ಮೈಸೂರು: ಆಷಾಢ ಮಾಸ ಹಿನ್ನೆಲೆಯಲ್ಲಿ ಮೈಸೂರಿನ ಚಾಮುಂಡಿಬೆಟ್ಟಕ್ಕೆ ತೆರಳಿದ್ದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಂದು ತಾಯಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದರು. ದೇವಸ್ಥಾನದ ಸುತ್ತ ಪ್ರದಕ್ಷಿಣೆ ಹಾಕಿ ತಾಯಿ ಚಾಮುಂಡೇಶ್ವರಿ ಕೃಪೆಗೆ ಪಾತ್ರರಾದರು.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬರಲಿ ಅಂತಾ ತಾಯಿ ಚಾಮುಂಡೇಶ್ವರಿಗೆ ಹರಕೆ ಹೊತ್ತಿದ್ದೆ. ದೇವಿ ಮುಂದೆ ಸೆರಗೊಡ್ಡಿ ಬೇಡಿಕೊಂಡಿದ್ದೆ. ನಾವೀಗ ಅಧಿಕಾರಕ್ಕೆ ಬಂದಿದ್ದೇವೆ. ಆದ್ದರಿಂದ ಬೆಟ್ಟಕ್ಕೆ ಬಂದು ಹರಕೆ ತೀರಿಸಿದ್ದೇನೆ. ಈಗ ರಾಜ್ಯದಲ್ಲಿ ಒಳ್ಳೆ ಮಳೆಯಾಗಲಿ ಅಂತಾ ದೇವಿಯಲ್ಲಿ ಪ್ರಾರ್ಥಿಸಿದ್ದೇನೆ ಎಂದು ತಿಳಿಸಿದ್ದಾರೆ.
ಗೃಹಲಕ್ಷ್ಮಿ ವಿಳಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆಗೆ ಪ್ರತ್ಯೇಕ ಆ್ಯಪ್ ರೂಪಿಸಿದ್ದೇವೆ. ಆ್ಯಪ್ ಮೂಲಕ ಅರ್ಜಿ ಸಲ್ಲಿಸಲು ಎಲ್ಲಾ ತಯಾರಿ ಮಾಡಿದ್ದೇವೆ. ಜೂನ್ 27 ರಂದು ಸಚಿವ ಸಂಪುಟ ಸಭೆಯಲ್ಲಿ ಸಿಎಂಗೆ ಆ್ಯಪ್ ತೋರಿಸಿ, ನಂತರ ಅರ್ಜಿ ಸಲ್ಲಿಕೆಗೆ ಬಿಡುಗಡೆ ಮಾಡುತ್ತೇವೆ. ಆಗಸ್ಟ್ 17ರ ನಂತರ ಫಲನಾಭವಿಗಳ ಖಾತೆಗೆ ಹಣ ಹಾಕುತ್ತೇವೆ ಎಂದು ಭರವಸೆ ನೀಡಿದ್ದಾರೆ.
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಇರುವುದಿಲ್ಲ. ಅರ್ಜಿ ಸಲ್ಲಿಕೆಗೆ ಶುಲ್ಕವೂ ಇರುವುದಿಲ್ಲ. ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಆ್ಯಪ್ ರಚಿಸಿದ್ದೇವೆ. ಒಂದು ರೂಪಾಯಿ ಹಣವನ್ನೂ ಅರ್ಜಿ ಸಲ್ಲಿಕೆಗೆ ಕೊಡಬೇಡಿ. ಅರ್ಜಿ ಸಲ್ಲಿಸಿ ಸ್ವೀಕೃತಿ ಪತ್ರ ಸಿಕ್ಕರೆ ನೀವು ಫಲಾನುಭವಿ ಪಟ್ಟಿಗೆ ಸೇರುತ್ತೀರಾ. ಇದರಲ್ಲಿ ಯಾವುದೇ ಗೊಂದಲಗಳು ಬೇಡ ಎಂದು ಅಭಯ ನೀಡಿದ್ದಾರೆ.