ಬೆಂಗಳೂರು: ಜುಲೈ 1ರಿಂದ ಅನ್ನಭಾಗ್ಯ ಯೋಜನೆಯಡಿ ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್ದಾರರಿಗೆ ಪ್ರತಿ ತಿಂಗಳು 10 ಕೆಜಿ ಆಹಾರ ಧಾನ್ಯ ನೀಡುವುದಾಗಿ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಈ ಆದೇಶದ ಪ್ರಕಾರ 10 ಕೆಜಿ ಅಕ್ಕಿ ಸಿಗುವುದಿಲ್ಲ ಎನ್ನುವುದು ಖಚಿತವಾಗಿದೆ.
ಸರ್ಕಾರ ಹೊರಡಿಸಿರುವ ಆದೇಶದ ಪ್ರಕಾರ ಅಂತ್ಯೋದಯ ಅನ್ನ ಯೋಜನೆ ಪಡಿತರ ಚೀಟಿಯನ್ನು ಹೊಂದಿರುವ ಕುಟುಂಬಕ್ಕೆ ಫಲಾನುಭವಿಗಳನ್ನು ಪರಿಗಣನೆಗೆ ತೆಗೆದುಕೊಳ್ಳದೆ ಪ್ರತಿ ತಿಂಗಳು 35 ಕೆಜಿ ಆಹಾರ ಧಾನ್ಯಗಳನ್ನು ವಿತರಿಸಲಾಗುತ್ತದೆ.
ಆದ್ಯತಾ ಪಡಿತರ ಚೀಟಿಯನ್ನು ಹೊಂದಿರುವ ಕುಟುಂಬದ ಪ್ರತಿ ಸದಸ್ಯರಿಗೆ 5 ಕೆಜಿ ಆಹಾರ ಧಾನ್ಯಗಳನ್ನು ಉಚಿತವಾಗಿ ವಿತರಿಸಲಾಗುವುದು ಎಂದು ಸರ್ಕಾರ ಅಧಿಕೃತ ಆದೇಶದಲ್ಲಿ ತಿಳಿಸಿದೆ. 5 ಕೆ.ಜಿ. ಆಹಾರ ಧಾನ್ಯವನ್ನು ರಾಜ್ಯ ಸರ್ಕಾರದ ವೆಚ್ಚದಲ್ಲಿ ಉಚಿತವಾಗಿ ನೀಡುವುದಾಗಿ ತಿಳಿಸಿದೆ.
ಬಿಪಿಎಲ್ ಪಡಿತರ ಚೀಟಿ ಹೊಂದಿರುವವರಿಗೆ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯನ್ವಯ ವಿತರಿಸಲಾಗುತ್ತಿರುವ 5 ಕೆಜಿ ಆಹಾರ ಧಾನ್ಯಗಳ ಹೆಚ್ಚುವರಿಯಾಗಿ 1 ಕೆಜಿ ಅಕ್ಕಿಯನ್ನು ನೀಡುವುದಾಗಿ ಆದೇಶದಲ್ಲಿ ತಿಳಿಸಲಾಗಿದೆ. ಆದರೆ, ಯಾವ ಆಹಾರ ಧಾನ್ಯಗಳನ್ನು ವಿತರಿಸಲಾಗುತ್ತದೆ ಎನ್ನುವುದುನ್ನು ಆದೇಶದಲ್ಲಿ ಎಲ್ಲಿಯೂ ತಿಳಿಸಿಲ್ಲ. ಜುಲೈ 1ರಿಂದ ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್ ಹೊಂದಿರುವವರು ಈ ಯೋಜನೆಯ ಫಲಾನುಭವವನ್ನು ಪಡೆದುಕೊಳ್ಳಲಿದ್ದಾರೆ.
ಅಕ್ಕಿ ದಾಸ್ತಾನು ಕೊರತೆ
ಶುಕ್ರವಾರ ವಿಧಾನಸೌಧದಲ್ಲಿ ಮಾತನಾಡಿದ್ದ ಸಿಎಂ ಸಿದ್ದರಾಮಯ್ಯ ಸದ್ಯ ಪೂರೈಕೆ ಮಾಡುವಷ್ಟು ಅಕ್ಕಿ ದಾಸ್ತಾನು ಲಭ್ಯವಿಲ್ಲದ ಕಾರಣ 10 ಕೆಜಿ ಅಕ್ಕಿ ಕೊಡುವ ಬದಲಾಗಿ 5 ಕೆಜಿ ಅಕ್ಕಿ ಮತ್ತು 5 ಕೆಜಿ ಆಹಾರ ಧಾನ್ಯಗಳನ್ನು ವಿತರಿಸಲಾಗುತ್ತಿದೆ ಎಂದು ಹೇಳಿದ್ದರು.
ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್ ಹೊಂದಿರುವ ಎಲ್ಲರಿಗೂ ಪ್ರತಿ ತಿಂಗಳು ಉಚಿತವಾಗಿ ಅಕ್ಕಿ ಮತ್ತು ಆಹಾರ ಧಾನ್ಯ ಲಭ್ಯವಾಗಲಿದೆ. ಅಕ್ಕಿ ಖರೀದಿ ಮಾಡಲು ರಾಜ್ಯ ಸರ್ಕಾರ ಅಂದಾಜು 1400 ಕೋಟಿ ರುಪಾಯಿ ಖರ್ಚು ಮಾಡಬೇಕಾಗುತ್ತದೆ. ಅಕ್ಕಿ ದಾಸ್ತಾನು ಇಲ್ಲದ ಕಾರಣ, ಆಹಾರ ಧಾನ್ಯಗಳನ್ನು ನೀಡಲು ಸರ್ಕಾರ ನಿರ್ಧರಿಸಿದೆ.