ಮೈಸೂರು: ಹದಿನೈದು ದಿನಗಳಾದರೂ ಕೆಡದ ಆಹಾರ ಪದಾರ್ಥ, ನಾಲ್ಕು ದಿನ ಕಳೆದರೂ ತಾಜತನ ಉಳಿಸಿಕೊಳ್ಳುವ ಟಮೋಟಾ, ಸಮುದ್ರದ ಆಳದಲ್ಲಿರುವ ವಸ್ತುವನ್ನು ಕ್ಷಣ ಮಾತ್ರದಲ್ಲಿ ಪತ್ತೆ ಹಚ್ಚಬಹುದಾದ ಆವಿಷ್ಕಾರ ಇಂತಹ ಹತ್ತು ಹಲವು ಯಂತ್ರಗಳು, ಆವಿಷ್ಕಾರಗಳು ಡಿಎಫ್ ಆರ್ ಎಲ್ ನ ಆವರಣಕ್ಕೆ ಹೊಕ್ಕವರ ಆಶ್ಚರ್ಯಕ್ಕೆ ಕಾರಣವಾದವು.
ದೇಶಕ್ಕೆ ಸ್ವಾತಂತ್ರ್ಯ ಬಂದ ಅಮೃತ ಮಹೋತ್ಸವ ಅಭಿಯಾನದ ಅಂಗವಾಗಿ ರಕ್ಷಣಾ ಆಹಾರ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆಯೂ ಆಯೋಜಿಸಿದ್ದ ರಕ್ಷಣಾ ಆಹಾರ ಸಂಶೋಧನಾ ಪ್ರಯೋಗಾಲಯದ ಉತ್ಪನ್ನಗಳು ಮತ್ತು ತಂತ್ರಜ್ಞಾನ ಗಳ ಪ್ರದರ್ಶನ ಹಾಗೂ ಮಾಹಿತಿ ವಿನಿಮಯ ನೋಡುಗರ ಸೆಳೆಯಿತು.
“ ಆತ್ಮ ನಿರ್ಭರ ಭಾರತದ ನಿರ್ಮಾಣಕ್ಕಾಗಿ : ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ವ್ಯವಸ್ಥೆಯ ಬೆಳವಣಿಗೆ ‘ ಎಂಬ ವಿಷಯದೊಂದಿಗೆ ಎಲ್ಲಾ ಡಿ.ಆರ್.ಡಿ.ಓ ಪ್ರಯೋಗಾಲಯದಲ್ಲಿ ಪ್ರದರ್ಶಿಸಲಾಯಿತು.
ಯಾವೆಲ್ಲಾ ವಿಶೇಷತೆ ಲಭ್ಯ: ಡಿಎಫ್ ಆರ್ ಎಲ್ ತನ್ನ ಸಂಶೋಧನೆ ಮೂಲಕ 15 ದಿನಕ್ಕೂ ಹೆಚ್ಚು ಕಾಲ ಬಳಸಬಹುದಾದ ಚಪಾತಿ, ಅಂತೆಯೇ 4 ಡಿಗ್ರಿ ಸೆಲ್ಸಿಯಸ್ ನಲ್ಲೂ ಬಿಸಿ ಮಾಡಬಹುದಾದ ನೈಸರ್ಗಿಕ ಆಹಾರ ಪದಾರ್ಥ, ಐದಕ್ಕೂ ಹೆಚ್ಚು ದಿನ ಕೆಡದಂತೆ ಸಂಗ್ರಹಿಸಿ ಕೊಂಡೊಯ್ಯಬಹುದಾದ ಸ್ಟೋರೇಜ್ ಬ್ಯಾಗ್ ಹಾಗೂ ಎಷ್ಟೇ ಆಳವಾಗಿ ವ್ಯಕ್ತಿ ಇಳಿದರೂ ಅಥವಾ ಆಳದಲ್ಲಿ ಆತನ ವಸ್ತು ಪತ್ತೆ ಮಾಡಬಹುದಾದ ಸಂಶೋಧಿದ ಸಲಕರಣೆಗಳ ಪ್ರದರ್ಶನ ಮಕ್ಕಳಲ್ಲಿ ಕೂತೂಹಲ ಹೆಚ್ಚಿಸಿತು. ಇದೇ ವೇಳೆ ಇಂತಹ ತಂತ್ರಜ್ಞಾನ ನಿತ್ಯದ ಅಡುಗೆಯಲ್ಲೂ ಬಳಸಬಹುದಾದ ಬಗ್ಗೆ ಸಂಸ್ಥೆಯಿಂದಲೇ ಹೆಚ್ಚಿನ ತರಬೇತಿ ನೀಡುವ ಕುರಿತಂತೆಯೂ ಪ್ರದರ್ಶನ ದಲ್ಲಿ ತಿಳಿಸಿಕೊಟ್ಟರು.
ಕಠಿಣ ಪರಿಸರದಲ್ಲಿ ಉಪಯೋಗಿಸುವ ಯುದ್ಧ ಪಡಿತರ , ಅನುಕೂಲಕರ ಆಹಾರ ಅಭಿವೃದ್ಧಿ , ತ್ವರಿತ ಪರೀಕ್ಷಾ ಕಿಟ್ , ಪ್ಯಾಕೇಜಿಂಗ್ ವಸ್ತುಗಳು , ಬಾಹ್ಯಾಕಾಶ ಆಹಾರ ಸಂಶೋಧನೆ ಮತ್ತಿತರ ಕ್ಲಿಷ್ಟಕರ ಯೋಜನೆಗಳಿಗೆ ಆಹಾರ ತಂತ್ರಜ್ಞಾನಗಳನ್ನು ಪ್ರಚಾರ ಪಡಿಸಿದರು. ಡಿಎಫ್ ಆರ್ ಎಲ್ ನ ನಿರ್ದೇಶಕ ಡಾ.ಅನಿಲ್ ದತ್ ಸೆಮ್ರಾಲ್ ಪ್ರದರ್ಶನ ಉದ್ಘಾಟಿಸಿದರು.
ಡೈರೆಕ್ಟರೇಟ್ ಆಫ್ ಪಬ್ಲಿಕ್ ಇಂಟರ್ಫೇಸ್ ನಿರ್ದೇಶಕ ವಿಪಿನ್ ಕುಮಾರ್ ಕೌಶಿಕ್ , ಡಿಎಫ್ ಆರ್ ಎಲ್ ವಿಜ್ಞಾನಿ ಮಧುಕರ್ ಇನ್ನಿತರರು ಉಪಸ್ಥಿತರಿದ್ದರು.