ಬೆಂಗಳೂರು : ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಗುರುವಾರ ಜೆಡಿಎಸ್ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ಮಹಿಳೆಯರಿಗೆ, ವಿದ್ಯಾರ್ಥಿನಿಯರಿಗೆ, ರೈತರಿಗೆ ಹಾಗೂ ಆಟೋ ಚಾಲಕರು ಸೇರಿದಂತೆ ಎಲ್ಲರಿಗೂ ಭರಪೂರ ಕೊಡುಗೆ ನೀಡುವ ಭರವಸೆ ನಿಡಿದ್ದಾರೆ.
ರಾಜ್ಯದಲ್ಲಿ ಈಗಾಗಲೇ 123 ಸ್ಥಾನ ಪಡೆದು ಸ್ವತಂತ್ರ ಸರ್ಕಾರ ರಚನೆ ಮಾಡುತ್ತೇವೆ ಎಂದು ಹೇಳುತ್ತಿರುವ ಕುಮಾರಸ್ವಾಮಿ, ಅವರು ತಮ್ಮ ಪಂಚರತ್ನ ಯಾತ್ರೆಯಲ್ಲಿ ರೈತರು, ಮಹಿಳೆಯರು ಹಾಗೂ ವಿದ್ಯಾರ್ಥಿಗಳು ಹಂಚಿಕೊಂಡಿರುವ ಹಾಗೂ ತಮ್ಮ ಮುಂದೆ ಇಟ್ಟಿರುವ ಬೇಡಿಕೆಗಳನ್ನು ಈಡೇರಿಸುವ ಭರವಸೆಯನ್ನು ಪ್ರಣಾಳಿಕೆಯನ್ನು ಹೇಳಿದ್ದಾರೆ. ಇನ್ನು ಜೆಡಿಎಸ್ ಸರ್ಕಾರ ಅಧಿಕಾರಕಕ್ಕೆ ಬಂದರೆ ಇದರಲ್ಲಿ ವಿಶೇಷವಾಗಿ ರೈತ ಯುವಕರನ್ನು ಮದುವೆಯಾದರೆ ಯುವತಿಯರಿಗೆ 2 ಲಕ್ಷ ರೂ, ಸಹಾಯಧಾನ ನೀಡುವುದಾಗಿ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ್ದಾರೆ.
ಜೆಡಿಎಸ್ ಪ್ರಣಾಳಿಕೆಯ ಪ್ರಮುಖ ಘೋಷಣೆಗಳು
ಅಕ್ಷರದಾತೆ: ಅಂಗನವಾಡಿ ಕಾರ್ಯಕರ್ತೆಯರಿಗೆ 5,000 ರೂ. ವೇತನ ಹೆಚ್ಚಳ
ಸಾರಥಿಗೆ ಸೈ: ಆಟೋ ಚಾಲಕರಿಗೆ ಮಾಸಿಕ 2 ಸಾವಿರ ರೂ. ಹಣಕಾಸು ನೆರವು
ರೈತ ಸಂಗಾತಿ ಯೋಜನೆ: ರೈತ ವರನ ವಿವಾಹವಾಗುವ ವಧುವಿಗೆ 2 ಲಕ್ಷ ರೂ. ಸಹಾಯಧನ
ಕ್ಷೇಮ ನಿಧಿ ಯೋಜನೆ: ಅತಿ ವಿರಳ ಕಾಯಿಲೆಯಿಂದ ಬಳಲುವವರಿಗೆ 25 ಲಕ್ಷ ರೂ. ನೆರವು
ವಿದ್ಯಾನಿಧಿ ಯೋಜನೆ: ಪದವಿ ಅಭ್ಯಾಸ ಮಾಡುವ ಎಲ್ಲ ಬಿಪಿಎಲ್ ಕುಟುಂಬದ ವಿದ್ಯಾರ್ಥಿನಿಯರಿಗೆ ಎಲೆಕ್ಟ್ರಿಕ್ ಮೊಪೆಡ್
ಮಾತೃಶ್ರೀ ಯೋಜನೆ: ಗರ್ಭಿಣಿ ತಾಯಂದಿರ ಅಗತ್ಯತೆ ಪೂರೈಕೆಗೆ 6 ತಿಂಗಳ ಕಾಲ 6 ಸಾವಿರ ರೂ ಭತ್ಯೆ
ಮುಸ್ಲಿಂ ಮೀಸಲಾತಿ ಪುನಃಸ್ಥಾಪನೆ: ಮುಸ್ಲಿಮರಿಗೆ ಈ ಹಿಂದೆ ಇರುವಂತೆ ಒಬಿಸಿ 2ಬಿ ಶೇ.4 ಮೀಸಲಾತಿ ಮರುಜಾರಿ
ಸೈಕಲ್ ವಿತರಣೆ: ರಾಜ್ಯದ ಎಲ್ಲ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆ
ಸಿಲಿಂಡರ್ ಯೋಜನೆ: ಒಂದು ವರ್ಷಕ್ಕೆ 5 ಸಿಲಿಂಡರ್ ಉಚಿತ ವಿತರಣೆ
ರೈತ ಸಿರಿ: ಅನ್ನದಾತರಿಗೆ ಪ್ರತಿ ಎಕರೆಗೆ 10 ಸಾವಿರ ರೂ. ಸಹಾಯಧನ
ಆಶಾಕಿರಣ : ಈಗಿರುವ ವಿಧವಾ ವೇತನ 900 ರೂ ನಿಂದ 2,500 ಕ್ಕೆ ಏರಿಕೆ
ಕಾರ್ಮಿಕ ಕಲ್ಯಾಣ ನಿಧಿ: ಭೂ ರಹಿತ ಕೃಷಿ ಕಾರ್ಮಿಕರಿಗೆ ಮಾಸಿಕ 2,500 ಸಹಾಯಧನ
ಕೃಷಿ ಬೆಳಕು: ರೈತ ಪಂಪ್ಸೆಟ್ಗಳಿಗೆ 24/7 ನಿರಂತರ ವಿದ್ಯುತ್ ಪೂರೈಕೆ
ಹಿರಿಸಿರಿ : ಹಿರಿಯ ನಾಗರಿಕರಿಗೆ ನೆಮ್ಮದಿ ಜೀವನ ನಡೆಸಲು ಮಾಸಿಕ ಸಹಾಯಧನ 5,000ಕ್ಕೆ ಹೆಚ್ಚಳ
ಬೊಮ್ಮಾಯಿ ಮೀಸಲಾತಿ ರದ್ದಿ ಪೇಪರ್ ಇದ್ದಂತೆ : ಜೆಡಿಎಸ್ ಪ್ರಣಾಳಿಕೆ ಬಿಡುಗಡೆ ಮಾಡಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು, ಪ್ರಸ್ತುತ ರಾಜ್ಯದಲ್ಲಿರುವ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಹಲವು ಸಮುದಾಯಗಳಿಗೆ ಮೀಸಲಾತಿಯನ್ನು ನೀಡಿದೆ. ಆದರೆ, ಬೊಮ್ಮಾಯಿ ಮೀಸಲಾತಿ ವಿಚಾರ ರದ್ದಿ ಪೇಪರ್ ಆಗಿದೆ. ಮೀಸಲಾತಿ ಕೊಟ್ಟಿದ್ದಾರೆ ಅಂತ ಹೇಳಿಕೊಳ್ಳುವ ಅವರು, ಈ ಎರಡು ಸಮುದಾಯಕ್ಕೆ ಎಷ್ಟು ಗೌರವ ಕೊಟ್ಟಿದ್ದಾರೆ ಅಂತ ಗೊತ್ತಾಗುತ್ತದೆ. ಪಂಚಮಸಾಲಿ ಶ್ರೀಗಳನ್ನು ಚಿತಾವಣೆ ಮಾಡಿ ಬಿಸಿಲಿನಲ್ಲಿ ನಡೆಸಿದರು. ಪಾಪ ಅವರು ಬಿಸಿಲಿನಲ್ಲಿ ನಡೆದುಕೊಂಡು ಪಾದಯಾತ್ರೆ ಮಾಡಿದರು. ಸಮಾನತೆ ಅನ್ನೋದು ಎಲ್ಲ ಸಮುದಾಯಕ್ಕೆ ದೊರಕಬೇಕು, ಇದು ನಮ್ಮ ಪಾಲಿಸಿ ಆಗಿದೆ ಎಂದು ಹೇಳಿದರು.