ಧಾರವಾಡ: ಕಾಂಗ್ರೆಸ್ಗೆ ಕೇವಲ ಮಹಿಳೆಯರಷ್ಟೇ ಅಲ್ಲ ಪುರುಷರೂ ಮತ ಹಾಕಿದ್ದಾರೆ. ನಮಗೂ ಗೃಹಲಕ್ಷ್ಮೀ ಮಾದರಿಯಲ್ಲಿ ಯೋಜನೆಯೊಂದನ್ನು ಮಾಡಿ 2000 ರೂಪಾಯಿ ಸಹಾಯ ಧನ ಕೊಡಿ ಎಂದು ಪುರುಷರ ಒತ್ತಾಯ ಮಾಡಿದ್ದಾರೆ.
ಕಾಂಗ್ರೆಸ್ ನೀಡಿರುವ ಗ್ಯಾರಂಟಿಗಳಲ್ಲಿ ಒಂದಾದ ಮನೆಯೊಡತಿಗೆ 2 ಸಾವಿರ ರೂಪಾಯಿ ಕೊಡುವ ಯೋಜನೆ ಅತ್ತೆಗೆ ನೀಡಬೇಕೋ ಅಥವಾ ಸೊಸೆಗೆ ನೀಡಬೇಕೋ ಎಂಬ ಗೊಂದಲ ಶುರುವಾಗಿದೆ. ಈ ಬೆನ್ನಲ್ಲೇ ಕಾಂಗ್ರೆಸ್ಗೆ ಕೇವಲ ಮಹಿಳೆಯರಷ್ಟೇ ಅಲ್ಲ ಪುರುಷರೂ ಮತ ಹಾಕಿದ್ದಾರೆ. ಮನೆಯೊಡೆಯನಿಗೂ ಮಾಸಿಕ 2 ಸಾವಿರ ರೂಪಾಯಿ ಕೊಡಬೇಕು ಎಂಬ ಒತ್ತಾಯವನ್ನು ಧಾರವಾಡದ ಪುರುಷರ ಗುಂಪು ಸರ್ಕಾರದ ಮುಂದಿಟ್ಟಿದ್ದಾರೆ.
ಯಾಕೆ ಭೇದ ಭಾವ ಮಾಡ್ತೀರಿ
ಈ ಕುರಿತು ಮಾತನಾಡಿದ ಗುಂಪಿನ ಸದಸ್ಯರೊಬ್ಬರು, ” ಬಸ್ನಲ್ಲಿ ಪ್ರಯಾಣಿಸುವ ಮಹಿಳೆಯರಿಗೆ ಮಾತ್ರ ಉಚಿತ ಬಸ್ ಪಾಸ್ ಅಂತಾ ಸರ್ಕಾರ ತಿಳಿಸಿದೆ. ಇದು ಮಹಿಳೆಯರಿಗೆ ಕೊಟ್ಟಂತಹ ದೊಡ್ಡ ಕೊಡುಗೆ. ಆದರೆ, ಮಹಿಳೆಯರು, ಪುರುಷರು ಮತ್ತು ಯುವಕರು ಸೇರಿ ಎಲ್ಲರೂ ಸಮಾನವಾಗಿ ಸರ್ಕಾರಕ್ಕೆ ವೋಟ್ ಮಾಡಿದ್ದೇವೆ. ಈಗ ಮಹಿಳೆಯರು, ಪುರುಷರು ಅಂತಾ ಏಕೆ ಭೇದ ಭಾವ ಮಾಡುತ್ತಿದ್ದೀರಿ ” ಎಂದು ಪ್ರಶ್ನಿಸಿದ್ದಾರೆ.
ಮನೆ ಒಡತಿ ಮತ್ತು ಒಡೆಯನಿಗೆ ಜಗಳಕ್ಕೆ ಹಚ್ಚದೆ ಇಬ್ಬರಿಗೂ ಯೋಜನೆ ನೀಡಿ
ಎಲ್ಲರನ್ನೂ ಸಮಾನವಾಗಿ ನೋಡುತ್ತೇವೆ ಎಂದು ಹೇಳುವ ಕಾಂಗ್ರೆಸ್ ಈಗ ಏಕೆ ಬೇರೆ ಬೇರೆಯಾಗಿ ನೋಡುತ್ತಿದ್ದೀರಿ. ಪುರುಷರಿಗೂ ಫ್ರೀ ಬಸ್ ಪಾಸ್ ಗ್ಯಾರಂಟಿ ಕೊಡಬೇಕು. ಇದಲ್ಲದೇ ಮನೆಯೊಡತಿಗೆ 2000 ರೂಪಾಯಿ ಕೊಡುತ್ತೇವೆ ಎಂದು ಹೇಳಿದ್ದಾರೆ. ಮನೆ ನಡೆಸುವವರು ಮನೆಯ ಯಜಮಾನ. ಅವರಿಗೇಕೆ ಸರ್ಕಾರ 2 ಸಾವಿರ ರೂಪಾಯಿ ಕೊಡಬಾರದು? ಸರ್ಕಾರ ಭೇದ ಭಾವ ಮಾಡದೇ ಮನೆಯಲ್ಲಿ ಜಗಳ ಹಚ್ಚದೇ ಇಬ್ಬರಿಗೂ 2 ಸಾವಿರ ರೂಪಾಯಿ ಕೊಡುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಶನಿವಾರ ಸರ್ಕಾರ ಅಂತಿಮ ನಿರ್ಧಾರ
ಇತ್ತ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಸರ್ಕಾರವು ಶನಿವಾರ ಸಚಿವ ಸಂಪುಟ ಸಭೆ ನಡೆಸಲಿದೆ. ಈ ಸಭೆಯಲ್ಲಿ ಯೋಜನೆಗಳ ಜಾರಿಯಿಂದ ಉಂಟಾಗುವ ಹೊರೆ, ಹಾಕಬೇಕಾದ ನಿಬಂಧನೆಗಳನ್ನು ಆಯಾ ಇಲಾಖೆ ಸಚಿವರ ಜತೆ ಚರ್ಚೆ ನಡೆಸಲಾಗುತ್ತದೆ. ಆ ಬಳಿಕ ಯೋಜನೆಗೆ ಸಚಿವ ಸಂಪುಟ ಅನುಮೋದನೆ ನೀಡಲಾಗಿದೆ. ಇದಾದ ಬಳಿಕ ಇಲಾಖೆವಾರು ಯೋಜನೆಗಳು ಅನುಷ್ಠಾನಗೊಳಲ್ಲಿವೆ.
ಸದ್ಯ ಮೂರು ಗ್ಯಾರಂಟಿ ಮಾತ್ರ ಜಾರಿ
ಕಾಂಗ್ರೆಸ್ ಘೋಷಣೆ ಮಾಡಿದ್ದ ಐದು ಗ್ಯಾರಂಟಿಗಳ ಪೈಕಿ ಸದ್ಯ 200 ಯುನಿಟ್ ಉಚಿತ ವಿದ್ಯುತ್ ನೀಡುವ ಗೃಹ ಜ್ಯೋತಿ, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯ ನೀಡುವ ಶಕ್ತಿ ಹಾಗೂ 10 ಕೆ.ಜಿ ಅಕ್ಕಿ ನೀಡುವ ಯೋಜನೆಯನ್ನು ಅನುಷ್ಠಾನ ಗೊಳಿಸುವ ಸಾಧ್ಯತೆ ಇದೆ. ಗೌರಿ ಹಬ್ಬಕ್ಕೆ ಮಹಿಳೆಯರಿಗೆ 2000 ನೀಡುವ ಗೃಹಲಕ್ಷ್ಮೀ ಸ್ವಾತಂತ್ರ್ಯ ದಿನಾಚರಣೆ ನಿರುದ್ಯೋಗ ಯುವಕರಿಗೆ ಭತ್ಯೆ ನೀಡುವ ಯುವ ನಿಧಿ ಯೋಜನೆ ಜಾರಿಗೆ ತರಲು ಚಿಂತನೆ ನಡೆಸಲಾಗಿದೆ.