ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾದ ಹಿನ್ನೆಲೆ ಸಾಂಸ್ಕೃತಿಕ ನಗರಿಯಲ್ಲಿ ಸಂಭ್ರಮದ ವಾತಾವರಣ ನಿರ್ಮಿಸುವ ‘ಯುವ ಸಂಭ್ರಮ’ ಕಾರ್ಯಕ್ರಮವನ್ನು ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಹೆಚ್.ಸಿ.ಮಹದೇವಪ್ಪ ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ಮೈಸೂರು ವಿಶ್ವವಿದ್ಯಾನಿಲಯ ಮಾನಸ ಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ಶುಕ್ರವಾರ ಇಳಿ ಸಂಜೆಯ ಮಬ್ಬಿನಲ್ಲಿ ಗಣ್ಯರು ಹಾಗೂ ಅತಿಥಿಗಳು ನಗಾರಿ, ಕಂಸಾಳೆ, ಡೊಳ್ಳು ಬಾರಿಸುವ ಮೂಲಕ ದಸರಾ ಮಹೋತ್ಸವಕ್ಕೆ ಕಳೆಗಟ್ಟಲಿರುವ ಯುವಸಂಭ್ರಮ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಅದ್ಧೂರಿಯಾಗಿ ಚಾಲನೆ ದೊರಕಿತು.
ಈ ವೇಳೆ ಮಾತನಾಡಿದ ಸಚಿವರು, ಯುವ ಸಂಭ್ರಮ ಸಾಂಸ್ಕೃತಿಕ ಕಾರ್ಯಕ್ರಮವು ಎಂಟು ದಿನಗಳ ಕಾಲ ವಿವಿಧ ಜಿಲ್ಲೆಗಳ 400 ಕಾಲೇಜಿನ ಸುಮಾರು 12 ಸಾವಿರ ವಿದ್ಯಾರ್ಥಿಗಳಿಂದ ನಡೆಯಲಿದೆ. ಅನೇಕ ಉತ್ತಮವಾದ ವಸ್ತುವಿಷಯ ಕುರಿತು ನೃತ್ಯ ರೂಪಕಗಳು ಪ್ರದರ್ಶನಗೊಳ್ಳುವ ಮೂಲಕ ದೇಶಕ್ಕೆ ಉತ್ತಮವಾದ ಸಂದೇಶ ನೀಡಲಿದೆ ಎಂದು ತಿಳಿಸಿದರು.
ದೇಶದ ಜನಸಂಖ್ಯೆಯಲ್ಲಿ ಯುವ ಸಮೂಹ ಶೇ.42 ರಷ್ಟಿದೆ. ದೇಶದ ಭವಿಷ್ಯ ನಿಂತಿರುವುದು ಯುವಕರ ಬದುಕಿನ ಮೇಲೆ. ಅವರ ಬದುಕಿಗೆ ಭದ್ರ ಬುನಾದಿಯನ್ನು ಉತ್ತಮ ಸಿದ್ಧಾಂತದ ಮೇಲೆ ನಿರ್ಮಿಸಬೇಕಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ನಮ್ಮ ದೇಶದ ಚಾರಿತ್ರಿಕ ಹಿನ್ನೆಲೆ, ಸ್ವಾತಂತ್ರ್ಯ ಹೋರಾಟ, ಸಾಂಸ್ಕೃತಿಕ ಬದುಕು, ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಆಶಯದ ಸೈದ್ಧಾಂತಿಕ ಅಡಿಪಾಯದಲ್ಲಿ ಯುವ ಜನರು ಬದುಕನ್ನು ರೂಪಿಸಿಕೊಳ್ಳುವ ಜೊತೆಗೆ ಬುದ್ಧ, ಬಸವ, ಡಾ.ಬಿ.ಆರ್.ಅಂಬೇಡ್ಕರ್ರ ಆಶಯದಂತೆ ದೇಶವನ್ನು ಬಲಿಷ್ಠವಾಗಿ ಕಟ್ಟಬೇಕಾದ ಅನಿವಾರ್ಯತೆ ಇದೆ ಎಂದು ಕರೆ ನೀಡಿದರು.
ಭಾರತೀಯರಾದ ನಾವೆಲ್ಲರೂ ಒಂದೆ. ಎಲ್ಲಾ ಧರ್ಮಗಳ ಆಚಾರ, ವಿಚಾರಗಳು ಇಲ್ಲಿ ಮುಕ್ತವಾಗಿವೆ. ಕಷ್ಟಪಟ್ಟು ಪಡೆದ ಸ್ವಾತಂತ್ರ್ಯ ಹಾಗೂ ನಮಗೆ ನಾವೇ ಅರ್ಪಿಸಿಕೊಂಡಿರುವ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅರ್ಥಪೂರ್ಣವಾಗಿ ಜಾರಿಮಾಡುವ ಮೂಲಕ ಎಲ್ಲರ ಭವಿಷ್ಯ ಮತ್ತು ಹಕ್ಕನ್ನು ರಕ್ಷಣೆ ಮಾಡುವಲ್ಲಿ ಈ ವೇದಿಕೆ ಪ್ರೇರಣೆಯಾಗಲಿ ಎಂದು ಆಶಿಸಿದರು.
ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ನೀಡಿದಂತಹ ಶ್ರೇಷ್ಠವಾದ ಆಡಳಿತ, ಜನಪರವಾದ ನಿರ್ಧಾರಗಳು ದೇಶದ ಎಲ್ಲಾ ಸರ್ಕಾರಗಳಿಗೂ ಮಾದರಿಯಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ನಮ್ಮ ಸರ್ಕಾರ ನಾಡಿನ ಸರ್ವಾಂಗೀಣ ಅಭಿವೃದ್ಧಿಗೆ ಕೆಲಸ ಮಾಡಲು ಬದ್ಧವಿದೆ. ಯುವಕರ ಉತ್ತಮ ಭವಿಷ್ಯದ ನಿರ್ಮಾಣಕ್ಕೂ ನೆರವಾಗಲಿದೆ ಎಂದರು.
ಯುವ ಜನರು ದೇಶ ಕಟ್ಟುವ ಕಾಯದಲ್ಲಿ ತೊಡಗಬೇಕು. ಈ ಯುವ ಸಂಭ್ರಮ ವೇದಿಕೆಯಲ್ಲಿ ಅನೇಕ ಸಂಗೀತ, ವಿವಿಧ ನೃತ್ಯವನ್ನು ಸವಿಯುವುದರ ಜೊತೆಗೆ ಭವಿಷ್ಯದಲ್ಲಿ ಉತ್ತಮ, ಜವಾಬ್ದಾರಿಯುತ ಪ್ರಜೆಗಳಾಗಬೇಕು. ನಮ್ಮ ರಾಷ್ಟ್ರೀಯ ಭಾವೈಕ್ಯತೆ, ಬಹುತ್ವವನ್ನು ರಕ್ಷಣೆ ಮಾಡುವಂತಾಗಿ ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ತಾರಾದಂಪತಿ ವಸಿಷ್ಠಸಿಂಹ ಮತ್ತು ಹರಿಪ್ರಿಯಾ ಆಗಮಿಸಿ ಮಾತನಾಡಿದರು. ಶಾಸಕರಾದ ಕೆ.ಹರೀಶ್ಗೌಡ, ರವಿಶಂಕರ್, ಶ್ರೀವತ್ಸ, ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ, ಮೇಯರ್ ಶಿವಕುಮಾರ್, ಉಪಮೇಯರ್ ಡಾ.ಜಿ.ರೂಪ, ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ಜಿಲ್ಲಾ ಪಂಚಾಯತ್ ಸಿಇಒ ಕೆ.ಎಂ.ಗಾಯಿತ್ರಿ, ನಗರ ಪೊಲೀಸ್ ಆಯುಕ್ತ ರಮೇಶ್ ಬಾನೂತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕಾರ್, ಮೈಸೂರು ವಿಶ್ವವಿದ್ಯಾಲಯದ ಕುಲಸಚಿವರಾದ ವಿ.ಆರ್.ಶೈಲಜಾ, ಯವ ಸಂಭ್ರಮ ಉಪಸಮಿತಿ ಕಾರ್ಯದರ್ಶಿ ಆರ್.ಪ್ರತಾಪ್, ಸಹ ಕಾರ್ಯದರ್ಶಿ ನಿಂಗರಾಜು, ಡಿಸಿಪಿ ಮುತ್ತುರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.