ಬೆಂಗಳೂರು:- ಕನ್ನಡ ಸಿನಿಮಾ ರಂಗದ ಖ್ಯಾತ ನಟಿ ಲೀಲಾವತಿ ಅವರು ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ.
ಹಲವು ದಿನಗಳಿಂದ ವಯೋಸಹಜ ಅನಾರೋಗ್ಯದಿಂದಾಗಿ ಹಾಸಿಗೆ ಹಿಡಿದಿದ್ದ ಲೀಲಾವತಿ ಇಂದು ಅಸುನೀಗಿದ್ದಾರೆ. ಕನ್ನಡದಲ್ಲಿ 400ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಲೀಲಾವತಿ ಇತರೆ ಭಾಷೆಗಳೂ ಸೇರಿದಂತೆ ಒಟ್ಟು 600ಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ.
ದಕ್ಷಿಣ ಕನ್ನಡದ ಬೆಳ್ತಂಗಡಿಯಲ್ಲಿ 1938ರಲ್ಲಿ ಜನಿಸಿದ್ದ ನಟಿ ಲೀಲಾವತಿ ಆರನೇ ವರ್ಷಕ್ಕೆ ತನ್ನ ಪೆÇೀಷಕರನ್ನು ಕಳೆದುಕೊಂಡಿದ್ದರು. ಇದೀಗ ಬಾರದ ಲೋಕಕ್ಕೆ ಪಯಣ ಬೆಳೆಸಿರುವ ಲೀಲಾವತಿ ತಮ್ಮ ಒಬ್ಬನೇ ಮಗ ವಿನೋದ್ರಾಜ್ಅವರನ್ನು ಅಗಲಿದ್ದಾರೆ.
ಚಂಚಲ ಕುಮಾರಿ ಎಂಬ ಚಿತ್ರದಲ್ಲಿ ಸಣ್ಣ ಪಾತ್ರದಲ್ಲಿ ನಟಿಸುವ ಅವಕಾಶ ಪಡೆದ ಲೀಲಾವತಿ ನಾಗ ಕನ್ನಿಕಾ, 1958ರ ಭಕ್ತ ಪ್ರಹ್ಲಾದ, ಮಾಂಗಲ್ಯ ಯೋಗ, ಧರ್ಮ ವಿಜಯ ಹಾಗೂ ರಣಧೀರ ಕಂಠೀರವ ಚಿತ್ರಗಳಲ್ಲಿ ಸಣ್ಣ ಪಾತ್ರಗಳನ್ನು ನಿರ್ವಹಿಸಿದ್ದರು. ಮಹಾಲಿಂಗ ಭಾಗವತರ ಶ್ರೀ ಸಾಹಿತ್ಯ ಸಾಮ್ರಾಜ್ಯ ಡ್ರಾಮಾ ಕಂಪನಿಯಲ್ಲಿಯೂ ಕೆಲಸ ಮಾಡಿದ್ದ ಲೀಲಾವತಿ 1960ರಲ್ಲಿ ತೆರೆಗೆ ಬಂದಿದ್ದ ರಾಣಿ ಹೊನ್ನಮ್ಮ ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕಿಯಾದರು.
ಕನ್ನಡದ ಪ್ರಮುಖ ನಾಯಕ ನಟರ ಜತೆ ನಾಯಕಿಯಾಗಿ ನಟಿಸಿರುವ ಲೀಲಾವತಿ ನಂತರದ ದಿನಗಳಲ್ಲಿ ಪೆÇೀಷಕ ನಟಿಯಾಗಿ ಬಣ್ಣ ಹಚ್ಚಲು ಆರಂಭಿಸಿದ್ದರು.