ಚಾಮುಂಡಿ ಬೆಟ್ಟದಲ್ಲಿ ಸಂಭ್ರಮ, ಸಡಗರ ಮನೆ ಮಾಡಿದ್ದು, ಬೆಳಗ್ಗೆಯಿಂದಲೇ ನಾಡ ದೇವತೆಯ ದರ್ಶನಕ್ಕೆ ಅಪಾರ ಭಕ್ತ ಸಾಗರ ಹರಿದು ಬರುತ್ತಿದೆ. ವರ್ಧಂತಿ ಮಹೋತ್ಸವದ ಹಿನ್ನೆಲೆಯಲ್ಲಿ ಇಂದು ತಾಯಿ ಚಾಮುಂಡೇಶ್ವರಿಗೆ ವಿವಿಧ ಪೂಜಾ ಕೈಂಕರ್ಯಗಳು ನಡೆದಿದೆ. ಅಭ್ಯಂಜನ ಸ್ನಾನ, ರುದ್ರಾಭಿಷೇಕ, ಪಂಚಾಮೃತಭಿಷೇಕ, ಕುಂಕುಮರ್ಚನೆ ನೆರವೇರಿಸಲಾಗಿದೆ. ವಿವಿಧ ಬಗೆಯ ಹೂಗಳಿಂದ ದೇವಸ್ಥಾನದ ಗರ್ಭಗುಡಿಯನ್ನು ಅಲಂಕಾರ ಮಾಡಲಾಗಿದೆ.
ಚಾಮುಂಡಿ ಬೆಟ್ಟದಲ್ಲಿ ಚಿನ್ನದ ಪಲ್ಲಕ್ಕಿ ಉತ್ಸವಕ್ಕೆ ರಾಜವಂಶಸ್ಥ ಯದುವೀರ್ ಒಡೆಯರ್ ಅವರು ಚಾಲನೆ ನೀಡಿದರು. ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್, ಶಾಸಕ ಜಿ.ಟಿ ದೇವೇಗೌಡ ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದರು.
ಇದೇ ವೇಳೆ ಯದುವೀರ್ ಒಡೆಯರ್ ಅವರು ಸಂಸದರಾದ ಬಳಿಕ ವರ್ಧಂತಿಯಲ್ಲಿ ಭಾಗಿಯಾಗಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು ನಾನು ಸಂಸದನಾಗಿ ಮಾತ್ರವಲ್ಲ, ಚಾಮುಂಡೇಶ್ವರಿ ನಮ್ಮ ಕುಲ ದೇವತೆ. ಸಂಪ್ರದಾಯಕ್ಕೆ ಅನುಸಾರವಾಗಿ ವರ್ಧಂತಿ ಮಹೋತ್ಸವದಲ್ಲಿ ಭಾಗಿಯಾಗಿದ್ದೇವೆ. ನಾಡಿಗೆ ಉತ್ತಮ ಮಳೆ ಬೆಳೆ ಆಗಲಿ ಎಂದು ತಾಯಿಯಲ್ಲಿ ಪ್ರಾರ್ಥನೆ ಮಾಡಿಕೊಂಡಿದ್ದೇವೆ ಎಂದಿದ್ದಾರೆ.