ವರ್ಗಾವಣೆ ದಂಧೆ ಎನ್ನುವುದು ಸುಳ್ಳು ಆಪಾದನೆ: ಕೆ.ಎನ್. ರಾಜಣ್ಣ ಸವಾಲು
ಹಾಸನ : ರಾಜ್ಯದಲ್ಲಿ ವರ್ಗಾವಣೆ ದಂಧೆ ನಡೆಸಲಾಗುತ್ತಿದೆ ಎಂದು ಸುಳ್ಳು ಆಪಾದನೆ ಮಾಡಲಾಗಿದ್ದು, ಅದೇನೊ ಜೇಬಿನಲ್ಲಿ ಇದೆ ಎಂದು ಹೇಳಿಕೆ ನೀಡುವ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಹೊರ ಹಾಕಲು ಹೇಳಿ ಎಂದು ಸಹಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ ಸವಾಲು ಹಾಕಿದರು.
ಹಾಸನ ನಗರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಜೇಬಲ್ಲಿ ಅದೇನು ತೋರಿಸಿಕೊಂಡು ಇಲ್ಲಿ ಇದೆ ಅಂತಿದ್ದರಲ್ಲಾ ಅದನ್ನು ಹೊರ ಹಾಕಲಿ, ಆಮೇಲೆ ಯಾರು ತಪ್ಪಿತಸ್ಥರು ಇರುತ್ತಾರೆ ತಿಳಿಯಲಿ. ವರ್ಗಾವಣೆ ದಂಧೆ ಆರೋಪ ಸುಳ್ಳು. ಅದೇನಾದ್ರೂ ನಡೆದಿದ್ದರೆ ಯಾವುದರಲ್ಲಿ ಆಗಿದೆ ಎಂದು ನಿಖರವಾಗಿ ಹೇಳಲಿ ಎಂದು ಸವಾಲು ಹಾಕಿದರು. ಏನೇ ಆಪಾದನೆ ಮಾಡಿದ್ರೂ ಒಂದು ಆಧಾರ ಇರಬೇಕು. ಸುಮ್ಮನೆ ಸುಳ್ಳು ಆಪಾದನೆ ಮಾಡುವುದು ಯಾರಿಗೂ ಭೂಷಣ ಅಲ್ಲಾ. ನಮ್ಮ ಸರ್ಕಾರ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದೆ. ಆಧಾರ ಇಟ್ಕಂಡು ಹೇಳಿದ್ರೆ ಒಪ್ಪಿಕೊಳ್ಳಬಹುದು. ಅದೇನೋ ಇಟ್ಕಂಡು ಹಾವಾಡಿಗರು ಹಾವು ಬಿಡ್ತೀನಿ ಅಂತರಲ್ಲಾ ಆ ತರಹದ ಕೆಲಸ ಮಾಡಬಾರದು ಎಂದು ವ್ಯಂಗ್ಯವಾಗಿ ಮಾತನಾಡಿದರು. ಹಾವಿದರೆ ಅರ್ಜೆಂಟಾಗಿ
ಬುಟ್ಟಿಯಲ್ಲಿ ತೋರಿಸಲಿ, ಇಷ್ಟು ದಿವಸ ಏಕೆ ಕಾಯಬೇಕು. ಜೇಬಲ್ಲಿ ತೋರ್ಸಿದ್ದನ್ನು ಮೊದಲು ಆಚೆ ಬಿಡಲು ಹೇಳಿ ಆಮೇಲೆ ನೋಡೋಣ ಎಂದು ಕುಟುಕಿದರು. ಸರ್ಕಾರ ಬದಲಾಗಿದೆ, ಅನೇಕರು ಹೊಸದಾಗಿ ಶಾಸಕರಾಗಿದ್ದಾರೆ. ನನ್ನ ಕ್ಷೇತ್ರದಲ್ಲಿ ನನ್ನ ಮಾತು ಕೇಳುವ ಅಧಿಕಾರಿಗಳು ಇರಬೇಕು ಅಂತ ಬಯಸುತ್ತಾರೆ. ಕೆಲ ಒತ್ತಡಗಳು ಬಂದಾಗ ಬದಲಾವಣೆಗಳು ಆಗ್ತವೆ ಎಂದ ಸಚಿವರು, ಇದು ಯಾವುದೇ ಸರ್ಕಾರದ ಮೊದಲ ವರ್ಷದಲ್ಲಿ ಆಗುವ ಪ್ರಕ್ರಿಯೆ. ಅದಕ್ಕೆ ಹೆಚ್ಚು ಮಹತ್ವ ಕೊಡುವುದು ಬೇಡ ಎಂದರು. ಕಾನೂನು ಪ್ರಕಾರ ನಡೆದಿದೆ: ಎಸ್ಎಸ್ಸಿಪಿ/ ಟಿಎಸ್ಪಿ ಯೋಜನೆ ಹಣ ಗ್ಯಾರಂಟಿಗಳಿಗೆ ಬಳಕೆ ಮಾಡಿರುವ ಆರೋಪದ ಬಗ್ಗೆ ಮಾತನಾಡಿ, ಈ ಹಣ ಆ ಸಮುದಾಯದ ಅಭ್ಯುದಯಕ್ಕೆ ಖರ್ಚು ಮಾಡಲು ಮೀಸಲಿಟ್ಟಿರುವುದು. ವೈಯಕ್ತಿಕವಾಗಿ ಹಸು, ಮನೆ ಕಟ್ಟಿಸಿಕೊಡಬಹುದು, ವಿದ್ಯುತ್ ಸಂಪರ್ಕ ಒದಗಿಸಬಹುದು, ಇನ್ನೇನಾದರೂ ಆರ್ಥಿಕ ಚಟುವಟಿಕೆ ಮಾಡಲಿಕ್ಕೆ ಕಾರ್ಯಕ್ರಮ ರೂಪಿಸಬಹುದು. ಈ ಸಂಬಂಧ ಸಮಾಜ ಕಲ್ಯಾಣ ಸಚಿವ ಮಹದೇವಪ್ಪ ಅವರ ಜೊತೆ ಈಗಾಗಲೇ ಮಾತನಾಡಿದೀನಿ. ಈ ಯೋಜನೆಯಡಿ ಹಣ ಇರುವುದು ಪರಿಶಿಷ್ಟ ಜಾತಿ, ಪಂಗಡದವರ ಜೀವನ ಮಟ್ಟ ಹೆಚ್ಚಿಸುವುದಾಗಿದೆ. ಏನೆ ಇದ್ದರೂ ಕಾನೂನ ಚೌಕಟ್ಟಿನಲ್ಲಿ ಹೋಗುವುದಾಗಿ ಹೇಳಿದರು.