ಶ್ರೀರಂಗಪಟ್ಟಣ:- ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ಶ್ರೀರಂಗಪಟ್ಟಣದಲ್ಲಿ ನೂರಾರು ರೈತ ಮುಖಂಡರು ಮೈಸೂರು – ಬೆಂಗಳೂರು ಹೆದ್ದಾರಿ ತಡೆ ನಡೆಸಿ ಪ್ರತಿಭಟನೆ ನಡೆಸಿದರು.
ರೈತ ಮುಖಂಡ ಕೆ.ಎಸ್.ನಂಜುಂಡೇಗೌಡ ನೇತೃತ್ವದಲ್ಲಿ ಪಟ್ಟಣದ ಕುವೆಂಪು ವೃತ್ತದ ಬಳಿಯ ಹೆದ್ದಾರಿಯಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದ ರೈತರು,ರಾಜ್ಯ ಸರ್ಕಾರ ಹಾಗೂ ರೈತರ ಬಗ್ಗೆ ಕೇವಲವಾಗಿ ಹೇಳಿಕೆ ನೀಡಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ದ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಕನ್ನಂಬಾಡಿ ಅಣೆಕಟ್ಟೆಯಲ್ಲಿ ನೀರಿನ ಮಟ್ಟ ಕಡಿಮೆಯಿದೆ.ಮುಂಗಾರು ಮಳೆ ಕೈಕೊಟ್ಟಿದೆ.ಕೆರೆ ಕಟ್ಟೆಗಳು ಬತ್ತಿ ಹೋಗಿವೆ. ಬೆಳೆದು ನಿಂತ ಬೆಳೆಗಳು ಒಣಗುತ್ತಿವೆ.ಪರಿಸ್ಥಿತಿ ಹೀಗಿದ್ದರೂ, ರಾಜ್ಯದ ರೈತರ ಹಿತ ಕಾಪಾಡದ ರಾಜ್ಯ ಸರ್ಕಾರ ತಮಿಳುನಾಡಿನಿಂದ ಹೆಚ್ಚಿನ ಒತ್ತಡ ಬರುವ ಮುನ್ನವೇ ತಮಿಳುನಾಡಿಗೆ ನೀರು ಹರಿಸುತ್ತಿರುವುದು ಸರಿಯಲ್ಲ.
ಇಲ್ಲಿನ ವಾಸ್ತವದ ಬಗ್ಗೆ ನ್ಯಾಯಾಲಯ ಹಾಗೂ ಕಾವೇರಿ ನೀರು ಹಂಚಿಕೆ ಪ್ರಾಧಿಕಾರಕ್ಕೆ ಸರ್ಕಾರ ಮನವರಿಕೆ ಮಾಡಿಕೊಟ್ಟು, ರಾಜ್ಯದ ಜನ-ಜಾನುವಾರುಗಳ ರಕ್ಷಣೆಗೆ ಮುಂದಾಗಬೇಕು.
ಈ ಬಗ್ಗೆ ಕೂಡಲೇ ಎಚ್ಚೆತ್ತುಕೊಂಡು ತಮಿಳುನಾಡಿಗೆ ಹರಿಸುತ್ತಿರುವ ಕಾವೇರಿ ನೀರನ್ನು ನಿಲ್ಲಿಸದಿದ್ದರೆ ಎಲ್ಲೆಡೆ ರೈತರು ಸರ್ಕಾರಕ್ಕೆ ಬುದ್ದಿ ಕಲಿಸಲಿದ್ದೇವೆ ಎಂದು ಎಚ್ಚರಿಕೆ ನೀಡಿದರು.
ಹಾಗೆಯೇ ರೈತರ ಬಗ್ಗೆ ಹಗುರವಾಗಿ ಮಾತನಾಡಿರುವ ಉಪ ಮುಖ್ಯ
ಮಂತ್ರಿ ಡಿ.ಕೆ.ಶಿವಕುಮಾರ್ ಕೂಡಲೇ ರಾಜ್ಯದ ರೈತರ ಬಳಿ ಬಹಿರಂಗ ಕ್ಷಮೆ ಕೋರಬೇಕು.ಅಧಿಕಾರಕ್ಕೆ ಬಂದು ಕೇವಲ ೩ ತಿಂಗಳಾಗಿದ್ದು, ಅದಾಗಲೇ ಅವರಿಗೆ ಅಧಿಕಾರದ ದರ್ಪ ಹೆಚ್ಚಾಗಿರುವಂತೆ ಕಾಣಿಸುತ್ತಿದೆ ಎಂದು ಡಿಕೆಶಿ ವಿರುದ್ದ ಅಸಮದಾನ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ತಾಲ್ಲೂಕಿನ ವಿವಿಧ ಗ್ರಾಮಗಳ ಸುಮಾರು ೧೦೦ಕ್ಕೂ ಹೆಚ್ಚು ರೈತ ಮುಖಂಡರು ಭಾಗವಹಿಸಿ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಮಿನಿವಿಧಾನ ಸೌಧದ ಮುಂಭಾಗದಲ್ಲಿ ಜಮಾಯಿಸಿ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟಿಸಿದ ಅವರು ಕಾವೇರಿ ನೀರನ್ನು ಕೂಡಲೇ ನಿಲ್ಲಿಸಬೇಕೆಂದು ಅಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು. ಸುಮಾರು ೧೦ ನಿಮಿಷ ಹೆದ್ದಾರಿ ತಡೆ ನಡೆಸಿದ್ದರಿಂದ ವಾಹನ ಸಂಚಾರ ಸ್ಥಗಿತಗೊಂಡು ಪ್ರಯಾಣಿಕರು ಸಂಕಷ್ಟು ಎದುರಿಸಬೇಕಾಯಿತು. ಬಳಿಕ ಪೋಲೀ ಭದ್ರತೆಯೊಂದಿಗೆ ವಾಹನ ಸಂಚಾರ ಎಂದಿನಂತೆ ಸಾಗಿತು.