ಬೆಂಗಳೂರು: ಬೆಂಗಳೂರು ಬಂದ್ ಕರ್ತವ್ಯದಲ್ಲಿದ್ದ ಯಶವಂತಪುರ ಸಂಚಾರ ಠಾಣೆಯ ಪೊಲೀಸರಿಗೆ ಸತ್ತ ಇಲಿ ಬಿದ್ದಿದ್ದ ಆಹಾರ ಪೂರೈಸಲಾಗಿದ್ದು, ಪೊಲೀಸ್ ಹಿರಿಯ ಅಧಿಕಾರಿಗಳ ವಿರುದ್ಧ ಸಿಬ್ಬಂದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು ಬಂದ್ ವೇಳೆ ಅಹಿತಕರ ಘಟನೆಗಳು ನಡೆಯದಂತೆ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ಭದ್ರತೆ ನಿಯೋಜಿಸಲಾಗಿದೆ. ಹೋಟೆಲ್ಗಳು ಬಂದ್ ಇರುವುದರಿಂದ ಕರ್ತವ್ಯದಲ್ಲಿರುವ ಪೊಲೀಸರಿಗೆ, ಆಯಾ ವಿಭಾಗದಿಂದ ಆಹಾರ ಪೂರೈಸಲಾಗಿದೆ.
ಆರ್.ಎಂ.ಸಿ ಯಾರ್ಡ್ ಠಾಣೆ ವ್ಯಾಪ್ತಿಯಲ್ಲಿ ಕರ್ತವ್ಯದಲ್ಲಿದ್ದ ಸಿಬ್ಬಂದಿಗೆ ಪೂರೈಸಲಾದ ರೈಸ್ ಬಾತ್ ಪೊಟ್ಟಣವೊಂದರಲ್ಲಿ ಸತ್ತ ಇಲಿ ಪತ್ತೆಯಾಗಿದೆ. ಇದನ್ನು ನೋಡಿ ಸಿಬ್ಬಂದಿ ಆತಂಕಕ್ಕೆ ಒಳಗಾಗಿದ್ದರು. ನಂತರ, ಆಹಾರ ಪೊಟ್ಟಣಗಳ ಫೋಟೊ ತೆಗೆದು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ.\
ಸತ್ತ ಇಲಿ ಮಿಶ್ರಿತ ಆಹಾರ ನೀಡಿದ್ದ ಪೊಲೀಸ್ ಹಿರಿಯ ಅಧಿಕಾರಿಗಳ ವಿರುದ್ಧ ಜನರು ಸಹ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಹಾರ ಪೂರೈಸಿದ್ದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಪೊಲೀಸರಿಗೆ 180 ಆಹಾರ ಪೊಟ್ಟಣ ಪೂರೈಕೆ ಮಾಡಲಾಗಿತ್ತು. ಈ ಪೈಕಿ ಒಂದು ಪೊಟ್ಟಣದಲ್ಲಿ ಇಲಿ ಪತ್ತೆಯಾಗಿದೆ. ಉಳಿದ ಆಹಾರದಲ್ಲೂ ಸತ್ತ ಇಲಿಯ ಅಂಶ ಇರುವ ಅನುಮಾನವಿತ್ತು. ಹೀಗಾಗಿ, ಎಲ್ಲ ಪೊಟ್ಟಣಗಳನ್ನು ವಾಪಸು ಕಳುಹಿಸಲಾಗಿದೆ’ ಎಂದು ಪೊಲೀಸ್ ಕಾನ್ಸ್ಟೆಬಲ್ವೊಬ್ಬರು ತಿಳಿಸಿದರು.
ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಜಂಟಿ ಕಮಿಷನರ್ ಎಂ.ಎನ್. ಅನುಚೇತ್, ಆಹಾರ ಪೂರೈಕೆ ಹೊಣೆ ಹೊತ್ತಿದ್ದ ಇನ್ಸ್ಪೆಕ್ಟರ್ಗಳಿಗೆ ನೋಟಿಸ್ ನೀಡಿದ್ದಾರೆ. ಆಹಾರ ತಯಾರಿಸಿದ್ದ ಹೋಟೆಲ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವುದಾಗಿ ಹೇಳಿದ್ದಾರೆ.