ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದೆ. ಮೈಸೂರು ದಸರಾದ ಪ್ರಮುಖ ಆಕರ್ಷಣೆಯಾಗಿರುವ ಜಂಬೂ ಸವಾರಿಗಾಗಿ ದಸರಾ ಗಜಪಡೆ ಬುಧವಾರ ಮೈಸೂರಿಗೆ ಆಗಮಿಸಲಿದೆ. ಮೈಸೂರಿನ ಅರಣ್ಯ ಭವನದ ಆವರಣಕ್ಕೆ ಕ್ಯಾಪ್ಟನ್ ಅಭಿಮನ್ಯು ಹಾಗೂ ತಂಡ ಆಗಮಿಸಲಿದೆ. ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ವೀರನಹೊಸಹಳ್ಳಿಯಲ್ಲಿ ಗಜಪಯಣ ಸಮಾರಂಭ ನಡೆಯಲಿದೆ.
ಬುಧವಾರ ಬೆಳಗ್ಗೆ 10.20ರಿಂದ 10.45ರೊಳಗಿನ ಶುಭ ಮುಹೂರ್ತದಲ್ಲಿ ಗಜಪಡೆಗೆ ಪುಷ್ಪಾರ್ಚನೆ ನಡೆಯಲಿದೆ. ಅರಣ್ಯ ಸಚಿವ ಈಶ್ವರ್ ಖಂಡ್ರೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಡಾ. ಮಹದೇವಪ್ಪ, ಸ್ಥಳೀಯ ಶಾಸಕರು ಭಾಗವಹಿಸಲಿದ್ದಾರೆ.ಮೊದಲ ಹಂತದಲ್ಲಿ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ 9 ಆನೆಗಳು ಆಗಮಿಸಲಿವೆ. ನಂತರ ಎರಡನೇ ಹಂತದಲ್ಲಿ 5 ಆನೆಗಳು ಮೈಸೂರಿಗೆ ಆಗಮಿಸಲಿವೆ. ಹೆಚ್ಚುವರಿಯಾಗಿ 4 ಮೀಸಲು ಆನೆಗಳನ್ನು ಅಧಿಕಾರಿಗಳು ಗುರುತಿಸಿದ್ದಾರೆ. ಅಗತ್ಯವಿದ್ದರೆ ಮಾತ್ರ ಮೀಸಲು ಆನೆಗಳನ್ನು ಕರೆತರಲು ತೀರ್ಮಾನ ಕೈಗೊಳ್ಳಲಾಗಿದೆ. ಆನೆಗಳು, ಮಾವುತರ ವಾಸ್ತವ್ಯಕ್ಕಾಗಿ ಅರಮನೆ ಆವರಣದಲ್ಲಿ ವ್ಯವಸ್ಥೆ ಮಾಡಲಾಗಿದೆ.
ಮೈಸೂರು ದಸರಾಗೆ ಭರ್ಜರಿ ಸಿದ್ಧತೆ ನಡೆಯುತ್ತಿದ್ದು, ಕೆಲವೇ ದಿನಗಳ ಹಿಂದೆ ಮೈಸೂರು ವನ್ಯಜೀವಿ ವಿಭಾಗದ ಡಿಸಿಎಫ್ ಪ್ರಭು ವೀರನಹೊಸಹಳ್ಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.ಈ ಬಾರಿ ಗಜಪಯಣಕ್ಕೆ ವಿಶೇಷ ರೀತಿಯ ರಂಗು ನೀಡುವ ಉದ್ದೇಶ ಹೊಂದಲಾಗಿದೆ. ಹೀಗಾಗಿ ಗಜಪಯಣ ನಡೆಯುವ ಜಾಗದಲ್ಲಿ ವಿಶಿಷ್ಟ ರೀತಿಯ ಅಲಂಕಾರಕ್ಕೆ ತಯಾರಿ ನಡೆದಿದೆ. ವೀರನಹೊಸಹಳ್ಳಿ ಮುಖ್ಯ ದ್ವಾರದ ಬಳಿ ಪೂಜೆ ನಡೆಸುವ ಸ್ಥಳದಲ್ಲಿ ವಿಶೇಷ ಕಮಾನು ನಿರ್ಮಿಸಲಿದ್ದೇವೆ. ನಾಡಹಬ್ಬಕ್ಕೆ ಹೊಸ ಹೊಳಪು ನೀಡುವ ದೃಷ್ಟಿಕೋನದಲ್ಲಿ ಅರಣ್ಯ ಇಲಾಖೆ ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂದು ಪ್ರಭು ತಿಳಿಸಿದ್ದರು.