹಾಕಿ ಸಂಭ್ರಮಿಸದರಲ್ಲದೆ ಬೆಟ್ಟದ ಚಾಮುಂಡೇಶ್ವರಿ ದರ್ಶನ ಪಡೆದು ಪುಳಕಿತರಾದರು.
ಗಣ್ಯರಿಂದ ದರ್ಶನ: ಮೂರನೇ ಆಷಾಢ ಶುಕ್ರವಾರದ ಹಿನ್ನೆಲೆಯಲ್ಲಿ ಚಾಮುಂಡಿಬೆಟ್ಟಕ್ಕೆ ಹಲವು ಗಣ್ಯರು ಭೇಟಿ ನೀಡಿ ಚಾಮುಂಡೇಶ್ವರಿಯ ದರ್ಶನ ಪಡೆದರು. ನಟ ದರ್ಶನ್ ಸಹೋದರ ದಿನಕರ್, ಸಹೋದರಿ ಪುತ್ರ ಚಂದನ್, ನಟ ಚಿಕ್ಕಣ್ಣ, ಪದ್ಮಶ್ರೀ ಪುರಸ್ಕೃತರಾದ ಸಾಲು ಮರದ ತಿಮ್ಮಕ್ಕ, ಎಂಎಲ್ ಸಿ ಶರವಣ, ಸಂಸದ ಸುನೀಲ್ ಬೋಸ್ ದಂಪತಿ ಸೇರಿ ಹಲವರು ಬೆಟ್ಟಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದರು.