ಹನೂರು:- ಪಟ್ಟಣದಲ್ಲಿ ಯಾವುದೇ ಅನುಮತಿ ಇಲ್ಲದೆ ಸಂಗ್ರಹಿಸಿದ್ದ ಬಿಜೆಪಿ ನಾಯಕನ ಭಾವಚಿತ್ರವಿದ್ದ ಶಾಲಾ ಬ್ಯಾಗ್ಗಳು, ಮಕ್ಕಳ ಶೂಗಳು, ಟವಲ್ ಹಾಗೂ ಬೆಡ್ ಶೀಟ್ಗಳನ್ನು ಚುನಾವಣಾಧಿಕಾರಿಗಳು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಹನೂರು ಪಟ್ಟಣದ ಮೈಸೂರು ಮಾರಮ್ಮನ ದೇವಾಲಯದ ಬೀದಿಯ ಅಂಗಡಿ ಮಳಿಗೆಯೊಂದರಲ್ಲಿ ಬಿಜೆಪಿ ಮುಖಂಡ ನಿಶಾಂತ್ ಕೆಲ ಸಾಮಗ್ರಿಗಳನ್ನು ಸಂಗ್ರಹಿಸಿದ್ದಾರೆ ಎಂಬುದಾಗಿ ದೊರೆತ ಖಚಿತ ಮಾಹಿತಿ ಮೇರೆಗೆ ಚುನಾವಣಾಧಿಕಾರಿಗಳು ಮತ್ತು ಪೆÇಲೀಸರು ದಾಳಿ ನಡೆಸಿದ್ದಾರೆ.
ಪೆÇಲೀಸರು ದಾಳಿ ನಡೆಸಿದ ಕೂಡಲೇ ಗೋಡೌನ್ ನಲ್ಲಿದ್ದ ವ್ಯಕ್ತಿಗಳೆಲ್ಲ ಪರಾರಿಯಾಗಿದ್ದು ತಪಾಸಣೆಗೆ ಒಳಪಡಿಸಿದಾಗ 1710 ಜೊತೆ ಮಕ್ಕಳ ಶಾಲಾ ಶೂಗಳು, 630 ಶಾಲಾ ಬ್ಯಾಗ್ ಗಳು, ಎರಡು ಚೀಲ ಕೆಂಪು ಟವಲ್ ಗಳು ಹಾಗೂ 15 ಬೆಡ್ ಶೀಟ್ ಗಳು ಪತ್ತೆಯಾಗಿವೆ.
ಕೂಡಲೇ ಪೆÇಲೀಸರು ಅಂಗಡಿಯ ಕಟ್ಟಡದ ಮಾಲೀಕರಾದ ಸುರೇಶ್ ರವರನ್ನು ವಿಚಾರಣೆಗೊಳಪಡಿಸಿದಾಗ ಈ ಮಳಿಗೆಯನ್ನು ರಾಮಪುರದ ಕಣ್ಣಪ್ಪ ಎಂಬುವವರು ಬಾಡಿಗೆಗೆ ಪಡೆದಿದ್ದರು ಎಂದು ಮಾಹಿತಿ ನೀಡಿದ್ದಾರೆ.
ಚುನಾವಣಾಧಿಕಾರಿ ನವೀನ್ ಮಠದ್ ಮತ್ತು ಅಧಿಕಾರಿಗಳ ತಂಡ ಅಂಗಡಿ ಮಳಿಗೆಯಲ್ಲಿದ್ದ ವಸ್ತುಗಳನ್ನೆಲ್ಲ ವಶಪಡಿಸಿಕೊಂಡು ಹನೂರು ಪೆÇಲೀಸರ ವಶಕ್ಕೆ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.