ಮೈಸೂರು: ನಗರದ ಜೆಎಸ್ಎಸ್ ಮೈಸೂರು ಅರ್ಬನ್ ಹಾತ್ ನಲ್ಲಿ ಗಾಂಧಿ ಶಿಲ್ಪ ಬಜಾರ್ ಅನ್ನು ಡಿ.15ರಿಂದ 24ರವರೆಗೆ ಭಾರತ ಹಸ್ತಶಿಲ್ಪ ಪ್ರದರ್ಶನ, ಮಾರಾಟರವನ್ನು ಆಯೋಜಿಸಲಾಗಿದೆ.
ಈ ಕುರಿತು ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪ್ರೊ.ಮೊರಬದ ಮಲ್ಲಿಕಾರ್ಜುನ, ಭಾರತೀಯ ಹಸ್ತಶಿಲ್ಪ ಕಲೆಯ ಅಭಿವೃದ್ಧಿ, ಏಳಿಗೆ ಮತ್ತು ಅದರ ಉಳಿವಿಗಾಗಿ ಭಾರತ ಸರ್ಕಾರದ ವಸ್ತ್ರ ಮಂತ್ರಾಲಯದ ಕರಕುಶಲ ಅಭಿವೃದ್ಧಿ ಆಯುಕ್ತರ ಕಚೇರಿಯು ರಾಷ್ಟ್ರಮಟ್ಟದ ನೋಡಲ್ ಏಜೆನ್ಸಿಯಾಗಿ ಹಲವು ಕಾರ್ಯಕ್ರಮ ಆಯೋಜನೆಯ ಮೂಲಕ ಅವಿರತವಾಗಿ ಶ್ರಮಿಸುತ್ತಿದೆ. ಕರಕುಶಲ ಕಲೆಯ ಅಭಿವೃದ್ಧಿ, ವಿನ್ಯಾಸ ಹಾಗೂ ಕಲ್ಯಾಣಕ್ಕಾಗಿ ಹಲವಾರು ಯೋಜನೆಗಳನ್ನು ಕಾರ್ಯಗತಗೊಳಿಸುತ್ತಿದೆ. ಕುಶಲಕರ್ಮಿಗಳು ಹಾಗೂ ಅವರಲ್ಲಿರುವ ಕುಶಲ ಕಲೆಗಳು ದೇಶದ ಎಲ್ಲೆಡೆಯ ಕಲಾಸಕ್ತರಿಗೆ ತಲುಪಬೇಕು ಎನ್ನುವ ಕಳಕಳಿ ಹೊಂದಿರುವ ಇಲಾಖೆಯು ಸಾಂಸ್ಕೃತಿಕ ನಗರಿಯಾದ ಮೈಸೂರಿನ ಸಂಸ್ಕೃತಿ ಪ್ರಿಯರಿಗಾಗಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ.
ಕರಕುಶಲ ಅಭಿವೃದ್ಧಿ ಆಯುಕ್ತರ ಕಚೇರಿಯು ಕುಶಲಕರ್ಮಿಗಳಿಗೆ ನೇರ ಮಾರುಕಟ್ಟೆಯನ್ನು ಒದಗಿಸಲು ಪ್ರತಿ ವರ್ಷ ಹಲವಾರು ಮೇಳಗಳನ್ನು ಆಯೋಜಿಸುವ ಮೂಲಕ ಪ್ರದರ್ಶನ ಹಾಗೂ ಮಾರುಕಟ್ಟೆ ವ್ಯವಸ್ಥೆಯನ್ನು ಒದಗಿಸುತ್ತಿದೆ. ಇಂತಹ ಮಹತ್ವದ ಕಾರ್ಯಕ್ರಮಗಳಲ್ಲಿ ಒಂದಾದ ಗಾಂಧಿ ಶಿಲ್ಪ ಬಜಾರ್ ಅನ್ನು ಮೈಸೂರಿನಲ್ಲಿ ಅಯೋಜಿಸಲಾಗುತ್ತಿದೆ.
ದೇಶದ ವಿವಿಧೆಡೆಯಿಂದ ಬಂದ ಹಲವಾರು ಕುಶಲಕರ್ಮಿಗಳಿಗೆ ಮೈಸೂರಿನ ಕಲಾ ಪ್ರೇಮಿಗಳ ಜತೆಗೆ ನೇರ ಮಾರುಕಟ್ಟೆಯ ವೇದಿಕೆಯನ್ನು ಒದಗಿಸುವುದು ಈ ಕಾರ್ಯಕ್ರಮದ ಉದ್ದೇಶ. ಭಾಗವಹಿಸುವ ಕುಶಲಕರ್ಮಿಗಳು ತಮ್ಮ ಕುಲಶಕಲೆಗಳನ್ನು ಗ್ರಾಹಕರ ಅಗತ್ಯ ಮತ್ತು ಅಭಿರುಚಿಯನ್ನು ತಿಳಿದುಕೊಂಡು ಮಾರುಕಟ್ಟೆಗೆ ಬೇಕಾದ ನವೀನ ವಿನ್ಯಾಸದ ವಸ್ತುಗಳನ್ನು ರೂಪಿಸಿಕೊಳ್ಳಲು ಈ ಕಾರ್ಯಕ್ರಮ ಆಯೋಜನೆಗೊಳ್ಳುತ್ತಿದೆ. ದೇಶದ ಎಲ್ಲ ರಾಜ್ಯಗಳಿಂದ ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿ ಪುರಸ್ಕೃತ ಕುಶಲಕರ್ಮಿಗಳು ಸೇರಿ 100 ಕುಶಲಕರ್ಮಿಗಳು, ಕೈಮಗ್ಗ ನೇಕಾರರು ತಮ್ಮ ಉತ್ಕೃಷ್ಟ ಕಲಾವಸ್ತುಗಳನ್ನು ಮೈಸೂರಿನಲ್ಲಿ ನಡೆಯುವ ಪ್ರದರ್ಶನದಲ್ಲಿ ಅನಾವರಣಗೊಳಿಸಲಿದ್ದಾರೆ.
ಮರದ ಕೆತ್ತನೆ, ಶಿಲಾ ಶಿಲ್ಪ, ಕಂಚಿನ ವಿಗ್ರಹಗಳು, ಮರದ ಕುಂದಣ ಕಲೆ, ಮಣ್ಣಿನ ಮಡಿಕೆಗಳು, ಪೇಪರ್, ರತ್ನಗಂಬಳಿ, ಹತ್ತಿ ಜಮಕಾನ, ಇಮಿಟೇಶನ್ ಆಭರಣಗಳು, ಮರದ ಅರಗಿನ ಕಲಾವಸ್ತುಗಳು, ಬಾಟಿಕ್, ಕಲಾಂಕಾರಿ ಚಿತ್ರಕಲೆ, ಚರ್ಮದ ಅಕರ್ಷಕ ವಸ್ತುಗಳು, ತಂಜಾವೂರು, ಮೈಸೂರು ಶೈಲಿಯ ಚಿತ್ರಕಲೆ, ಕಲಾತ್ಮಕ ಚರ್ಮದ ಚಪ್ಪಲಿಗಳು, ಚನ್ನಪಟ್ಟಣದ ಗೊಂಬೆಗಳು, ಕಸೂತಿ ಕಲೆ, ಛತ್ತೀಸಗಢದ ದೊಕ್ರಾ ಕಾರ್ಸ್ಸಿಂಗ್, ಮಧ್ಯಪ್ರದೇಶ ರಾಜ್ಯದ ಮಹೇಶ್ವರಿ, ಚಂದೇರಿ ಸೀರೆಗಳು, ಗುಜರಾತ್ ರಾಜ್ಯದ ಪಟೋಲ ಸೀರೆಗಳು, ಒಡಿಶಾ ರಾಜ್ಯದ ಪಟ್ಟ ಚಿತ್ರ, ಬೆಳ್ಳಿಯ ಸೂಕ್ಷ್ಮ ವಿನ್ಯಾಸ ವಸ್ತುಗಳು, ಶೀತಲ ಪಟ್ಟಿ, ಬಿದಿರು-ಬೆತ್ತದ ವಸ್ತುಗಳು, ಚಿಕನ್ ಎಂಬ್ರಾಯ್ತರಿ, ಮೇಘಾಲಯದ ಬಿದಿರಿನ ಕಲಾತ್ಮಕ ವಸ್ತುಗಳು, ಡ್ರೈ ಪ್ಲವರ್ಗಳು, ಗುಜರಾತಿನ ಕರಕುಶಲ ವಸ್ತುಗಳು ಮತ್ತು ವಸ್ತ್ರಗಳು, ರಾಜಸ್ತಾನದ ಕರಕುಶಲ ಅರಗಿನ ಬಳೆಗಳು ಮತ್ತು ಎಂಬ್ರಾಯಿಡರಿ ವಸ್ತುಗಳು, ಉತ್ತರ ಪ್ರದೇಶದ ಕಲಾತ್ಮಕ ಲೋಹದ ವಸ್ತುಗಳು, ಕಲಾತ್ಮಕ ಕಲ್ಲಿನ ವಸ್ತುಗಳು, ಮುದ್ರಿತ ಜವಳಿ, ಬಿಹಾರದ ಮಧುಬನಿ ಚಿತ್ರಕಲೆ, ಪಂಜಾಬ್ ರಾಜ್ಯದ ಫುಲ್ಕಾರಿ ಬಟ್ಟೆಗಳ, ಅರಗಿನ ಬಳೆಗಳು ಈ ಮೇಳದ ಒಂದೇ ಸೂರಿನಡಿ ಕಲಾಸ್ವಾದ ಮತ್ತು ಖರೀದಿಗೆ ಸಿಗಲಿದೆ ಎಂದು ಹೇಳಿದರು.
ಈ ಬಾರಿ 900 ಕ್ಕೂ ಹೆಚ್ಚು ಮಂದಿ ಆನ್ ಲೈನ್ ನಲ್ಲಿ ವಿವಿಧ ಭಾಗಗಳಿಂದ ಭಾಗವಹಿಸಲು ನೊಂದಣಿ ಮಾಡಿದ್ದರೂ ಈ ಪೈಕಿ 80 ಮಂದಿಗೆ ಅವಕಾಶ ಕಲ್ಪಿಸಲಾಗಿದೆ. ಡಿ.15 ರ ಸಂಜೆ 4 ಕ್ಕೆ ಮೇಳವನ್ನು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನಿದ್ಯದೊಂದಿಗೆ ಸಂಸದ ಪ್ರತಾಪಸಿಂಹ ಉದ್ಘಾಟಿಸಲಿದ್ದು, ಶಾಸಕ ಜಿ.ಟಿ.ದೇವೇಗೌಡ, ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ, ಶರಣಬಸಪ್ಪ ದರ್ಶನಾಪುರ, ತಂಗಡಗಿ ಶಿವರಾಜ್ ಸಂಗಪ್ಪ ಸೇರಿ ಅನೇಕ ಗಣ್ಯರು ಭಾಗವಹಿಸಲಿದ್ದಾರೆ. ಡಿ.25 ರವರೆಗೆ ಪ್ರತಿ ದಿನ 10.30 ರಿಂದ ಸಂಜೆ 9ರವರೆಗೆ ವೀಕ್ಷಣೆಗೆ ಸಿಗಲಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಶಿವನಂಜಸ್ವಾಮಿ, ಸಂಯೋಜನಾಧಿಕಾರಿ ರಾಕೇಶ್ ರೈ ಇದ್ದರು.