ಮಂಡ್ಯ:- ಮಂಡ್ಯ ಜಿಲ್ಲೆ ರಾಜಕಾರಣ ವಿಭಿನ್ನವಾಗಿದೆ. ದೇವೇಗೌಡರು ಮುಖ್ಯಮಂತ್ರಿ ಆಗ್ತಾರೆ ಅಂತ 8 ಸ್ಥಾನ ಗೆಲ್ಲಿಸಿದ್ದರು.ಎಸ್.ಎಂ.ಕೃಷ್ಣ ಸಿಎಂ ಆಗ್ತಾರೆ ಅಂತ ಅವರಿಗೂ 8 ಸ್ಥಾನ ಗೆಲ್ಲಿಸಿದ್ದರು.ಅದು ಜಿಲ್ಲೆಯ ಜನರ ಸ್ವಾಭಿಮಾನ, ಅಭಿಮಾನ
ವಾಗಿದೆ.ಇಂದು ನಮ್ಮ ಸ್ವಯಂಕೃತ ಅಪರಾಧಗಳಿಂದ ಸೋತಿದ್ದೇವೆ.ಜನ ನಮನ್ನ ಕೈಬಿಟ್ಟಿಲ್ಲ. ಜೆಡಿಎಸ್ ಮುಗಿದಿಲ್ಲ, ಬದುಕಿದೆ. ದುರಹಂಕಾರದ ಮಾತು ಬಿಟ್ಟು ಪ್ರಾಮಾಣಿಕವಾಗಿ ನಡೆದುಕೊಳ್ಳಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.
ಮಂಡ್ಯ ನಗರದ ಕಲ್ಲಹಳ್ಳಿಯಲ್ಲಿರುವ ಸಾಯಿ ಎಲೆಕ್ಟ್ರಾನಿಕ್ಸ್ ಮಾಲಿಕ ಸ್ವಾಮಿ ಅವರ ನೂತನ ಮನೆ ಗೃಹಪ್ರವೇಶದ ಅಂಗವಾಗಿ ಭೇಟಿ ನೀಡಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,ಇನ್ನು ರಾಜ್ಯದಲ್ಲಿ ಪಕ್ಷನಿಷ್ಠೆ ಯಾರಲ್ಲೂ ಉಳಿದಿಲ್ಲ. ವೈಯಕ್ತಿಕ ಸ್ಥಾನಮಾನಕ್ಕಾಗಿ ಪಕ್ಷಾಂತರ ಮಾಡ್ತಾರೆ. ಹಾಗಾಗಿ, ಆ ವಿಚಾರಗಳಿಗೆ ನಾನು ಮಹತ್ವ ಕೊಡಲ್ಲ, ತಲೆ ಕೆಡಿಸಿಕೊಳ್ಳಲ್ಲ. ಮಂಡ್ಯದಲ್ಲಿ ಕೆಲವರು ಹೋಗ್ತಾರೆ ಅಂತಾರೆ.ಈ ಬಗ್ಗೆ ಅವರನ್ನೇ ಕೇಳಬೇಕು, ನಾನು ಯಾರ ಮೇಲೂ ಅನುಮಾನ ಪಡಲ್ಲ. ಪುಟ್ಟರಾಜು ಸದ್ಯ ನಮ್ಮ ಪಕ್ಷದಲ್ಲಿದ್ದಾರೆ. ಪಕ್ಷಾಂತರ ಬಗ್ಗೆ ಅವರನ್ನೇ ಕೇಳಬೇಕು. ಈ ಸುದ್ದಿ ಹೇಳಿದವರು, ಸುದ್ದಿಯಲ್ಲಿರುವವರು ಸ್ಪಷ್ಟನೆ ನೀಡಬೇಕು. ನಾನು ಈ ಬಗ್ಗೆ ಉತ್ತರ ಕೊಡಲು ಸಾದ್ಯವಿಲ್ಲ ಎಂದು ಹೇಳಿದರು.
ರಮೇಶ್ ಬಂಡಿಸಿದ್ದೇಗೌಡ ಪಾಪದ ಕೊಡ ತುಂಬಿದೆ: ನನ್ನ ಮೇಲೆ ಶ್ರೀರಂಗಪಟ್ಟಣದ ಶಾಸಕ ರಮೇಶ್ ಬಂಡಿಸಿದ್ದೇಗೌಡ ಅಪಾದನೆ ಮಾಡ್ತಾನೆ. ಅವನ ಮಾತು ಕೇಳಿ ನನಗೆ ಆಶ್ಚರ್ಯವಾಗುತ್ತಿದೆ. ಆ ಕುಟುಂಬಕ್ಕೆ ದೇವೇಗೌಡರು ಕುಟುಂಬ ಬೆಂಬಲವಾಗಿ ನಿಂತಿತ್ತು. ಈ ಗಿರಾಕಿ ಎಂಎಲ್ಎ ಆದಾಗ ಬೆಳಗಿನ ಜಾವ 4:30ಕ್ಕೆ ಹಳ್ಳಿ ಹಳ್ಳಿ ಸುತ್ತಿ ಪ್ರಚಾರ ಮಾಡಿದ್ದೇನೆ. ಅಂಬರೀಶ್ ವಿರುದ್ಧ ಈತನನ್ನ ಗೆಲ್ಲಿಸಿಕೊಂಡು ಬಂದಿದ್ದೇನೆ. ಈಗ ಅವನು ನನಗೆ ಉಪದೇಶ ಮಾಡ್ತಾನೆ, ತಾಳ್ಮೆ ಹೇಳ್ತಾನೆ. ಇವರ ಪಾಪದ ಕೊಡ ತುಂಬಿದೆ, ಇದೆಲ್ಲಾ ಶಾಶ್ವತ ಅಲ್ಲ ಎಂದು ಕಿಡಿಕಾರಿದರು
ಬಿಡಿಎ ಕಮಿಷನರ್ ಆಗಲು 15 ಕೋಟಿ ರೂ. ಕೊಡಲು ಬಂದಿದ್ದರು: ಈಗಿನ ವರ್ಗಾವಣೆಗೂ, ನನ್ನ ಕಾಲದ ವರ್ಗಾವಣೆಗೂ ವ್ಯತ್ಯಾಸ ಇದೆ. 2018ರಲ್ಲಿ ನಾನು ಸಿಎಂ ಆದಾಗಾ ಬಿಡಿಎ ಕಮಿಷನರ್ ಆಗಲು 15 ಕೋಟಿ ರೂ. ಕೊಡಲು ಬಂದರು. ನನಗೆ 15 ಕೋಟಿ ರೂ. ಕೊಡುವ ಅಧಿಕಾರಿ ಬಿಡಿಎಗೆ ಏನು ಕೆಲಸ ಮಾಡಲು ಸಾಧ್ಯ ಬೇಡ ಎಂದಿದ್ದೆನು. ನನ್ನ ಸರ್ಕಾರದ ತೆಗೆದು ಬಿಜೆಪಿ ಬಂದ ಬಳಿಕ ಅದೇ ಅಧಿಕಾರಿಗೆ ಪೋಸ್ಟ್ ಕೊಟ್ಟರು. ಇಂದಿಗೂ ನಾನು ಯಾವದಕ್ಕೂ ಅಂಜಲ್ಲ. ಇದಕ್ಕಿಂತ ಕಷ್ಟದ ದಿನಗಳನ್ನು ನೋಡಿದ್ದೇನೆ. ಮೊದಲು ರೈತರ ಕಷ್ಟಗಳನ್ನು ಪರಿಹರಿಸಿ. 134 ತಾಲೂಕುಗಳಲ್ಲಿ ಬರ ಪರಿಸ್ಥಿತಿ ಇದೆ ಎಂದಿದ್ದೀರಿ. ರೈತರಿಗೆ ಬರ ಪರಿಹಾರ ಸಿಗಲ್ಲ. ಬರದ ಹೆಸರಲ್ಲೂ ದುಡ್ಡು ಹೊಡೆಯುವ ಕಾರ್ಯಕ್ರಮ ಆರಂಭಾಗುತ್ತದೆ. ಅದು ಆಗದ ರೀತಿ ಎಚ್ಚರಿಕೆ ವಹಿಸಿ ಕೆಲಸ ಮಾಡಿ ಎಂದು ತಿಳಿಸಿದರು.