ಮಂಡ್ಯ: ಹಳೆ ಮೈಸೂರು ಭಾಗದ ಜೀವನಾಡಿಯಾಗಿರುವ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್ಎಸ್ ಜಲಾಶಯದ ನೀರಿನ ಮಟ್ಟ ಪ್ರತಿ ದಿನ ಒಂದು ಅಡಿ ಕುಸಿಯುತ್ತಿದೆ. ಇದರಿಂದ ಕೆಲವೇ ದಿನಗಳಲ್ಲಿ ಭಾರೀ ಪ್ರಮಾಣದಲ್ಲಿ ನೀರಿನ ಮಟ್ಟ ಇಳಿಕೆಯಾಗಿದೆ.
ಶುಕ್ರವಾರ 78 ಅಡಿ ಇದ್ದ ಕೆಆರ್ಎಸ್ ಜಲಾಶಯದ ನೀರಿನ ಮಟ್ಟ ಶನಿವಾರ 77 ಅಡಿಗೆ ಕುಸಿದಿದೆ. ದಿನೇ-ದಿನೇ ಭಾರೀ ಪ್ರಮಾಣದಲ್ಲಿ ಡ್ಯಾಂ ನೀರಿನ ಮಟ್ಟ ಕುಸಿಯುತ್ತಿದೆ. ಈ ಹಿನ್ನೆಲೆಯಲ್ಲಿ ರೈತರ ಬೆಳೆಗಳಿಗೆ ಬಿಟ್ಟಿದ್ದ ನೀರನ್ನ ನಿಲ್ಲಿಸಲಾಗಿದೆ. ಮುಂದೆ ಮಳೆ ಬಿದ್ದು ಡ್ಯಾಂ ಕೊಂಚ ಪ್ರಮಾಣದಲ್ಲಿ ಭರ್ತಿಯಾಗುವವರೆಗೆ ಬೆಳೆಗಳಿಗೆ ನೀರು ಬಿಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ.
ಅಲ್ಲದೇ ಜಲಾಶಯದಲ್ಲಿರುವ ನೀರು ಜುಲೈ 2ನೇ ವಾರದವರೆಗೆ ಕುಡಿಯಲು ಬಳಕೆಯಾಗುತ್ತದೆ. ಒಂದು ವೇಳೆ ಉತ್ತಮ ಮಳೆಯಾಗದಿದ್ದಲ್ಲಿ ಕಾವೇರಿ ನೀರು ಅವಲಂಬಿತ ಜನರಿಗೆ ಕುಡಿಯುವ ನೀರಿಗೂ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
124.80 ಗರಿಷ್ಠ ಮಟ್ಟದ ಡ್ಯಾಂನಲ್ಲಿ 77.005 ಅಡಿಯಷ್ಟೇ ನೀರಿದೆ. ಕೆಆರ್ಎಸ್ ಡ್ಯಾಂ 49.452 ಟಿಎಂಸಿ ಗರಿಷ್ಠ ಸಾಮರ್ಥ್ಯ ಹೊಂದಿದ್ದರೂ ಈಗ ಇರೋದು 9.808 ಟಿಎಂಸಿ ನೀರು ಮಾತ್ರ. ಈ ಪೈಕಿ 2.808 ಟಿಎಂಸಿ ಮಾತ್ರ ಬಳಕೆಗೆ ಯೋಗ್ಯವಾಗಿದೆ. ಉಳಿದ 7 ಟಿಎಂಸಿ ನೀರು ಡೆಡ್ ಸ್ಟೋರೇಜ್ ಆಗಿದೆ. ಸದ್ಯ ಜಲಾಶಯಕ್ಕೆ 514 ಕ್ಯೂಸೆಕ್ ನೀರು ಒಳಹರಿವು ಇದ್ದು, 834 ಕ್ಯೂಸೆಕ್ ನೀರು ಡ್ಯಾಂನಿಂದ ಹೊರ ಹೋಗುತ್ತಿದೆ.