ಬೇರೆಯವರು ಕಳೆದುಕೊಂಡಿದ್ದು ಭೂಮಿ, ನಮ್ಮದು ಭೂಮಿಯಲ್ಲವೇ: ಪ್ರಮೋದಾದೇವಿ ಒಡೆಯರ್
ಮೈಸೂರು: ಚಾಮುಂಡಿ ಬೆಟ್ಟ ಪ್ರಾಧಿಕಾರ ರಚನೆಗೆ ರಾಜಮನೆತನ ಆಕ್ಷೇಪ ವ್ಯಕ್ತಪಡಿಸಿದೆ. ಹೀಗಾಗಿ ರಾಜವಂಶಸ್ಥರು ಕೋರ್ಟ್ ಮೆಟ್ಟಿಲೇರಿದ್ದು, ಪ್ರಾಧಿಕಾರ ರಚನೆಗೆ ತಡೆಯಾಜ್ಞೆ ತಂದಿದ್ದಾರೆ. ಈ ಬಗ್ಗೆ ಇಂದು ಮೈಸೂರು ಅರಮನೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಚಾಮುಂಡೇಶ್ವರಿ ದೇವಸ್ಥಾನ ನಮ್ಮ ಖಾಸಗಿ ಆಸ್ತಿಯ ಪಟ್ಟಿಯಲ್ಲಿದೆ. ಅದರ ಪ್ರಾಧಿಕಾರ ಮಾಡುವುದು ಕಾನೂನುಬದ್ಧವಲ್ಲ. ದೇಗುಲದ ನಿರ್ವಹಣೆ ನಮಗೆ ನೀಡಿದರೆ ನಾವು ಮಾಡಲು ಸಿದ್ಧ ಎಂದು ಹೇಳಿದ್ದಾರೆ.
ಪ್ರಾಧಿಕಾರಕ್ಕೆ ವಿರೋಧವಿದೆ, ಅದಕ್ಕೆ ಕೋರ್ಟ್ ಮೊರೆ ಹೋಗಲಾಗಿದೆ. ಪ್ರಾಧಿಕಾರದ ಹೆಸರಲ್ಲಿ ಸರ್ಕಾರ ರೂಲಿಂಗ್ ಮಾಡಲು ಆಗುವುದಿಲ್ಲ. ದೇವಸ್ಥಾನದಲ್ಲಿ ಸಮಸ್ಯೆ ಆದಾಗ ಮಾತ್ರ ಸರ್ಕಾರ ಮಧ್ಯಪ್ರವೇಶಿಸಬಹುದು ಎಂದು ತಿಳಿಸಿದ್ದಾರೆ.
ಚಾಮುಂಡಿ ಬೆಟ್ಟಕ್ಕೆ ರಿಟ್ ಅರ್ಜಿ ಸಲ್ಲಿಸಿರುವ ವಿಚಾರವಾಗಿ ರಾಜಮಾತೆ ಪ್ರಮೋದಾ ದೇವಿ ಒಡೆಯರ್ ಸಿಎಂ ಸಿದ್ದರಾಮಯ್ಯ ವಿರುದ್ಧ ಪರೋಕ್ಷವಾಗಿ ಗುಡುಗಿದ್ದಾರೆ. ಭೂಮಿ ಕಳೆದುಕೊಂಡವರಿಗೆ ಭೂಮಿ ನೀಡುವ ವಿಚಾರವಾಗಿ ಮಾತನಾಡಿದೆ ಪ್ರಮೋದಾ ದೇವಿ, ಕೆಲವರು ಭೂಮಿ ಕಳೆದುಕೊಂಡರೆ ಅದು ಭೂಮಿ ನಾವು ಕಳೆದುಕೊಂಡದ್ದು ಭೂಮಿ ಅಲ್ವಾ ಎಂದು ಪ್ರಶ್ನಿಸಿದ್ದಾರೆ. ನಮಗೂ ಭೂಮಿಗೆ ಪರ್ಯಾಯ ಭೂಮಿ ಕೊಡಬೇಕು ಅಲ್ವಾ? ಬೇರೆಯವರು ಕೇಳಿದಾಗ ಕೊಡುವವರು ನಾವು ಕೇಳಿದಾಗ ಏಕೆ ಕೊಡುವುದಿಲ್ಲ ಅಂತ ರಾಜ್ಯ ಸರ್ಕಾರಕ್ಕೆ ಪರೋಕ್ಷವಾಗಿ ಕುಟುಕಿದ್ದಾರೆ.
ಸರ್ವೇ ನಂಬರ್ 4 ಕುರುಬರಹಳ್ಳಿ ಸಿದ್ಧಾರ್ಥ್ ಲೇಔಟ್, ವಿಜಯಶ್ರೀಪುರ ಬಡಾವಣೆಗಳೆಲ್ಲವೂ ಕೂಡ ನಮ್ಮದೇ ಭೂಮಿ ಮುಡಾ ನಮ್ಮ ಹೆಸರಿನಲ್ಲಿರುವ ಹಲವು ಭೂಮಿಯನ್ನು ವಶಪಡಿಸಿಕೊಂಡಿದೆ.ಅದು 1 ಎಕರೆ, 100 ಎಕರೆ, ಸಾವಿರ ಎಕರೆಯೇ ಆಗಿರಬಹುದು, ನಮಗೂ ಸರ್ಕಾರ ಪರಿಹಾರ ಕೊಡಬೇಕು ಅಲ್ಲವೇ, ರಾಜ್ಯ ಸರ್ಕಾರ ನಮ್ಮನ್ನು ಶತ್ರುವಿನಂತೆ ನೋಡುತ್ತಿದೆ ಎಂದು ಪರೋಕ್ಷವಾಗಿ ಸಿಎಂ ಸಿದ್ದರಾಮಯ್ಯನವರಿಗೆ ಭೂಮಿಗೆ ಭೂಮಿ ನೀಡಿ ಎಂದು ಟಾಂಗ್ ಕೊಟ್ಟಿದ್ದಾರೆ.
ಇಷ್ಟು ಮಾತ್ರವಲ್ಲದೇ ಆಸ್ತಿ ವಿಷಯದಲ್ಲಿ ನಾವು ಹಸ್ತಕ್ಷೇಪ ಮಾಡಲ್ಲ, ನನ್ನ ಮಗ ರಾಜಕಾರಣಿಯಾದರೂ ಕೂಡ ಪ್ರಭಾವ ಬೀರಲ್ಲ, ನಮ್ಮ ಯಜಮಾನ್ರು ನಾಲ್ಕು ಬಾರಿ ಎಂಪಿ ಆಗಿದ್ರು, ಅವ್ರು ಒಂದು ಬಾರಿಯೂ ಕೂಡ ಅಧಿಕಾರಿಗಳನ್ನು ಕರೆದು ನನ್ನ ಜಾಗ ನಮಗೆ ಕೊಡಿ ಎಂದು ಕೇಳಿಲ್ಲ. ಯಾವ ಜಾಗವನ್ನು ನಾವು ಮಾಡಿಕೊಂಡಿಲ್ಲ. ಈಗ ನನ್ನ ಪುತ್ರ ಎಂಪಿಯಾಗಿದ್ದಾರೆ, ಅವ್ರು ಜನರ ಸೇವೆ ಮಾಡಲು ಸಂಸದರಾಗಿದ್ದಾರೆ. ನಾನು ಕೂಡ ಅವರನ್ನು ಈ ಬಗ್ಗೆ ಕೇಳಲ್ಲ. ನಾವು ಕಾನೂನು ರೀತಿಯಲ್ಲಿಯೇ ಹೋರಾಟ ಮಾಡುತ್ತೆವೆ ನಮ್ಮ ಆಸ್ತಿ ವಿವಾದವನ್ನು ನಾವು ಕಾನೂನು ಮೂಲಕವೇ ಬಗೆ ಹರಿಸಿಕೊಳ್ಳುತ್ತೇವೆ ಎಂದು ಹೇಳಿದ ಪ್ರಮೋದಾ ದೇವಿಯವರು. ಆ ಸರ್ಕಾರ ಈ ಸರ್ಕಾರ ಅಂತ ಏನಿಲ್ಲಾ ನಮಗೆ ಎಲ್ಲಾ ಸರ್ಕಾರಗಳು ತೊಂದರೆ ಕೊಟ್ಟಿವೆ. ಈಗಲೂ ಕೊಡುತ್ತಲೇ ಇವೆ ಎಂದು ಮೈಸೂರಿನಲ್ಲಿ ಪ್ರಮೋದಾ ದೇವಿ ಬೇಸರ ವ್ಯಕ್ತಪಡಿಸಿದ್ರು.