ಕಳೆದ ವಾರವಷ್ಟೇ ದೇಶದಾದ್ಯಂತ ರಿಲೀಸ್ ಆಗಿರುವ ತಮಿಳಿನ ಫರ್ಹಾನ್ ಸಿನಿಮಾಗೆ ತಮಿಳುನಾಡಿನಲ್ಲಿ ಭಾರಿ ವಿರೋಧ ವ್ಯಕ್ತವಾಗಿದೆ. ಮುಸ್ಲಿಂ ಸಮುದಾಯಕ್ಕೆ ಈ ಸಿನಿಮಾದಲ್ಲಿ ಅವಮಾನ ಮಾಡಲಾಗಿದೆ ಎನ್ನುವ ಕಾರಣಕ್ಕಾಗಿ ಅಲ್ಲಿನ ಮುಸ್ಲಿಂ ಸಂಘಟನೆಗಳು ಸಿನಿಮಾವನ್ನು ವಿರೋಧಿಸಿವೆ. ಹಾಗಾಗಿ ಚಿತ್ರದಲ್ಲಿ ಪ್ರಮುಖ ಪಾತ್ರಮಾಡಿದ್ದ ನಟಿ ಐಶ್ವರ್ಯ ರಾಜೇಶ್ ಅವರಿಗೆ ಪೊಲೀಸ್ ಭದ್ರತೆ ನೀಡಲಾಗಿದೆ. ಅತ್ತ ದಿ ಕೇರಳ ಸ್ಟೋರಿ ನಟಿ ಅದಾ ಶರ್ಮಾಗೂ ಕೂಡ ಭದ್ರತೆ ನೀಡಲಾಗಿದೆಯಂತೆ.
ಏನಿದು ವಿವಾದ?
ವಿವಾದದ ನಡುವೆಯೂ ದೇಶಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿರುವ ದಿ ಕೇರಳ ಸ್ಟೋರಿ, ಹಲವು ಚಿತ್ರಗಳಿಗೆ ಸ್ಫೂರ್ತಿಯಾಗುತ್ತಿದೆ. ತಮಿಳಿನಲ್ಲೂ ಇಂಥದ್ದೇ ಮಾದರಿಯ ಚಿತ್ರವೊಂದು ರೆಡಿಯಾಗಿದ್ದು, ಈ ಚಿತ್ರ ಕೂಡ ವಿವಾದಕ್ಕೆ ಕಾರಣವಾಗಿದೆ. ಆ ಚಿತ್ರವನ್ನು ತಡೆಯಬೇಕು ಎಂದು ಮುಸ್ಲಿಂ ಸಮುದಾಯ ಆಗ್ರಹಿಸಿದೆ.
ಕೆಲವು ದಿನಗಳ ಹಿಂದೆಯಷ್ಟೇ ರಿಲೀಸ್ ಆಗಿರುವ ತಮಿಳಿನ ಫರ್ಹಾನಾ ಸಿನಿಮಾ ಕೂಡ ಮುಸ್ಲಿಂ ವಿರೋಧ ಧೋರಣೆಯನ್ನು ತೋರುತ್ತಿದೆ. ಹಾಗಾಗಿ ಮೂಲಭೂತವಾದಿಗಳು ಚಿತ್ರವನ್ನು ವಿರೋಧಿಸುತ್ತಿದ್ದಾರೆ. ಹಾಗಂತ ಇದು ಉಗ್ರರ ಕುರಿತಾದ ಸಿನಿಮಾವಲ್ಲ, ಮುಸ್ಲಿಂ ಮಹಿಳೆಯ ಮತ್ತೊಂದು ಮುಖವನ್ನು ಇದು ಅನಾವರಣ ಮಾಡಿದೆ.
ಮುಸ್ಲಿಂ ಮಹಿಳೆಯೊಬ್ಬರು ಬಡತನದ ಕಾರಣದಿಂದಾಗಿ ಲೈಂಗಿಕತೆ ಕುರಿತಾಗಿ ಮಾತನಾಡುವ ಕಾಲ್ ಸೆಂಟರ್ ಸೇರಿಕೊಳ್ಳುತ್ತಾಳೆ. ಅಲ್ಲಿಂದ ಆಕೆ ವೃತ್ತಿಗೆ ಸಂಬಂಧಿಸಿದ ಸಂಕಟಗಳು ಏನು, ಬ್ಲಾಕ್ ಮೇಲರ್ ಒಬ್ಬನ ಕಿರುಕುಳದಿಂದ ಆಕೆ ಹೇಗೆ ಪಾರಾಗುತ್ತಾಳೆ ಹೀಗೆ ಕಥೆಯನ್ನು ಒಳಗೊಂಡಿದೆ. ಈ ಕಥೆಗೆ ಇಂಡಿಯನ್ ನ್ಯಾಷನಲ್ ಲೀಗ್ ಮತ್ತು ಕೆಲ ಮುಸ್ಲಿಂ ಸಂಘಟನೆಗಳು ವಿರೋಧ ವ್ಯಕ್ತ ಪಡಿಸಿವೆ.
ನಾವು ಯಾರ ಮನಸ್ಸಿಗೂ ನೋವನ್ನುಂಟು ಮಾಡಿಲ್ಲ. ಉತ್ತಮವಾದ ಸಂದೇಶವನ್ನು ಹೊಂದಿರುವ ಸಿನಿಮಾ ಇದಾಗಿದೆ. ಯಾರ ವಿರುದ್ಧವೂ ನಾವು ಕಥೆಯನ್ನು ಹೇಳಿಲ್ಲ ಎಂದು ಚಿತ್ರತಂಡ ಹೇಳಿಕೊಂಡಿದ್ದರೂ, ಮುಸ್ಲಿಂ ಸಂಘಟನೆಗಳು ಮಾತ್ರ ಕಿವಿಗೊಟ್ಟಿಲ್ಲ. ಅಂದಹಾಗೆ ಈ ಸಿನಿಮಾವನ್ನು ನೆಲ್ಸನ್ ವೆಂಕಟೇಷನ್ ನಿರ್ದೇಶನ ಮಾಡಿದ್ದರೆ, ಐಶ್ವರ್ಯ ರಾಜೇಶ್ ಮುಖ್ಯಪಾತ್ರ ನಿರ್ವಹಿಸಿದ್ದಾರೆ.