ನಟ ದರ್ಶನ್ ಅವರಿಗೆ ಜೈಲಿನ ಊಟವೇ ಗತಿ ಆಗಿದೆ. ಮನೆ ಊಟ, ಹಾಸಿಗೆ, ಬಟ್ಟೆ ಬೇಕು ಎಂದು ದರ್ಶನ್ ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ವಜಾ ಮಾಡಿದೆ. ಈ ಕುರಿತಂತೆ 24ನೇ ಎಸಿಎಂಎA ಕೋರ್ಟ್ ಇಂದು (ಜು.25) ಆದೇಶ ನೀಡಿದೆ. ಜೈಲೂಟದಿಂದ ಅಜೀರ್ಣ, ಅತಿಸಾರ ಆಗಿದೆ ಎಂದು ಕಾರಣ ನೀಡಿ ದರ್ಶನ್ ಅವರು ಮನೆಯ ಊಟ ತರಿಸಲು ಅನುಮತಿ ಕೇಳಿದ್ದರು. ಜೈಲು ಅಧಿನಿಯಮ ಉಲ್ಲೇಖಿಸಿ ದರ್ಶನ್ ಪರ ವಕೀಲರು ವಾದ ಮಂಡಿಸಿದ್ದರು. ಇದಕ್ಕೆ ಪೊಲೀಸರ ಪರ ವಿಶೇಷ ಅಭಿಯೋಜಕರು ಆಕ್ಷೇಪಣೆ ಸಲ್ಲಿಸಿದ್ದರು. ಇನ್ನೂ ಹಲವು ದಿನಗಳ ಕಾಲ ದರ್ಶನ್ ಜೈಲೂಟ ಮಾಡುವುದು ಅನಿವಾರ್ಯ ಆಗಿದೆ.
ಜೈಲೂಟದಿಂದ ದರ್ಶನ್ಗೆ ಯಾವುದೇ ಸಮಸ್ಯೆ ಆಗಿಲ್ಲ. ಶೂಟಿಂಗ್ ವೇಳೆ ಆದ ಗಾಯದ ನೋವಿನ ಬಗ್ಗೆ ಮಾತ್ರ ವೈದ್ಯರು ಸಲಹೆ ನೀಡಿದ್ದಾರೆ. ಜೈಲಿನ ನಿಯಮಾವಳಿಯಲ್ಲಿ ಮನೆಯೂಟಕ್ಕೆ ಅವಕಾಶವಿಲ್ಲವೆಂದು ಆಕ್ಷೇಪಣೆ ಸಲ್ಲಿಸಲಾಗಿತ್ತು. ಎರಡೂ ಕಡೆ ವಾದ ಆಲಿಸಿರುವ ಜಡ್ಜ್ ವಿಶ್ವನಾಥ್ ಸಿ ಗೌಡರ್ ಈಗ ಆದೇಶ ನೀಡಿದ್ದಾರೆ.
ಕೊಲೆ ಆರೋಪಿಗಳಿಗೆ ಮನೆಯ ಊಟ, ಬಟ್ಟೆ, ಹಾಸಿಗೆ ಪಡೆಯಲು ಅವಕಾಶವಿಲ್ಲ. ಜೈಲು ನಿಯಮಾವಳಿ 728ರಲ್ಲಿ ಮನೆಯ ಊಟ, ಬಟ್ಟೆ, ಹಾಸಿಗೆ ಪಡೆಯಲು ಅವಕಾಶವಿಲ್ಲ. ಹೀಗಾಗಿ ದರ್ಶನ್ ಕೊಲೆ ಆರೋಪಿ ಆಗಿರುವುದರಿಂದ ಈ ಸೌಲಭ್ಯ ಕೊಡಲಾಗುವುದಿಲ್ಲ. ದರ್ಶನ್ಗೆ ಈಗ ಉಳಿದಿರುವ ಮಾರ್ಗ ಹೈಕೋರ್ಟ್ ಮೊರೆ ಹೋಗುವುದು. ಈಗಾಗಲೇ ದರ್ಶನ್ ಸಲ್ಲಿಸಿರುವ ಅರ್ಜಿ ವಿಚಾರಣೆ ಜುಲೈ 29 ಕ್ಕೆ ನಿಗದಿಯಾಗಿದೆ.
ರೇಣುಕಾ ಸ್ವಾಮಿಯ ಹತ್ಯೆ ಪ್ರಕರಣದಲ್ಲಿ ಜೈಲು ಸೇರುವುದಕ್ಕೂ ಮೊದಲು ದರ್ಶನ್ ಅವರ ಜೀವನ ಐಷಾರಾಮಿ ಆಗಿತ್ತು. ಪ್ರೊಟೀನ್ಯುಕ್ತ ಆಹಾರವನ್ನು ಅವರು ಸೇವಿಸುತ್ತಿದ್ದರು. ಆದರೆ ಜೈಲಿನಲ್ಲಿ ಇದಕ್ಕೆ ಅವಕಾಶ ಸಿಕ್ಕಿಲ್ಲ. ಜೈಲಿನ ಊಟದಿಂದ ಅವರಿಗೆ ಕೆಲವು ಆರೋಗ್ಯ ಸಮಸ್ಯೆಗಳು ಎದುರಾಗಿವೆ. ಅಲ್ಲದೇ, ಅವರ ದೇಹದ ತೂಕ ಕೂಡ ಕಡಿಮೆ ಆಗಿದೆ ಎನ್ನಲಾಗಿದೆ. ದರ್ಶನ್? ಮೇಲೆ ಗಂಭೀರ ಆರೋಪ ಇರುವುದರಿಂದ ಮನೆಯೂಟ ಪಡೆಯಲು ಅವಕಾಶ ಸಿಕ್ಕಿಲ್ಲ.