ಬೆಂಗಳೂರು: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಇಂದು ಪ್ರಮಾಣವಚನ ಸ್ವೀಕರಿಸಿದರು.
ನೂತನ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳ ಜತೆ 8 ಮಂದಿ ಸಂಪುಟ ದರ್ಜೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದು, ಈ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕೃತವಾಗಿ ಇಂದಿನಿಂದ ಅಸ್ಥಿತ್ವಕ್ಕೆ ಬಂದಂತಾಗಿದೆ.
ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಮಧ್ಯಾಹ್ನ 12.30ಕ್ಕೆ ಅಪಾರ ಜನಸ್ತೋಮದ ನಡುವೆ ಸಿದ್ದರಾಮಯ್ಯ 31ನೇ ಮುಖ್ಯಮಂತ್ರಿಯಾಗಿ, ಡಿ.ಕೆ. ಶಿವಕುಮಾರ್ ಉಪಮುಖ್ಯಮಂತ್ರಿಯಾಗಿ, ಸಂಪುಟ ದರ್ಜೆ ಸಚಿವರಾಗಿ ಡಾ. ಜಿ. ಪರಮೇಶ್ವರ್, ಕೆ.ಎಚ್. ಮುನಿಯಪ್ಪ, ಕೆ.ಜೆ. ಜಾರ್ಜ್, ಎಂ.ಬಿ. ಪಾಟೀಲ್, ಸತೀಶ್ ಜಾರಕಿಹೊಳಿ, ಪ್ರಿಯಾಂಕಖರ್ಗೆ, ರಾಮಲಿಂಗಾರೆಡ್ಡಿ, ಬಿ.ಝೆಡ್. ಜಮೀರ್ಅಹ್ಮದ್ಖಾನ್ ಇವರುಗಳು ಪ್ರಮಾಣವಚನ ಸ್ವೀಕರಿಸಿದರು.
ರಾಜ್ಯಪಾಲ ಥಾವರ್ಚಂದ್ ಗೆಲ್ಹೋಟ್ ಅವರು ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ 8 ಮಂದಿ ಸಂಪುಟ ದರ್ಜೆ ಸಚಿವರಿಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರತಿಜ್ಞೆಯನ್ನು ಬೋಧಿಸಿದರು.
ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಇಂದು ಅಧಿಕಾರ ಸ್ವೀಕರಿಸಿದ ಸಿದ್ದರಾಮಯ್ಯರವರು 2ನೇ ಬಾರಿಗೆ ಮುಖ್ಯಮಂತ್ರಿ ಪಟ್ಟ ಅಲಂಕರಿಸಿದ್ದು, ಡಿ.ಕೆ ಶಿವಕುಮಾರ್ ಪ್ರಥಮ ಬಾರಿಗೆ ಉಪಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಿದರು.
ಪ್ರಮಾಣ ವಚನ ಕಾರ್ಯಕ್ರಮಕ್ಕೆ ಖರ್ಗೆ, ಪ್ರಿಯಾಂಕ ಗಾಂಧಿ, ಒಂದೇ ಕಾರಿನಲ್ಲಿ ನಾಲ್ವರು ದಿಗ್ಗಜರು ಹೊರಟಿದ್ದಾರೆ. ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ, ಮಲ್ಲಿಕಾರ್ಜುನ್ ಖರ್ಗೆ ಒಂದೇ ಕಾರಿನಲ್ಲಿ ಆಗಮಿಸಿದ್ದಾರೆ.
ಕೊಠಡಿಗೆ ಹೂವಿನಿಂದ ಅಲಂಕಾರ
ವಿಧಾನಸೌಧದಲ್ಲಿ ಕಾಂಗ್ರೆಸ್ ಸರ್ಕಾರದ ಮೊದಲ ಸಚಿವ ಸಂಪುಟ ಸಭೆ ಹಿನ್ನೆಲೆ ಸಚಿವ ಸಂಪುಟ ಸಭೆಯ ಕೊಠಡಿಗೆ ಹೂವಿನಿಂದ ಅಲಂಕಾರ ಮಾಡಲಾಗಿದೆ. ವಿಧಾನಸೌಧದ ಮೂರನೇ ಮಹಡಿಯಲ್ಲಿರುವ ಕ್ಯಾಬಿನೆಟ್ ಹಾಲ್ನಲ್ಲಿ ನೂತನ ಮುಖ್ಯಮಂತ್ರಿಗಳ ಕೊಠಡಿಗೂ ಹೂವಿನಿಂದ ಅಲಂಕಾರ ಮಾಡಲಾಗಿದೆ. ಸಿದ್ದರಾಮಯ್ಯ ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ ಮಾಡ್ತಿದ್ದಂತೆ, ಹಂಗಾಮಿ ಸಿಎಂ ಬಸವರಾಜ್ ಬೊಮ್ಮಾಯಿ ಹೆಸರಿನ ನಾಮಪಲಕ ತೆಗೆದು ನೂತನ ಸಿಎಂ ಸಿದ್ದರಾಮಯ್ಯರ ನಾಮಪಲಕ ಹಾಕಲು ಮುಂದಾಗಿರುವ ಡಿಪಿಎಆರ್ ಅಧಿಕಾರಿಗಳು.
ಇಂದಿರಾ ಕ್ಯಾಂಟಿನ್ ಮೂಲಕ ಜನರಿಗೆ ಸಿಹಿ ಊಟ
2ನೇ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಪ್ರಮಾಣ ವಚನ ಸ್ವೀಕಾರ ಹಿನ್ನೆಲೆ ಇಂದಿರಾ ಕ್ಯಾಂಟಿನ್ ಮೂಲಕ ಜನರಿಗೆ ಸಿಹಿ ಊಟ ಹಾಕಿಸಲಾಗುತ್ತಿದೆ. ಬಾಗಲಕೋಟೆಯ ಇಂದಿರಾ ಕ್ಯಾಂಟೀನ್ ಗಳಲ್ಲಿ ಇಂದು ಜನರಿಗೆ ಹೋಳಿಗೆ ಊಟ ವ್ಯವಸ್ಥೆ ಮಾಡಲಾಗುತ್ತಿದ್ದು, ಇಂದಿರಾ ಕ್ಯಾಂಟಿನ್ ನಲ್ಲಿ ಜನರಿಗೆ ಹೋಳಿಗೆ ಊಟ ಉಣಬಡಿಸ್ತಿರುವ ಮಯೂರ ಮೋರೆ ಟ್ರಸ್ಟ್
ಪದಗ್ರಹಣ ಸಮಾರಂಭಕ್ಕೆ ನಟ ಶಿವರಾಜ್ ಕುಮಾರ್, ದುನಿಯಾ ವಿಜಯ್ , ನಟಿ ರಮ್ಯಾ, ಕಮಲ್ ಹಾಸನ್, ರಾಜೇಂದ್ರ ಸಿಂಗ್ ಬಾಬು, ಮಾಜಿ ಸಚಿವೆ ಉಮಾಶ್ರೀ ಆಗಮಿಸಿದ್ದಾರೆ.