ನವದೆಹಲಿ: ಟ್ವಿಟ್ಟರ್ ಮುಖ್ಯಸ್ಥ ಎಲಾನ್ ಮಸ್ಕ್ ಮೈಕ್ರೋಬ್ಲಾಗಿಂಗ್ ವೆಬ್ಸೈಟ್ ಬಳಕೆದಾರರಿಗೆ ಮತ್ತೊಂದು ಮಹತ್ತರ ಬದಲಾವಣೆಯನ್ನು ಘೋಷಿಸಿದ್ದು, ಈ ಕುರಿತು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಟ್ವಿಟ್ಟರ್ನಲ್ಲಿರುವ ‘ನಿಮಗಾಗಿ’ (ಫಾರ್ ಯೂ) ಪುಟವು ಏಪ್ರಿಲ್ 15ರಿಂದ ವೆರಿಫೈಡ್ ಖಾತೆಗಳನ್ನು ಮಾತ್ರ ಹೊಂದಿರುತ್ತದೆ. ಲೆಗಸಿ ವೆರಿಫಿಕೇಷನ್ ಹೊಂದಿರುವ ಎಲ್ಲಾ ಬಳಕೆದಾರರು ಮುಂದಿನ ತಿಂಗಳು ತಮ್ಮ ಬ್ಯಾಡ್ಜ್ಗಳನ್ನು ಕಳೆದುಕೊಳ್ಳುತ್ತಾರೆ. ಅಲ್ಲದೇ ತಿಂಗಳಿಗೆ 8 ಡಾಲರ್ಗೆ ಟ್ವಿಟ್ಟರ್ ಬ್ಲೂ ನೋಂದಾಯಿಸಿಕೊಳ್ಳುವವರು ಮಾತ್ರ ತಮ್ಮ ಬ್ಲೂ ಟಿಕ್ ಉಳಿಸಿಕೊಳ್ಳುತ್ತಾರೆ ಎಂದು ಎಲಾನ್ ಮಸ್ಕ್ ತಿಳಿಸಿದ್ದಾರೆ.
“ಏಪ್ರಿಲ್ 15ರಿಂದ, ಪರಿಶೀಲಿಸಿದ ಖಾತೆಗಳು ಮಾತ್ರ ನಿಮಗಾಗಿ ಶಿಫಾರಸುಗಳಲ್ಲಿ ಇರಲು ಅರ್ಹವಾಗಿರುತ್ತವೆ. ಸುಧಾರಿತ ಎಐ ಬೋಟ್ ಸಮೂಹಗಳನ್ನು ನಿಭಾಯಿಸಲು ಇದು ಏಕೈಕ ನೈಜ ಮಾರ್ಗವಾಗಿದೆ. ಇಲ್ಲದಿದ್ದರೆ ಇದು ನಿರಾಶಾದಾಯಕ ಸೋಲಿನ ಯುದ್ಧವಾಗಿದೆ. ಮತಗಟ್ಟೆಗಳಲ್ಲಿ ಮತದಾನ ಪರಿಶೀಲನೆಯ ಅಗತ್ಯವಿದೆ. ಅದೇ ಕಾರಣಕ್ಕಾಗಿ ಈ ಪರಿಶೀಲನೆ.” ಎಂದು ಎಲಾನ್ ಮಸ್ಕ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ವಿವರಿಸಿದ್ದಾರೆ.